'ಅಯ್ಯೋ ಫಾರ್ಮ್ ಹೇಗೆ ಭರ್ತಿ ಮಾಡ್ಬೇಕು ಗೊತ್ತಾಗ್ತಿಲ್ಲ, ಗ್ಯಾರಂಟಿ ಯೋಜನೆ ಕಳಕೊಳ್ತೀವಾ ಅಂತ ಭಯ ಆಗ್ತಿದೆ': ನಾಗರಿಕರಿಗೆ SIR ಫುಲ್ ಕನ್ಫ್ಯೂಷನ್

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಐದು ದಿನಗಳನ್ನು ಪೂರ್ಣಗೊಳಿಸಿದರೂ, ನಾಗರಿಕರು ಮತ್ತು ಬಿಎಲ್‌ಒಗಳು ಇಬ್ಬರೂ ಗೊಂದಲದಲ್ಲಿ ಸಿಲುಕಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
SIR process
ಎಸ್ ಐಆರ್ ಪ್ರಕ್ರಿಯೆ
Updated on

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಐದು ದಿನಗಳನ್ನು ಪೂರ್ಣಗೊಳಿಸಿದರೂ, ನಾಗರಿಕರು ಮತ್ತು ಬಿಎಲ್‌ಒಗಳು ಇಬ್ಬರೂ ಗೊಂದಲದಲ್ಲಿ ಸಿಲುಕಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ನಾಗರಿಕರು ಸಾಮಾನ್ಯವಾಗಿ ವ್ಯಕ್ತಪಡಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ, ಅರ್ಜಿ ನಮೂನೆಗಳು ಕನ್ನಡದಲ್ಲಿರುವುದರಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2002ರಲ್ಲಿ ನಡೆದಿದ್ದ ಹಿಂದಿನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ವಿವರಗಳನ್ನು ಕೇಳಿರುವ ಕಾಲಮ್‌ಗಳಲ್ಲಿ ಏನು ಭರ್ತಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹಲವರು ಹೇಳಿದ್ದಾರೆ. ಕೊನೆಯ ಎಸ್‌ಐಆರ್ 2002ರಲ್ಲಿ ನಡೆದಿದ್ದು, ಅದರ ಬಳಿಕ 2004ರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆದಿದ್ದವು.

ಮತ್ತೊಂದು ಆತಂಕಕಾರಿ ವಿಷಯವೆಂದರೆ, ಬಿಎಲ್‌ಒಗಳು ಮತ್ತು ಬೂತ್ ಮಟ್ಟದ ಏಜೆಂಟ್‌ಗಳು (BLA) ಕೂಡ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಏನು ಭರ್ತಿ ಮಾಡಬೇಕು ಎಂದು ನಾನು ಬಿಎಲ್‌ಒ ಅವರನ್ನು ಕೇಳಿದಾಗ, ಅವರಿಗೆ ಸ್ಪಷ್ಟತೆ ಇಲ್ಲದ ಕಾರಣ ಆ ಕಾಲಮ್ ನ್ನು ಖಾಲಿ ಬಿಡಿ ಎಂದು ಹೇಳಿದರು. ಅಪೂರ್ಣ ಅರ್ಜಿ ಸಲ್ಲಿಸುವುದರಿಂದ ಇಡೀ ಪ್ರಕ್ರಿಯೆಯೇ ವ್ಯರ್ಥವಾಗುತ್ತದೆ ಎಂದು ತಾವರೆಕೆರೆಯ ನಿವಾಸಿ ಸುಮಲತಾ ಹೇಳಿದರು.

ಒಬ್ಬ ಬಿಎಲ್‌ಒ, ಅರ್ಜಿಯನ್ನು ಹೇಗೆ ಭರ್ತಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ನಾಗರಿಕರು ಚುನಾವಣಾ ಆಯೋಗ ಪ್ರಕಟಿಸಿರುವ ಆನ್‌ಲೈನ್ ವಿಡಿಯೊಗಳನ್ನು ನೋಡಬೇಕು. ಅರ್ಜಿಗಳನ್ನು ಈಗ ಪಡೆದು ನಂತರ ಸಲ್ಲಿಸಬಹುದು. ಅದಕ್ಕೆ ಒಂದು ತಿಂಗಳ ಕಾಲಾವಕಾಶವಿದೆ ಎಂದು ಹೇಳಿದರು.

ಇನ್ನೋರ್ವ ಬಿಎಲ್‌ಒ, ನಾವೂ ಅಸಹಾಯಕರಾಗಿದ್ದೇವೆ. ನಮ್ಮ ಮೇಲ್ವಿಚಾರಣೆ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಜನರ ಅನುಮಾನಗಳನ್ನು ನಿವಾರಿಸಲು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಆರ್‌.ಆರ್‌.ನಗರದ ನಿವಾಸಿ ಭುವಣ್ಣ, ಕೆಲವು ಕಾಲಮ್‌ಗಳನ್ನು ಖಾಲಿ ಬಿಟ್ಟರೆ ಏನಾಗುತ್ತದೆ ಎಂದು ಬಿಎಲ್‌ಒಗಳು ಮತ್ತು ಬಿಎಲ್‌ಎಗಳನ್ನು ಪ್ರಶ್ನಿಸಿದಾಗ, ಕಳೆದ ವಿಧಾನಸಭೆ ಚುನಾವಣೆಯ ಮಾಹಿತಿಯ ಆಧಾರದಲ್ಲಿ ಭರ್ತಿ ಮಾಡಿ. ಬಿಎಲ್‌ಒಗಳ ಬಳಿ ಆ ಮಾಹಿತಿ ಇದೆ ಎಂದು ಉತ್ತರಿಸಿದರು. ನಾನು ಅರ್ಜಿಯಲ್ಲಿ ತಪ್ಪು ಮಾಡಲು ಬಯಸುವುದಿಲ್ಲ. ತಪ್ಪಾದರೆ ಮತ್ತೊಂದು ಅರ್ಜಿ ಪ್ರತಿಯೂ ಲಭ್ಯವಿಲ್ಲ. ಹೆಚ್ಚು ತಿದ್ದುಪಡಿಗಳಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆಯಿದೆ ಎಂದು ಭುವಣ್ಣ ಆತಂಕ ವ್ಯಕ್ತಪಡಿಸಿದರು.

SIR process
ಬಾಂಗ್ಲಾದೇಶಿಯರನ್ನು ಮತದಾರರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ; EC ಕೂಡಲೇ ಮಧ್ಯಪ್ರವೇಶಿಸಬೇಕು: R ಅಶೋಕ್-Video

ಎಸ್‌ಐಆರ್: ನಿವಾಸಿಗಳು, ಬಿಎಲ್‌ಒಗಳು ಗೊಂದಲದಲ್ಲಿ

ಯಶವಂತಪುರದ ನಿವಾಸಿ ಶಬಾನಾ, ಅರ್ಜಿಯಲ್ಲಿನ ವಿವರಗಳು ಸರಿಯಾಗಿರದಿದ್ದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಕಳೆದುಕೊಳ್ಳುವ ಭೀತಿ ವ್ಯಕ್ತಪಡಿಸಿದರು. ನನ್ನ ಕುಟುಂಬ ಹಾಗೂ ನಮ್ಮ ಸುತ್ತಮುತ್ತಲಿನವರು ಎಲ್ಲರೂ ಅರ್ಜಿಯೊಂದಿಗೆ ಸಲ್ಲಿಸಲು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ನಮಗೆ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಾಗಬಾರದು ಎಂದರು.

ಶಿವಾಜಿನಗರದ ಬಿಎಲ್‌ಒ ಅಭಿಲಾಷ್ ಕುಮಾರ್ ಜಿ.ಕೆ., ಪ್ರತಿಯೊಬ್ಬರ ಸಮಸ್ಯೆಯೂ ವಿಭಿನ್ನವಾಗಿದೆ. ಅರ್ಜಿಗಳಲ್ಲಿ ಯಾವುದೇ ತಪ್ಪು ಆಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಿಎಲ್‌ಎಗಳು ಮತ್ತು ಸ್ವಯಂಸೇವಕರ ಸಹಾಯವನ್ನೂ ಪಡೆಯಲಾಗುತ್ತಿದೆ ಎಂದು ಹೇಳಿದರು.

ಹಲವು ಪ್ರದೇಶಗಳಲ್ಲಿ ನೋಂದಾಯಿತ ಬಿಎಲ್‌ಎಗಳ ಬದಲಿಗೆ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ದಿನಗೂಲಿ ಗುತ್ತಿಗೆ ಕಾರ್ಮಿಕರನ್ನು ಸಹಾಯಕ ಬಿಎಲ್‌ಎಗಳಾಗಿ ನಿಯೋಜಿಸಲಾಗಿದೆ. ಕೆಲವರು ಕಾಂಗ್ರೆಸ್ ಹಾಗೂ ಬಿಜೆಪಿ ಗುರುತಿನ ಚೀಟಿಗಳನ್ನು ಧರಿಸಿದ್ದರೆ, ಇನ್ನೂ ಕೆಲವರು ಯಾವುದೇ ಗುರುತು ಧರಿಸಿರಲಿಲ್ಲ. ನಾಗರಿಕರು ಸ್ಪಷ್ಟನೆ ಕೇಳಿದಾಗ ಕೆಲವರು ಬೆದರಿಕೆ ಹಾಕಿದ ಘಟನೆಗಳೂ ವರದಿಯಾಗಿವೆ. ಸಮುದಾಯ ಭವನಗಳು, ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ಸ್ಥಳಗಳು, ಮದುವೆ ಸಮಾರಂಭಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿಗಳನ್ನು ವಿತರಿಸಲಾಗುತ್ತಿದೆ.

ನನ್ನ ಮಗ ಮತ್ತು ಸೊಸೆಗೆ ಎಸ್‌ಐಆರ್ ಅರ್ಜಿಗಳು ಬಂದಿವೆ. ಆದರೆ ನನಗೂ ನನ್ನ ಪತಿಗೂ ಬಂದಿಲ್ಲ. ಬಂದಿದ್ದ ಬಿಎಲ್‌ಒ ಅವರನ್ನು ಕೇಳಿದಾಗ, ಇನ್ನೊಬ್ಬರು ಬರುತ್ತಾರೆ ಎಂದರು. ಆದರೆ ಆ ಇನ್ನೊಬ್ಬ ಬಿಎಲ್‌ಒ ಯಾರು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮತಗಟ್ಟೆ ಬದಲಾಗಿದ್ದರಿಂದ ನಮ್ಮ ಅರ್ಜಿಗಳು ಅವರ ಬಳಿ ಇಲ್ಲ ಎಂದು ಹೇಳಿದರು ಎಂದು ಒಎಂಬಿಆರ್ ಲೇಔಟ್‌ನ ನಿವಾಸಿ ಬಿಂದು ಜೆ. ಆತಂಕ ವ್ಯಕ್ತಪಡಿಸಿದರು.

ಬಾಣಸವಾಡಿಯ ನಿವಾಸಿ ಸುಮತಿ, ನಾವು ವಾಸಿಸುವ ಅಪಾರ್ಟ್‌ಮೆಂಟ್ 2002ರಲ್ಲಿ ಇರಲಿಲ್ಲ. ನಾವು ಹಲವು ಬಾರಿ ಮನೆ ಬದಲಾಯಿಸಿದ್ದೇವೆ. ಎಸ್‌ಐಆರ್ ಅರ್ಜಿಗಳನ್ನು ಎಲ್ಲಿಂದ ಪಡೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಹಳೆಯ ಮತದಾರರ ಗುರುತಿನ ಚೀಟಿಗಳಲ್ಲಿರುವ ಕಾಗುಣಿತ ದೋಷಗಳು ಹಾಗೂ ಹೊಸದಾಗಿ ತಿದ್ದುಪಡಿ ಮಾಡಿಸಿರುವ ಗುರುತಿನ ಚೀಟಿಗಳ ವಿವರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಜನರಲ್ಲಿ ಗೊಂದಲವಿದೆ. ಬಿಎಲ್‌ಒಗಳು ತಮ್ಮ ಪರವಾಗಿ ಕನ್ನಡದಲ್ಲಿ ಅರ್ಜಿ ಭರ್ತಿ ಮಾಡುವಾಗ ಕಾಗುಣಿತ ತಪ್ಪುಗಳಾಗಬಹುದೆಂಬ ಆತಂಕವೂ ವ್ಯಕ್ತವಾಗಿದೆ.

ಬಿಎಲ್‌ಒಗಳೂ ಸಹ ತೀವ್ರ ಒತ್ತಡದಲ್ಲಿದ್ದು, ಕೆಲವರು ಕಣ್ಣೀರಿಟ್ಟಿದ್ದಾರೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಕೆಲಸ ಮಾಡಲು ಮನಸ್ಸೇ ಇಲ್ಲ. ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಅವಸರದ ತರಬೇತಿ ನೀಡಲಾಯಿತು. ದೊಡ್ಡ ಸಭಾಂಗಣದಲ್ಲಿ ದೂರ ನಿಂತ ವ್ಯಕ್ತಿಯೊಬ್ಬರು ಮಾತನಾಡಿದರು. ಅವರ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ನನ್ನ ಸ್ವಂತ ಅರ್ಜಿಯನ್ನೇ ಹೇಗೆ ಭರ್ತಿ ಮಾಡಬೇಕೆಂದು ನನಗೆ ಸ್ಪಷ್ಟವಾಗಿಲ್ಲ. ಇತರರಿಗೆ ಹೇಗೆ ಸಹಾಯ ಮಾಡಲಿ ಎಂದು ಬಾಣಸವಾಡಿಯ ಬಿಎಲ್‌ಒ ಒಬ್ಬರು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಎಲ್‌ಒ ಒಬ್ಬರು ಅರ್ಜಿಗಳನ್ನು ತ್ವರಿತವಾಗಿ ವಿತರಿಸಿ ಅಲ್ಲಿಂದ ತೆರಳಲು ಆತುರದಲ್ಲಿದ್ದರು. ಇದಕ್ಕೆ ಕಾರಣ ಕೇಳಿದಾಗ, ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಎಸ್‌ಐಆರ್ ಕರ್ತವ್ಯದಲ್ಲಿದ್ದೇನೆ. ನಾನು ಸರ್ಕಾರಿ ಶಾಲೆಯ ಶಿಕ್ಷಕಿ. ಮಧ್ಯಾಹ್ನದ ಊಟದ ವಿರಾಮ ಮುಗಿಯುವ ಮೊದಲು ಶಾಲೆಗೆ ಹಿಂತಿರುಗಿ ಹಾಜರಾತಿಗೆ ಸಹಿ ಮಾಡಬೇಕು. ಇಲ್ಲವಾದರೆ ಒಂದು ದಿನದ ವೇತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳು ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ಮುದ್ರಿಸಿದ್ದಾರೆ. ಕೆಲವು ಕಾಲಮ್‌ಗಳನ್ನು ಖಾಲಿ ಬಿಡುವುದು ಹಾಗೂ 2002ರ ಎಸ್‌ಐಆರ್ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಸಮಸ್ಯೆಯಾಗಿರುವುದು ನಿಜ. ಅರ್ಜಿ ಭರ್ತಿ ಮಾಡುವ ಬಗ್ಗೆ ಅನುಮಾನವಿದ್ದರೆ ಮತದಾರರ ಸಹಾಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಯಾವುದೇ ಕಾಲಮ್ ಖಾಲಿ ಬಿಟ್ಟರೂ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ಅಧಿಕಾರಿಯೊಬ್ಬರು, 2002ರಲ್ಲಿ ಎಪಿಕ್ (EPIC) ಗುರುತಿನ ಚೀಟಿಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಆದ್ದರಿಂದ ಹಲವರ ಬಳಿ ಆ ವಿವರಗಳಿಲ್ಲದಿರಬಹುದು. ಆದರೆ ಅದು ಸಮಸ್ಯೆಯಲ್ಲ. ಬಿಎಲ್‌ಒಗಳು ಅಗತ್ಯ ಮಾಹಿತಿಯನ್ನು ನಮೂದಿಸಿ, ಅರ್ಜಿ ಭರ್ತಿಗೆ ಸಹಾಯ ಮಾಡಿ, ದೋಷಗಳನ್ನು ತಪ್ಪಿಸಲು ಅದನ್ನು ಇಂಗ್ಲಿಷ್‌ನಲ್ಲಿ ಡಿಜಿಟಲೀಕರಿಸುತ್ತಾರೆ. 2002ರ ಮತದಾರರ ಪಟ್ಟಿಯ ಮಾಹಿತಿಯನ್ನು ಮ್ಯಾಪಿಂಗ್ ವೇಳೆ ಈಗಾಗಲೇ ಸಂಗ್ರಹಿಸಿದ್ದು, ಅರ್ಜಿ ಸಂಗ್ರಹಿಸುವಾಗ ಅದನ್ನು ನವೀಕರಿಸಲಾಗುತ್ತದೆ ಎಂದು ಹೇಳಿದರು.

ವಿಳಾಸ ಬದಲಾಗಿರುವವರ ಅರ್ಜಿಗಳು ಅವರು ಕೊನೆಯದಾಗಿ ಮತ ಚಲಾಯಿಸಿದ ಮತಗಟ್ಟೆಯ ವ್ಯಾಪ್ತಿಯಲ್ಲೇ ಲಭ್ಯವಿರುತ್ತವೆ. ಇಂತಹವರು ಇ-ಸಹಿಯೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಕಾಗುಣಿತ ತಿದ್ದುಪಡಿಗೆ ಸಂಬಂಧಿಸಿದಂತೆ, ಸಣ್ಣ ಪ್ರಮಾಣದ ಕಾಗುಣಿತ ವ್ಯತ್ಯಾಸಗಳು ಹಾಗೂ ಹೆಸರಿನ ಮೊದಲಕ್ಷರಗಳ ಪೂರ್ವಪ್ರತ್ಯಯ ಅಥವಾ ಉತ್ತರಪ್ರತ್ಯಯವನ್ನು ಸ್ವೀಕರಿಸುವಂತೆ ತಂತ್ರಾಂಶವನ್ನು ನವೀಕರಿಸಲಾಗಿದೆ ಎಂದೂ ಅವರು ತಿಳಿಸಿದರು.

ವಾರಾಂತ್ಯದಲ್ಲೂ ಕರ್ತವ್ಯ

ಚುನಾವಣಾ ಅಧಿಕಾರಿಗಳ ಪ್ರಕಾರ, ಎಸ್‌ಐಆರ್ ಅಭಿಯಾನವನ್ನು 30 ದಿನಗಳ ಕಾಲ ಸರ್ಕಾರಿ ರಜೆಗಳು ಮತ್ತು ಭಾನುವಾರಗಳಲ್ಲಿಯೂ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಕೆಲವೆಡೆ ಗುರಿ ಪೂರ್ಣಗೊಳಿಸಲು ಬಿಎಲ್‌ಒಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com