

ಕಲಬುರಗಿ: ಪ್ರೀತಿಸಿ ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ಅನಸೂಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತನ್ನ ಅತ್ತೆ ಮಗ ಅವಿನಾಶ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಅನಸೂಯಾಳ ವಿವಾಹ ಎರಡು ತಿಂಗಳ ಹಿಂದಷ್ಟೇ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು.
ಮದುವೆಯ ಬಳಿಕ ಗಂಡನೊಂದಿಗೆ ಹಳ್ಳಿಯಲ್ಲಿ ವಾಸಿಸುವುದಕ್ಕೆ ಅನಸೂಯಾ ಬೇಸರಗೊಂಡಿದ್ದಳು ಎನ್ನಲಾಗಿದ್ದು, ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಮದುವೆಯಾದ ನಂತರ ಅನುಸೂಯಾ ತನ್ನ ಗಂಡನೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಳು. ಆದರೆ ಇದರಿಂದಾಗಿ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬದವರು ಹೇಳುತ್ತಾರೆ.
ಅನುಸೂಯಾಗೆ ಮೂವರು ಸಹೋದರಿಯರು ಇದ್ದು, ಅವರು ತಮ್ಮ ಗಂಡಂದಿರೊಂದಿಗೆ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ದೊಡ್ಡ ನಗರಗಳಲ್ಲಿ ನೆಲೆಸಿದ್ದರು. ಸಹೋದರಿಯರು ಮಹಾನಗರಗಳಲ್ಲಿ ಸುಖವಾಗಿ ಬದುಕುತ್ತಿರುವುದನ್ನು ನೆನೆಸಿಕೊಂಡು, ತಾನು ಮಾತ್ರ ಚಿಕ್ಕ ಪಟ್ಟಣದ ಹಳ್ಳಿಯಲ್ಲಿ ವಾಸವಾಗಿರುವುದರ ಬಗ್ಗೆ ಅನುಸೂಯಾ ಪದೇಪದೇ ಬೇಸರ ವ್ಯಕ್ತಪಡಿಸುತ್ತಿದ್ದಳು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Advertisement