

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ಸೋಮವಾರ ಕೌಟುಂಬಿಕ ಕಲಹಕ್ಕೆ ಅಕ್ಕ-ತಂಗಿಯರು ಬಲಿಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕೌಟುಂಬಿಕ ಕಲಹದಿಂದ ಪತಿಯೇ, ತನ್ನ ಪತ್ನಿ ಮತ್ತು ನಾದಿನಿಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಂತಾಮಣಿ ನಗರದ ಜೆಜೆ ಕಾಲೋನಿಯಲ್ಲಿ ನಡೆದಿದೆ.
ಪತ್ನಿ ತವರು ಮನೆಯಿಂದ ಮತ್ತೆ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪತಿ ಏಜಾಜ್, ಪತ್ನಿ ಶಮಾ ಹಾಗೂ ಆಕೆಯ ತಂಗಿ ರೇಷ್ಮಾಳನ್ನು ಕತ್ತು ಕೊಯ್ದು ಹತ್ಯೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶಮಾ ಮತ್ತು ಏಜಾಜ್‌ಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ಬೇಸತ್ತು ಶಮಾ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಈ ನಡುವೆ ಹಲವು ಬಾರಿ ಮನೆಗೆ ಬರುವಂತೆ ಏಜಾಜ್ ಮನವಿ ಮಾಡಿದ್ದರೂ, ಶಮಾ ನಿರಾಕರಿಸಿದ್ದಳು ಎನ್ನಲಾಗಿದೆ.
ಇಂದು ಬೆಳಗ್ಗೆ ಕೋಲಾರದಿಂದ ಚಿಂತಾಮಣಿಗೆ ಬಂದ ಏಜಾಜ್, ಮನೆಯಲ್ಲಿ ಮಲಗಿದ್ದ ಪತ್ನಿ ಶಮಾಳ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲೇ ಇದ್ದ ನಾದಿನಿ ರೇಷ್ಮಾಳನ್ನೂ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಲೆ ಮಾಡಿದ ಬಳಿಕ ತನ್ನ ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕರೆದುಕೊಂಡು ಕೋಲಾರಕ್ಕೆ ತೆರಳಿ ಮನೆಯಲ್ಲಿ ಬಿಟ್ಟು, ನಂತರ ಗಲ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ತಾನೇ ಎರಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಏಜಾಜ್‌ಗೆ ಮದ್ಯಪಾನ, ಜೂಜು ಸೇರಿದಂತೆ ಹಲವು ದುಶ್ಚಟಗಳಿದ್ದವು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು. ಕಿರುಕುಳದಿಂದ ಬೇಸತ್ತ ಶಮಾ ವಿಚ್ಛೇದನಕ್ಕೂ ಮುಂದಾಗಿದ್ದಳು ಎನ್ನಲಾಗಿದೆ.
ಶಮಾಳನ್ನು ತನ್ನ ಬಳಿ ಬರದಂತೆ ಆಕೆಯ ತಂಗಿ ರೇಷ್ಮಾ ಮತ್ತು ಕುಟುಂಬದವರು ತಡೆಯುತ್ತಿದ್ದರು ಎಂದು ಏಜಾಜ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇದೇ ಕಾರಣದಿಂದ ರೇಷ್ಮಾಳನ್ನೂ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ ಸೇರಿದಂತೆ ಚಿಂತಾಮಣಿ ನಗರ ಮತ್ತು ಗ್ರಾಮಾಂತರ ಠಾಣೆಯ ಹಲವು ಇನ್ಸ್ಪೆಕ್ಟರ್‌ಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.