VB-G RAM G ಕಾಯ್ದೆ ಮೂಲಕ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ; ಆಡಳಿತದಲ್ಲಿ ಯತೀಂದ್ರ ಹಸ್ತಕ್ಷೇಪ ನೋಡಿಲ್ಲ: ಡಿ.ಕೆ ಶಿವಕುಮಾರ್

ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಅವರು ಬಹಳ ಹಿರಿಯ ಮಂತ್ರಿಗಳು. ಸ್ವಾಭಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಯಾವ ಸಮಸ್ಯೆ ಕಂಡಿಲ್ಲ. ನಮಗೆ ಈ ವಿಚಾರ ಮಾಧ್ಯಮಗಳ ಮೂಲಕ ನನಗೆ ಈಗ ತಿಳಿಯಿತು.
Dk Shivakumar
ಡಿ.ಕೆ ಶಿವಕುಮಾರ್
Updated on

ಶಿವಮೊಗ್ಗ: ಕೇಂದ್ರ ಬಿಜೆಪಿ ಸರ್ಕಾರ ವಿಬಿ ಗ್ರಾಮ್ ಜಿ ನೂತನ ಕಾಯ್ದೆ ಮೂಲಕ ಮಹಾತ್ಮ ಗಾಂಧಿ ಹಾಗೂ ಕಾರ್ಮಿಕರ ಬದುಕನ್ನು ಸಾಯಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಶಿವಮೊಗ್ಗ ಸರ್ಕಿಟ್ ಹೌಸ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದರು. ಮನರೇಗಾ ವಿಚಾರದ ಹೋರಾಟ ಮುಂದುವರಿಯುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತವಾಗಿ ಮನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ವಿಚಾರದಲ್ಲಿ ಕಾಯ್ದೆಗಳನ್ನು ಯಾವ ರೀತಿ ಹಿಂಪಡೆದರೋ ಅದೇ ರೀತಿ ಇದನ್ನು ಹಿಂಪಡೆಯಬೇಕು.

6-7 ಸಾವಿರ ಕೋಟಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿತ್ತು. ಕಾರ್ಮಿಕರಿಗೆ ಉದ್ಯೋಗದ ಹಕ್ಕು ನೀಡಲಾಗಿತ್ತು, ಪಂಚಾಯ್ತಿ ಸದಸ್ಯರೇ ತಮ್ಮ ವ್ಯಾಪ್ತಿಯಲ್ಲಿ ಯಾವ ಕೆಲಸ ಆಗಬೇಕು ಎಂದು ತೀರ್ಮಾನ ಮಾಡುತ್ತಿದ್ದರು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿದರೆ ಅವರಿಗೆ ವೇತನ ನೀಡುವ ಅವಕಾಶ ಕಲ್ಪಿಸಲಾಗಿತ್ತು.

ಆಶ್ರಯ ಮನೆ, ಜಮೀನು ಮಟ್ಟ ಮಾಡುವ, ಇಂಗುಗುಂಡಿ ನಿರ್ಮಾಣಕ್ಕೆ ಕೂಲಿ ನೀಡಲಾಗುತ್ತಿತ್ತು. ಈ ಹಕ್ಕುಗಳನ್ನು ಕಸಿದು, ಇನ್ನು ಮುಂದೆ ದೆಹಲಿಯಿಂದ ಯಾವ ಕೆಲಸ ಆಗಬೇಕು ಎಂದು ತೀರ್ಮಾನಿಸಲಾಗುವುದು. ಮನರೇಗಾ ಯೋಜನೆ ಮೂಲಕ ನನ್ನ ಕ್ಷೇತ್ರದಲ್ಲಿ 54 ಸಾವಿರಕ್ಕೂ ಹೆಚ್ಚು ದನದ ಕೊಟ್ಟಿಗೆ ಕಟ್ಟಿಸಿದ್ದೇನೆ. ಒಂದೇ ವರ್ಷ 250 ಕೋಟಿ ವೆಚ್ಚ ಮಾಡಲಾಗಿದೆ. ನೂರಾರು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ನಾನು ಹಣ ಹೊಡೆದಿದ್ದೇನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ದೆಹಲಿಯಿಂದ ತಂಡ ಕಳುಸಿಹಿ ತನಿಖೆ ಮಾಡಿಸಿತ್ತು.

Dk Shivakumar
ಮನ್ರೇಗಾ ಬದಲು VB-G RAM G ಜಾರಿಗೆ ತಂದಿದ್ದು ಏಕೆ: ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಕೊಟ್ಟ ಕಾರಣ ಹೀಗಿದೆ...

ನಂತರ ಈಶ್ವರಪ್ಪನವರೇ ಶಿಫಾರಸ್ಸು ಮಾಡಿ ನಮ್ಮ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರನ್ನು ದೆಹಲಿಗೆ ಕರೆಸಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತಂದ ಕ್ಷೇತ್ರ ಎಂದು ಪ್ರಶಸ್ತಿ ನೀಡಿದರು” ಎಂದರು.

ಹೊಸ ಕಾಯ್ದೆಯಿಂದ ಕಾರ್ಮಿಕರಿಗೆ ಸಂಕಷ್ಟ ಎದುರಾಗಲಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಯಾವ ಭರವಸೆ ನೀಡಲಿದೆ ಎಂದು ಕೇಳಿದಾಗ, “ನಾವು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ನೀಡಲು ಆಗುವುದಿಲ್ಲ, ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕಾಯ್ದೆ ಅನುಸಾರ ಯಾವ ಮಾರ್ಗಸೂಚನೆ ನೀಡುತ್ತಾರೆ ಕಾದು ನೋಡಬೇಕು” ಎಂದು ತಿಳಿಸಿದರು.

ರಾಜ್ಯದ ತೆರಿಗೆ ಹಣವನ್ನು ಜಾಹೀರಾತಿನ ಮೂಲಕ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಜಾಹೀರಾತು ನೀಡಿರುವುದರಲ್ಲಿ ತಪ್ಪೇನಿದೆ? ಮನರೇಗಾ ಯೋಜನೆ ಹೇಗೆ ಪ್ರಯೋಜನವಾಗುತ್ತಿತ್ತು, ಈಗ ನೂತನ ಕಾಯ್ದೆಯಿಂದ ಆಗುವ ಅನಾನುಕೂಲಗಳ ಬಗ್ಗೆ ನಮ್ಮದೇ ಆದ ಶೈಲಿಯಲ್ಲಿ ಜನರಿಗೆ ತಿಳಿಸುತ್ತೇವೆ. ನಾನು ರಂಗೋಲಿ ಸ್ಪರ್ಧೆಯನ್ನು ವೀಕ್ಷಣೆ ಮಾಡುವಾಗ ಗಣೇಶ ಚಿತ್ರದ ಮೇಲೆ ಸಾಗಿದೆ ಎಂದು ಬಿಜೆಪಿ ದಳದವರು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಮಾಡಲು ಅವರದ್ದೂ ಒಂದೆರಡು ರೂಪಾಯಿ ಖರ್ಚಾಗಿರುತ್ತದೆಯಲ್ಲವೇ? ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ಪ್ರಚಾರ ಮಾಡುತ್ತಾರೆ” ಎಂದರು.

ಕೆ.ಜೆ. ಜಾರ್ಜ್ ಅವರು ಸಿಎಂ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಅವರು ಬಹಳ ಹಿರಿಯ ಮಂತ್ರಿಗಳು. ಸ್ವಾಭಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಯಾವ ಸಮಸ್ಯೆ ಕಂಡಿಲ್ಲ. ನಮಗೆ ಈ ವಿಚಾರ ಮಾಧ್ಯಮಗಳ ಮೂಲಕ ನನಗೆ ಈಗ ತಿಳಿಯಿತು. ವಿರೋಧ ಪಕ್ಷದವರು ಏನಾದರೂ ಹೇಳುತ್ತಿರುತ್ತಾರೆ. ಅವರು ಹೇಳುವುದೆಲ್ಲ ಸತ್ಯ ಎಂದು ತಿಳಿಯಲು ಆಗುವುದಿಲ್ಲ” ಎಂದು ತಿಳಿಸಿದರು.

Dk Shivakumar
ಮನ್ರೇಗಾ ಯೋಜನೆ: ಮಹಿಳೆಯರ ಭಾಗವಹಿಸುವಿಕೆಯಲ್ಲಿ ಮಂಡ್ಯ ಜಿಲ್ಲೆಗೆ 2ನೇ ಸ್ಥಾನ

ಯತೀಂದ್ರ ಅವರ ಹಸ್ತಕ್ಷೇಪ ವಿಚಾರವಾಗಿ ಕೇಳಿದಾಗ, “ಕಾರ್ಯಕರ್ತರು ಬಂದು ಮನವಿ ಕೊಟ್ಟಾಗ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿಕೊಂಡಿರುತ್ತಾರೆ. ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ನನ್ನ ಬಳಿ ಎಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಮನವಿ ನೀಡುತ್ತಾರೆ.

ನಾನು ಎಲ್ಲಾ ಇಲಾಖೆ ಜೊತೆ ಮಾತನಾಡುತ್ತೇನೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಅವರು ಆಡಳಿತ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡುವುದನ್ನು ನಾನು ನೋಡಿಲ್ಲ” ಎಂದರು. ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಲ್ಲ, ಯಾರೂ ಅರ್ಜಿ ಹಾಕಿಲ್ಲ. ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.

ಗುತ್ತಿಗೆದಾರರ ಸಂಘದವರು ಏಳು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ಗುತ್ತಿಗೆದಾರ ಸಂಘದವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಅವರು ನನ್ನ ಬಳಿ ಬಂದು ಹೇಳಿಕೊಂಡ ಸಮಸ್ಯೆಗಳನ್ನು ನಾನು ಬಗೆಹರಿಸಿದ್ದೇನೆ” ಎಂದರು.

ಬೆಳಗಾವಿಯಲ್ಲಿ 400 ಕೋಟಿ ನಾಪತ್ತೆಯಾಗಿದ್ದು, ಇದು ಕಾಂಗ್ರೆಸ್ ಹಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಕೈಯಲ್ಲೇ ಸಿಬಿಐ ಇದೆಯಲ್ಲಾ ತನಿಖೆ ಮಾಡಿಸಲಿ. ಯಾರ ಹಣ, ಯಾವ ಹಣ ನಮಗೆ ಈ ವಿಚಾರ ಗೊತ್ತಿಲ್ಲ. ತನಿಖೆ ಮಾಡಿ ಹೇಳಲಿ. ಸುಮ್ಮನೆ ಆರೋಪ ಮಾಡಿದರೆ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ” ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com