

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದ ಮುಂದೆಯೇ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಇಂದು ಮಧ್ಯಾಹ್ನ ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಡಾ. ನಾಗೇಂದ್ರ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲಿದ್ದ ವಿಧಾನಸೌಧ ಪೊಲೀಸರು ತಕ್ಷಣ ಸ್ಪಂದಿಸಿ, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ ಡಾ. ನಾಗೇಂದ್ರ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಶಕ್ತಿ ಕೇಂದ್ರದ ಮುಂದೆ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು?
ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಗುರುತಿಸಿದ್ದಕ್ಕೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಡಾ. ನಾಗೇಂದ್ರಪ್ಪ ಅವರು ವಿಧಾನಸೌಧದ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.
ಡಾ. ನಾಗೇಂದ್ರಪ್ಪ ಮತ್ತು ಪುನೀತ್ ಕೆರೆಹಳ್ಳಿ ಇಬ್ಬರೂ ನಗರದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ತೋರಿಸಿದ್ದರು. ಈ ಹಿನ್ನಲೆಯಲ್ಲಿ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಅದಾದ ನಂತರ ಸೂಲದೇವನಹಳ್ಳಿ ಪೊಲೀಸರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ ಅವರು ಮನನೊಂದು ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷ ಸೇವಿಸುವುದನ್ನು ಗಮನಿಸಿದ ವಿಧಾನಸೌಧ ಪೊಲೀಸರು ತಕ್ಷಣ ವಿಷದ ಬಾಟಲಿಯನ್ನು ಕಿತ್ತುಕೊಂಡು, ಡಾ. ನಾಗೇಂದ್ರಪ್ಪ ಅವರನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು, ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement