

ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಜ.29ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ.
ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಪ್ರಕ್ರಿಯೆ ಆರಂಭವಾದಾಗ ಬಿಜೆಪಿ ಮಾಜಿ ಶಾಸಕ ಬಿಜೆಪಿಯ ಬೆಳ್ಳಿ ಪ್ರಕಾಶ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಗಲಿತರ ಮಧ್ಯೆ ಒಮ್ಮತ ಮೂಡದ ಕಾರಣ ಯಾರೂ ಅರ್ಜಿ ಸಲ್ಲಿಸಲಿಲ್ಲ. ಕೊನೆಗೆ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಸಹರಿಸಲು ಬೆಳ್ಳಿ ಪ್ರಕಾಶ್ ಸಮ್ಮತಿಸಿ, ನಾಮಪತ್ರ ವಾಪಸ್ ಪಡೆದರು. ಹಾಗಾಗಿ, ಚುನಾವಣೆಯನ್ನು ಮುಂದೂಡಲಾಯಿತು.
ಸಿದ್ದರಾಮಯ್ಯ ಬಣದಿಂದ ಕೆ.ಎನ್. ರಾಜಣ್ಣ ಮತ್ತೊಮ್ಮೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ಬಣದ ನಾಯಕರು ತಾವು ಆಗುತ್ತೇವೆಂದು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಸಿಎಂ ಡಿಸಿಎಂ ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬೈಯ್ಯಾಪುರ ಸಹ ನಾಮಪತ್ರ ಸಲ್ಲಿಸಿದ್ದರು. ಎದುರಾಳಿ ಬಣವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ನಿರ್ದೇಶಕರು ನಾಮಪತ್ರ ಸಲ್ಲಿಸಬಹುದು ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಅಷ್ಟರಲ್ಲಿ ನಿರ್ದೇಶಕರಿಗೆ ಕರೆ ಮಾಡಿದ ಸಿಎಂ ಸಿದ್ದರಾಮಯ್ಯ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂತರ ಬೆಳ್ಳಿ ಪ್ರಕಾಶ್ ಹಾಗೂ ಬೈಯ್ಯಾಪುರ ಇಬ್ಬರು ತಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡಿದ್ದಾರೆ.
ಅಧ್ಯಕ್ಷ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋದರ ಸಂಬಂಧಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಹಾಗೂ ಬಿಜೆಪಿಯ ಉಚ್ಚಾಟಿತ ಶಾಸಕ ಶಿವರಾಮ ಹೆಬ್ಬಾರ್ ಅವರು ಕಣ್ಣಿಟ್ಟಿದ್ದಾರೆ.
ಬ್ಯಾಂಕಿಗೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಮೂರು ದಿನಗಳ ಹಿಂದೆ ಚಹಾ ಕೂಟ ಏರ್ಪಡಿಸಿದ್ದರು. ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು.
ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಚುನಾವಣೆ ದಿಢೀರ್ ಮುಂದೂಡಿಕೆಯಾಗಿರುವ ಕುರಿತು ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ಶಾಸಕ ರಾಜೇಂದ್ರ ರಾಜಣ್ಣ ತೀವ್ರ ಅಸಮಾಧಾನ ಹೊರಹಾಕಿದ್ದು, ನಮ್ಮದೇ ಸರ್ಕಾರವಿದ್ದರೂ ಯಾವುದೋ ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಸ್ತಕ್ಷೇಪದ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅಪೆಕ್ಸ್ ಬ್ಯಾಂಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋರಂ ಕೊರತೆಯ ನೆಪದಲ್ಲಿ ಚುನಾವಣೆ ಮುಂದೂಡಲಾಗಿದೆ.
ನಮ್ಮದೇ ಸರ್ಕಾರವಿದ್ದರೂ ಯಾವುದೋ ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ. ಸುರ್ಜೇವಾಲ ಅವರು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು ಎಂಬ ಮಾಹಿತಿಯಿದೆ. ಬಹುಶಃ ಅವರಿಗೆ ಸಹಕಾರಿ ಕ್ಷೇತ್ರ ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವಿಲ್ಲ ಎನಿಸುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ರಾಜೇಂದ್ರ ರಾಜಣ್ಣ ಹೇಳಿದರು.
ರಾಜಣ್ಣ ಅವರು ನೇರವಾಗಿ ಮಾತನಾಡುವ ಗುಣದವರು, ಅದಕ್ಕಾಗಿಯೇ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ ಮುಂದಿನ ದಿನಗಳಲ್ಲಿ ನಿರ್ದೇಶಕರ ಬೆಂಬಲ ಇರುವವರೇ ಅಧ್ಯಕ್ಷರಾಗಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
Advertisement