

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ದೆಹಲಿಯಿಂದ ಕರೆಗಳು ಬರುತ್ತಿದ್ದು, ಕೇಂದ್ರದ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ವಿಧಾನಸಭೆಯಲ್ಲಿ ಇಂದು ನೀಡಿದ ಹೇಳಿಕೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಣ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ಫೋನ್ ಟ್ಯಾಪಿಂಗ್ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲವೆಬ್ಬಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ "ಫೋನ್ ಕದ್ದಾಲಿಕೆ ಸರ್ಕಾರ" ಎಂದು ಕರೆದ ಬಿಜೆಪಿ ಶಾಸಕರು, ಲೋಕಭವನ ಮತ್ತು ರಾಜ್ಯಪಾಲರಿಗೆ ಬಂದ ಫೋನ್ ಕರೆಗಳ ಮಾಹಿತಿ ಸಚಿವ ಹೆಚ್. ಕೆ. ಪಾಟೀಲ್ ಅವರಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ವೇಳೆ ಈ ಗದ್ದಲ, ಗೊಂದಲ ಉಂಟಾಯಿತು.
ಚರ್ಚೆ ಮಧ್ಯೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ರಾಜ್ಯಪಾಲ ಗೆಹ್ಲೋಟ್ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆಯೂ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಸಂಪೂರ್ಣ ಭಾಷಣ ಓದದೆ ಇರುವ ನಿದರ್ಶನಗಳು ಇವೆ. 2011ರ ಜನವರಿಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಒತ್ತಾಯದ ಮೇರೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಭಾಷಣ ಓದದೆ ಸದನದಿಂದ ಹೊರ ನಡೆದಿದ್ದರು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್, ಹಾಲಿ ರಾಜ್ಯಪಾಲರಿಗೆ ದೆಹಲಿಯಿಂದ ಕರೆಗಳು ಬರುತ್ತಿವೆ. ಆ ಕರೆಗಳಂತೆ ಸೂಚನೆಯಂತೆ ರಾಜ್ಯಪಾಲರು ಪೂರ್ಣ ಭಾಷಣವನ್ನು ಓದಲಿಲ್ಲ, ನೀವು ಹಿಂದಿನ ಘಟನೆಯ ಬಗ್ಗೆ ಮಾತನಾಡಿದರೆ, ನಾವು ಈಗ ಅದರ ಬಗ್ಗೆ ಮಾತನಾಡಬೇಕಾಗುತ್ತದೆ ಎಂದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಕಾನೂನು ಸಚಿವರು ಗಂಭೀರ ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರಿಗೆ ದೆಹಲಿಯಿಂದ ಬರುವ ಕರೆಗಳನ್ನು ತಿಳಿಯಲು ಸರ್ಕಾರ ಫೋನ್ ಟ್ಯಾಪಿಂಗ್ ಮಾಡುತ್ತಿದೆ ಎಂದು ಆರೋಪಿಸಿದರು. ಸುರೇಶ್ ಕುಮಾರ್ ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕರು, ಸರ್ಕಾರ ಲೋಕಭವನದ ಫೋನ್ ಟ್ಯಾಪಿಂಗ್ ಮಾಡುತ್ತಿದೆ? ಎಂದು ಪ್ರಶ್ನಿಸಿದರು. ಇದು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಕಾನೂನು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅವರಿಗೆ ಕೇಶವ ಕೃಪದಿಂದ ಫೋನ್ ಬರುತ್ತದೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಸುರೇಶ್ ಕುಮಾರ್ ಹಾಗೂ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರ, ರಾಜ್ಯಪಾಲರ ಫೋನ್ ಕದ್ದಾಲಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕ ಆರ್ ಅಶೋಕ ಕೂಡ ಫೋನ್ ಕದ್ದಾಲಿಕೆ ಆರೋಪವನ್ನು ಸಮರ್ಥಿಸಿಕೊಂಡರು.
ರಾಜ್ಯಪಾಲರಿಗೆ ಕೇಂದ್ರದಿಂದ ಕರೆಗಳು ಬರುತ್ತಿರುವ ಬಗ್ಗೆ ಕಳೆದ ವಾರ ಮಾಡಿದ್ದ ಮೊದಲ ಆರೋಪಕ್ಕೆ ಇಲ್ಲಿಯವರೆಗೆ ರಾಜ್ಯಪಾಲರಿಂದ ಅಥವಾ ಕೇಂದ್ರದಿಂದ ಏಕೆ ಸ್ಪಷ್ಟನೆ ನೀಡಿಲ್ಲ ಎಂದು ಎಚ್.ಕೆ. ಪಾಟೀಲ್ ಪ್ರಶ್ನಿಸಿದರು. ದೆಹಲಿಯಲ್ಲಿ ಗೃಹ ಸಚಿವಾಲಯ ಏನು ಮಾಡುತ್ತಿದೆ? ರಾಜ್ಯಪಾಲರು ಮತ್ತು ಗೃಹ ಸಚಿವಾಲಯದ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂಬ ಬಗ್ಗೆ ಪತ್ರಿಕಾ ಹೇಳಿಕೆಯನ್ನಾದರೂ ಹೊರಡಿಸಬೇಕಲ್ಲವೇ?" ಎಂದು ಪ್ರಶ್ನಿಸಿದರು.
ಪಾಟೀಲ್ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳು ಲೋಕಭವನ ಮತ್ತು RSS ಕಚೇರಿಯ ಫೋನ್ ಕದ್ದಾಲಿಕೆಯಾಗಿರುವುದನ್ನು ಸಾಬೀತುಪಡಿಸುತ್ತದೆ ಎಂದು ಅಶೋಕ್ ಹೇಳಿದರು.
ನಮ್ಮ ಫೋನ್‌ಗಳನ್ನೂ ಕದ್ದಾಲಿಕೆ ಮಾಡಲಾಗುತ್ತಿದೆಯೇ? ಇದು ಫೋನ್ ಕದ್ದಾಲಿಕೆ ಸರ್ಕಾರ ಎಂದು ಬಿಜೆಪಿ ತೀವ್ರ ವಾಗ್ವಾದ ಮತ್ತು ಗದ್ದಲ ಮುಂದುವರಿದಾಗ, ಸ್ಪೀಕರ್ ಯುಟಿ ಖಾದರ್ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.ಬಳಿಕ ಸದನ ಸಮಾವೇಶಗೊಂಡಾಗ ಸರ್ಕಾರ ಕ್ಷಮೆಕೇಳಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿಲ್ಲ ಎಂದು ಹೇಳಿದರು.
Advertisement