

ಮೈಸೂರು: ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಸುದ್ದಿ ವ್ಯಾಪಕ ವೈರಲ್ ಆಗಿರುವಂತೆಯೇ ಅತ್ತ ರ್ಯಾಪಿಡೋ ಬೈಕ್ ಪ್ರಯಾಣಿಕರ ಮೇಲೆ ಆಟೋ ಚಾಲಕರು ದಾಳಿ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಿಲ್ದಾಣದಿಂದ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿಕೊಂಡಿದ್ದ 19ರ ಯುವಕನ ಮೇಲೆ ಸ್ಥಳೀಯ ಆಟೋ ಚಾಲಕರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಥಳಿತದ ವಿಡಿಯೋವನ್ನು ಸಂತ್ರಸ್ಥ ಯುವಕ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಯುವಕನ ಮೇಲಿನ ಹಲ್ಲೆಯನ್ನು ಆತನ ಸಹೋದರಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು, ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಕ್ಕಾಗಿ ತನ್ನ ಸಹೋದರನನ್ನು ಥಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ತಮ್ಮ ಸಹೋದರನ ಮೇಲಿನ ಹಲ್ಲೆ ವಿಡಿಯೋವನ್ನು ಅಪ್ಲೋಡ್ ಮಾಡಿ ಪುಂಡ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಮಹಿಳೆಯ ಪೋಸ್ಟ್ ನಲ್ಲಿ, 'ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ, ನನ್ನ ಸಹೋದರ (19 ವರ್ಷ) ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಕ್ಕೆ ಕೆಲ ಪುಂಡ ಆಟೋ ಚಾಲಕರು ಥಳಿಸಿದ್ದಾರೆ. ಬೈಕ್ ಟ್ಯಾಕ್ಸಿ ಅಗ್ಗದ ಆಯ್ಕೆಯಾಗಿದ್ದರಿಂದ ಅದನ್ನು ಬುಕ್ ಮಾಡಲಾಗಿತ್ತು. ಆದರೆ ಆಟೋದಲ್ಲೇ ಪಯಣಿಸಬೇಕು' ಎಂದು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಆಟೋ ಚಾಲಕರು ಬೈಕ್ ಟ್ಯಾಕ್ಸಿ ಸವಾರನ ಮೇಲೆ ಹಲ್ಲೆ ಮಾಡಿದ್ದು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಸವಾರ ಪ್ರಶ್ನಿಸಿದಾಗ ಯುವಕನ ಮೇಲೆ ಆಟೋ ಚಾಲಕರು ಹಲ್ಲೆ ಮಾಡಿದ್ದಾರೆ. ಈ ವೇಳೆ ಸಂತ್ರಸ್ಥ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಮಹಿಳೆ ಐಸಿರಿ ಭಟ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಈ ಘಟನೆಯಿಂದ ತನಗೆ ಎಷ್ಟು ಆಘಾತವಾಯಿತು ಎಂಬುದನ್ನು ಮಹಿಳೆ ಎತ್ತಿ ತೋರಿಸಿದ್ದಾರೆ.
"ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹುವುಗಳನ್ನು ಬರೆಯುವುದಿಲ್ಲ. ಆದರೆ ಇಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ಅಸಹಾಯಕನಾಗಿದ್ದಾನೆಂದು ನೋಡಿ ನನಗೆ ಆಘಾತವಾಗಿದೆ. ಅದರ ಬಗ್ಗೆ ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.
ಮಹಿಳೆ ಈ ಪೋಸ್ಟ್ ಅನ್ನು ERSS ಕರ್ನಾಟಕ (ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ), ಕರ್ನಾಟಕ ಡಿಜಿ ಮತ್ತು ಐಜಿಪಿ ಮತ್ತು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
Advertisement