

ಬೆಂಗಳೂರು/ನವದೆಹಲಿ: ಕರ್ನಾಟಕ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮತ್ತು ಅವರ ಸಹಚರರು ರಾಷ್ಟ್ರವ್ಯಾಪ್ತಿಯ 'ಅಕ್ರಮ' ಆನ್‌ಲೈನ್ ಬೆಟ್ಟಿಂಗ್ ಜಾಲದ 'ಮಾಸ್ಟರ್ ಮೈಂಡ್' ಎಂದು ಜಾರಿ ನಿರ್ದೇಶನಾಲಯ (ED) ಹೇಳಿದ್ದು ಹಣ ವರ್ಗಾವಣೆ ತನಿಖೆಯ ಭಾಗವಾಗಿ 177 ಕೋಟಿ ರೂ. ಮೌಲ್ಯದ ಹೊಸ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 320 ಕೋಟಿ ರೂ.ಗಳಿಗೆ ತಲುಪಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (PMAL) ಅಡಿ ಕೆಲವು ಚರ ಆಸ್ತಿಗಳೊಂದಿಗೆ ಕೃಷಿ ಮತ್ತು ವಸತಿ ಪ್ಲಾಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ತನಿಖಾ ಸಂಸ್ಥೆ ತಾತ್ಕಾಲಿಕ ಆದೇಶವನ್ನು ಹೊರಡಿಸಿದೆ ಎಂದು ED ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ಆಸ್ತಿಗಳು ಯಾರಿಗೆ ಸೇರಿವೆ ಎಂಬುದನ್ನು ಅದು ನಿರ್ದಿಷ್ಟಪಡಿಸಿಲ್ಲ.
ಕರ್ನಾಟಕದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 51 ವರ್ಷದ ಶಾಸಕ ವೀರೇಂದ್ರ ಪಪ್ಪಿಯನ್ನು 2025ರ ಆಗಸ್ಟ್ ನಲ್ಲಿ ಸಿಕ್ಕಿಂನಲ್ಲಿ ಇಡಿ ಬಂಧಿಸಿತ್ತು. ಅಲ್ಲಿ ಅವರು ಕ್ಯಾಸಿನೊವನ್ನು ಗುತ್ತಿಗೆ ಪಡೆಯಲು ವ್ಯಾಪಾರ ಪ್ರವಾಸಕ್ಕೆ ಹೋಗಿದ್ದರು. ಸದ್ಯ ಪಪ್ಪಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಇಡಿ ಪಪ್ಪಿಯನ್ನು ಪ್ರಕರಣದಲ್ಲಿ 'ಪ್ರಮುಖ ಆರೋಪಿ' ಎಂದು ಕರೆದಿತ್ತು.
ಕೆಸಿ ವೀರೇಂದ್ರ ಮತ್ತು ಅವರ ಸಹಚರರು ರಾಷ್ಟ್ರವ್ಯಾಪಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲದ ಹಿಂದಿನ ಮಾಸ್ಟರ್‌ಮೈಂಡ್‌ಗಳು ಎಂಬುವದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇಡಿ ಆರೋಪಿಸಿದೆ. ಕೇಂದ್ರ ಸರ್ಕಾರವು ಕಳೆದ ವರ್ಷ ಭಾರತದಲ್ಲಿ ಆನ್‌ಲೈನ್ ರಿಯಲ್-ಮನಿ ಗೇಮಿಂಗ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
Advertisement