

ಕಲಬುರಗಿ: ಡಿಕೆ ಶಿವಕುಮಾರ್ ಸಂಪುಟದಲ್ಲಿ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆ ಕಲಬುರಗಿಗೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ ಅವರಿಗೆ ಭಾನುವಾರ ಅದ್ದೂರಿ ಸ್ವಾಗತ ನೀಡಲಾಯಿತು.
ನಗರದ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಎದುರು ಬಂದಿಳಿದ ಪ್ರಿಯಾಂಕ್ ಖರ್ಗೆ ಅವರನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಮೊದಲಿಗೆ ತೆರೆದ ಕಾರಿನಲ್ಲಿ ಬಳಿಕ ಸಿಂಗರಿಸಿದ ಲಾರಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, 2028ರಲ್ಲಿ ರಾಜ್ಯದಲ್ಲಿ ಪುನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು ಇಡೀ ರಾಜ್ಯ ಸರ್ಕಾರದ ಮುಖವೂ ಆಗಿದ್ದಾರೆ. ಗುಲ್ಬರ್ಗಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆ ಕೆಲಸ ನಡೆದಿದೆ, ಅದಕ್ಕೆ ಸಚಿವರು 17 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅದರಂತೆ ಬೆಂಗಳೂರಿನ ವಿಧಾನಸೌಧದ ಮುಂದೆ ಅಂಬಿಗರ ಚೌಡಯ್ಯ ಅವರ ಮೂರ್ತಿ ಸ್ಥಾಪಿಸುವಂತೆ ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯರಾದ ಎಂ. ವೈ. ಪಾಟೀಲ್ ಹಾಗೂ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆಗಳನ್ನು ಮುಖ್ಯಮಂತ್ರಿ ಕೊಟ್ಟಿದ್ದಾರೆ. ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ ಎಂದರು.