

ಬೆಂಗಳೂರು: ಚುನಾವಣಾ ಆಯೋಗದ ಪರಿಶೀಲನಾ ಪ್ರಕ್ರಿಯೆಯ ಭಾರಿ ಪ್ರಮಾಣದ ಉಲ್ಲಂಘನೆಗಳ ಮೂಲಕ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಮತದಾರರಾಗಿ ನೋಂದಾಯಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಸಂಬಂಧ ದಾಖಲೆ ಆಧಾರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಹೊಣೆಗಾರರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಅಶೋಕ್, ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 20ರಿಂದ 25 ಲಕ್ಷದವರೆಗೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ನೆಲೆಸಿದ್ದಾರೆ ಎಂದು ಬಿಜೆಪಿ ಅಂದಾಜಿಸಿದೆ ಎಂದು ಹೇಳಿದರು. ಇವರು ಕಾಫಿ ತೋಟಗಳು, ಕಾರ್ಖಾನೆಗಳು ಹಾಗೂ ಇತರ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ.
ಬೆಂಗಳೂರು ಹೊರವಲಯದ ಕೋಗಿಲು ಪ್ರದೇಶದಲ್ಲಿರುವ ಸುಮಾರು 15 ಎಕರೆ ಭೂಮಿಯನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರಿಗಾಗಿ ನೂರಾರು ವಸತಿ ನಿವೇಶನಗಳಾಗಿ ಪರಿವರ್ತಿಸಲಾಗಿತ್ತು ಎಂದು ಆರೋಪಿಸಿದ ಅವರು, ಬಿಜೆಪಿ ನಡೆಸಿದ ಪ್ರತಿಭಟನೆಗಳ ಪರಿಣಾಮವಾಗಿ ಅಧಿಕಾರಿಗಳು ಆ ವಸತಿ ಪ್ರದೇಶವನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಅನುಷ್ಠಾನವನ್ನು ಪ್ರಶ್ನಿಸಿದ ಅಶೋಕ್, ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು, ಅರ್ಹ ನಿವಾಸಿಗಳಿಗೆ ಅರ್ಜಿ ನಮೂನೆಗಳನ್ನು ವಿತರಿಸಬೇಕು ಮತ್ತು ನಂತರ ಅದೇ ಮನೆಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಬೇಕು.
ಆದರೆ ಈ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಆರೋಪಿಸಿದರು. ಬದಲಾಗಿ, ಮಸೀದಿಗಳ ಹೊರಭಾಗದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ನಮೂನೆಗಳನ್ನು ಸಗಟಾಗಿ ವಿತರಿಸಲಾಗುತ್ತಿದ್ದು, ಮನೆಮನೆ ಪರಿಶೀಲನೆ ಇಲ್ಲದೆ ಯಾರಾದರೂ ಅರ್ಜಿಗಳನ್ನು ಪಡೆಯುವಂತಾಗಿದೆ ಎಂದು ಅವರು ಹೇಳಿದರು.
ಇಂತಹ ಕ್ರಮವು ಎಸ್‌ಐಆರ್ ಅಭಿಯಾನದ ಉದ್ದೇಶವನ್ನೇ ಹಾಳುಮಾಡುವುದಲ್ಲದೆ, ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದು ಅವರು ಆರೋಪಿಸಿದರು.
ಪ್ರಸ್ತುತದ ಪರಿಶೀಲನಾ ಪ್ರಕ್ರಿಯೆಯು 2002ರ ಮತದಾರರ ಪಟ್ಟಿಯನ್ನು ಆಧರಿಸಿ ನಡೆಯುತ್ತಿದೆ. ಆದರೆ ಹಲವು ಮತಗಟ್ಟೆಗಳ ದಾಖಲೆಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನಾಪತ್ತೆಯಾಗಿವೆ ಎಂದು ಅಶೋಕ್ ಆರೋಪಿಸಿದರು. ಯಲಹಂಕ ವಿಧಾನಸಭಾ ಕ್ಷೇತ್ರದ ಉದಾಹರಣೆ ನೀಡಿದ ಅವರು, ಐದು ಮತಗಟ್ಟೆಗಳ ದಾಖಲೆಗಳು ಲಭ್ಯವಿಲ್ಲ. ಇದರಿಂದ ನಿಜವಾದ ಮತದಾರರನ್ನು ಪರಿಶೀಲಿಸುವುದು ಕಷ್ಟವಾಗುತ್ತಿದ್ದು, ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶ ಸಿಗುತ್ತಿದೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೊಂದಿಗೆ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಜೋಡಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕಲ್ಯಾಣ ಯೋಜನೆಗಳ ಪ್ರಯೋಜನ ಕಳೆದುಕೊಳ್ಳಬೇಕಾಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಫಲಾನುಭವಿಗಳಲ್ಲಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ನಡೆದ ಸಭೆಯನ್ನು ಉಲ್ಲೇಖಿಸಿದ ಅಶೋಕ್, ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 250 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ವಿಮಾನದ ಮೂಲಕ ಗಡೀಪಾರು ಮಾಡಲಾಗಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರವು ಸುಮಾರು 65 ಲಕ್ಷ ರೂಪಾಯಿ ವೆಚ್ಚ ಭರಿಸಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಯಾವುದೇ ಅಕ್ರಮ ಬಾಂಗ್ಲಾದೇಶಿ ವಲಸಿಗರಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಈ ಗಡೀಪಾರು ಪ್ರಕರಣಗಳೇ ಆ ಹೇಳಿಕೆಗೆ ವಿರುದ್ಧವಾಗಿವೆ ಎಂದು ಹೇಳಿದರು.
ಅಕ್ರಮ ವಲಸಿಗರನ್ನು ಮತದಾರರಾಗಿ ನೋಂದಾಯಿಸಲು ಅನುಕೂಲವಾಗುವಂತೆ ಆಧಾರ್ ಕಾರ್ಡ್ ಸೇರಿದಂತೆ ನಕಲಿ ಗುರುತಿನ ದಾಖಲೆಗಳು ಮತ್ತು ಇತರ ಪೂರಕ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಹಳೆಯ ಮತದಾರರ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ಮಾಡಲಾಗುತ್ತಿದ್ದು, ಇದರಿಂದ ಸ್ವತಂತ್ರ ಪರಿಶೀಲನೆ ಕಷ್ಟವಾಗುತ್ತಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳ ಕುರಿತು ದಾಖಲೆಗಳು, ಛಾಯಾಚಿತ್ರಗಳು ಮತ್ತು ವಿಡಿಯೊಗಳೊಂದಿಗೆ ಭಾರತದ ಚುನಾವಣಾ ಆಯೋಗ ಹಾಗೂ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಅಧಿಕೃತ ದೂರು ಸಲ್ಲಿಸುವುದಾಗಿ ಅಶೋಕ್ ಘೋಷಿಸಿದರು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳು (VBLOs), ಸಹಾಯಕ ಚುನಾವಣಾಧಿಕಾರಿಗಳು (AROs) ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರಿಗೆ ಈ ರೀತಿಯ ನಿರ್ದೇಶನ ನೀಡಿದವರ ಮೇಲೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವಿಷಯವು ರಾಷ್ಟ್ರೀಯ ಭದ್ರತೆ, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯ ಹಾಗೂ ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ್ದು, ನಿಜವಾದ ಭಾರತೀಯ ನಾಗರಿಕರ ಹೆಸರುಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಇರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದರು.