ಸಿ.ಜೆ ರಾಯ್ ಸಾವು ಪ್ರಕರಣದ ತನಿಖೆಯಾಗಲಿ; ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ 'ಕಿರುಕುಳ' ಕಾರಣ: ಪ್ರಿಯಾಂಕ್ ಖರ್ಗೆ; Video
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಸಾವಿಗೆ ಆದಾಯ ತೆರಿಗೆ ಇಲಾಖೆಯ 'ಸಂಪೂರ್ಣ ಕಿರುಕುಳ'ವೇ ಕಾರಣ ಎಂದು ಆರೋಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ಎಸ್‌ಎಂಇಗಳು, ಎಂಎಸ್‌ಎಂಇಗಳು, ವ್ಯಕ್ತಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಗುರಿಯಾಗಿಸಲು ಕೇಂದ್ರವು ಐಟಿ, ಇ.ಡಿ ಮತ್ತು ಜಿಎಸ್‌ಟಿ ಇಲಾಖೆಗಳನ್ನು ಬಳಸುತ್ತಿದೆ ಎಂದಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲೇ ಪಿಸ್ತೂಲ್‌ನಿಂದ ಎದೆಗೆ ಗುಂಡುಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ (ಡಾ. ಚಿರಿಯಂಡತ್ ಜೋಸೆಫ್ ರಾಮ್) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 'ಇದು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಕಿರುಕುಳವಲ್ಲದೆ ಬೇರೇನೂ ಅಲ್ಲ, ಇದು ದೇಶದಾದ್ಯಂತ ನಡೆಯುತ್ತಿದೆ. ಕರ್ನಾಟಕದಲ್ಲಿ ಇದು ಮೂರನೇ ಅಥವಾ ನಾಲ್ಕನೇ ಪ್ರಕರಣವಾಗಿದೆ. ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ಎಸ್‌ಎಂಇಗಳು, ಎಂಎಸ್‌ಎಂಇಗಳು, ವ್ಯಕ್ತಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕಿರುಕುಳ ನೀಡಲು ಐಟಿ, ಇ.ಡಿ ಮತ್ತು ಜಿಎಸ್‌ಟಿ ಇಲಾಖೆಗಳನ್ನು ಬಳಸಲಾಗುತ್ತಿದೆ' ಎಂದು ತಿಳಿಸಿದರು.
'ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕಿರುಕುಳ ನೀಡುವ ಸಾಧನಗಳಾಗಿ ಪರಿವರ್ತಿಸಲಾಗಿದೆ. ಕಾನೂನುಬದ್ಧವಾಗಿ ಜೀವನೋಪಾಯ ಕಂಡುಕೊಳ್ಳುವ ಜನರು ಇಂತಹ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದು ಕೇವಲ ರಾಜಕೀಯ ಆರೋಪವಲ್ಲ. ರಾಯ್ ಅವರ ಕುಟುಂಬ ಕೂಡ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ. ಯಾವುದೇ ಪ್ರಕರಣವಿರಲಿ, ನಾವು ಅದನ್ನು ತನಿಖೆ ಮಾಡುತ್ತೇವೆ. ಅಲ್ಲಿ ಹಾಜರಿದ್ದ ಐಟಿ ಅಧಿಕಾರಿಗಳನ್ನು ಸಹ ನಾವು ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ, 'ಡಿಸೆಂಬರ್‌ನಲ್ಲಿ ಅವರ (ಸಿಜೆ ರಾಯ್) ಕಂಪನಿ ಮೇಲೆ ಐಟಿ ಇಲಾಖೆ ದಾಳಿ ಮಾಡಿತು. ಚಾರ್ಜ್‌ಶೀಟ್ ಸಲ್ಲಿಸಲು ಅವರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಫೆಬ್ರುವರಿ 4ಕ್ಕೆ ಗಡುವು ನಿಗದಿಪಡಿಸಲಾಗಿತ್ತು ಮತ್ತು ಅವರು ಮೂರು ದಿನಗಳ ಹಿಂದಷ್ಟೇ ದುಬೈನಿಂದ ಬಂದಿದ್ದರು. ಅವರ ಹೇಳಿಕೆಯನ್ನು ದಾಖಲಿಸಲು ಅಧಿಕಾರಿಗಳು (ಆದಾಯ ತೆರಿಗೆ) ಅವರ ಕಚೇರಿಗೆ ಹೋದರು. ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ರಾಯ್ ಸಹಕರಿಸಿದ್ದರು' ಎಂದು ತಿಳಿಸಿದರು.
'ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಕಾನ್ಫಿಡೆಂಟ್ ಗ್ರೂಪ್ (ಸಿಜೆ ರಾಯ್) ಅಧ್ಯಕ್ಷರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. SOCO ಮತ್ತು FSL ತಂಡಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

