

ಮೈಸೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಕ ಘಟಕವೊಂದರ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದರು.
ಇದೀಗ ಮೈಸೂರಿನಲ್ಲಿ ದೆಹಲಿ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದು, ಕರ್ನಾಟಕ ಡ್ರಗ್ಸ್ ತಯಾರಿಕೆಗೆ ಸೇಫ್ ಜೋನ್ ಆಗ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ.
ಹೌದು. ನಗರದ ಹೆಬ್ಬಾಳದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕದ ಮೇಲೆ ಈ ದಾಳಿ ನಡೆದಿದೆ. ಈ ಘಟಕ ಬೋರೇಗೌಡ ಎಂಬ ವ್ಯಕ್ತಿಗೆ ಸೇರಿದ್ದು, 1 ವರ್ಷದ ಹಿಂದೆ ಗಣಪತ್ ಪಾಲ್ ಎಂಬ ಗುಜರಾತ್ ಮೂಲದ ವ್ಯಕ್ತಿಗೆ ಫೆನಾಯಿಲ್ ತಯಾರಿಕೆಗಾಗಿ ಕಟ್ಟಡ ಬಾಡಿಗೆ ಕೊಟ್ಟಿದ್ದರಂತೆ.
ಆದರೆ, ಗುಜರಾತ್ ನಲ್ಲಿ ಇತ್ತೀಚೆಗೆ ಡ್ರಗ್‌ಪೆಡ್ಲರ್ ವೊಬ್ಬ ಸಿಕ್ಕಿಬಿದ್ದಿದ್ದ. ಅವನಿಗೂ ಗಣಪತ್ ಲಾಲ್ ಗೂ ಸಂಬಂಧ ಇದೆ ಎನ್ನಲಾಗಿದೆ. ಹೀಗಾಗಿ ಈ ಫೆನಾಯಿಲ್ ತಯಾರಿಕಾ ಘಟಕದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿಯ ವೇಳೆ ಪಿನಾಯಿಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳು ಪತ್ತೆಯಾಗಿವೆ. ಡಿಟರ್ಜೆಂಟ್, ಸೋಡಾ, ಉಪ್ಪು ಸೇರಿದಂತೆ ವಿವಿಧ ರಾಸಾಯನಿಕ ಕಚ್ಚಾ ವಸ್ತುಗಳು ಲ್ಯಾಬ್‌ನಲ್ಲಿ ಸಂಗ್ರಹವಾಗಿದ್ದವು. ಆದರೆ, ಸದ್ಯದ ಮಟ್ಟಿಗೆ ಯಾವುದೇ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕಾರ್ಯಾಚರಣೆ ನಡೆದ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಸುಂದರ್ ರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಲ್ಯಾಬ್ ಇದ್ದು, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತನಿಖೆ ಮುಂದುವರಿದಿದೆ.
Advertisement