ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಬತ್ತಿದ ನದಿಗಳಿಗೆ ಜೀವಕಳೆ; KRS ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ

ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಂದು ಸಾವಿರ ಕ್ಯೂಸೆಕ್ ನೀರು ಒಳಹರಿವು ಹರಿದುಬಂದಿದೆ.
ಕೆಆರ್ ಎಸ್
ಕೆಆರ್ ಎಸ್
Updated on

ಬೆಂಗಳೂರು: ಕರ್ನಾಟಕದಲ್ಲಿ ಕೊನೆಗೂ ಮುಂಗಾರು ಮಳೆ ಬಿರುಸುಗೊಂಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹತ್ತಾರು ಅವಾಂತರಗಳು ಸೃಷ್ಟಿಯಾಗಿವೆ.

ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಂದು ಸಾವಿರ ಕ್ಯೂಸೆಕ್ ನೀರು ಒಳಹರಿವು ಹರಿದುಬಂದಿದೆ.

ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ ಅಲ್ಪಮಟ್ಟದ ಏರಿಕೆ ಕಂಡುಬಂದಿದೆ. ಇಂದು ಜಲಾಶಯಕ್ಕೆ 1,449 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದಿಂದ 760 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

124.80 ಗರಿಷ್ಠ ಮಟ್ಟದ ಕೆಆರ್‌ಎಸ್ ಸದ್ಯ ಜಲಾಶಯದ ನೀರಿನ ಮಟ್ಟ 80.90 ಅಡಿಗೆ ತಲುಪಿದೆ. ಇನ್ನೂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಈಗ 11.188 ಟಿಎಂಸಿ ನೀರಿದ್ದು, ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ.

ಕೆಆರ್ ಎಸ್
ಮುಂಬೈನಲ್ಲಿ ಭಾರಿ ಮಳೆ: ಅಂಗಡಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು, ಮುಂಗಾರು ಸಂಬಂಧಿತ ಸಾವಿನ ಸಂಖ್ಯೆ 3ಕ್ಕೆ ಏರಿಕೆ, Video

ಬತ್ತಿ ಹೋಗಿದ್ದ ನದಿಗಳಿಗೆ ಈಗ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜೀವಕಳೆ ಬಂದಿದೆ. ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವೆಡೆ ಬಿರುಗಾಳಿ ಮಳೆಗೆ ಬೃಹತ್ ಮರಗಳು ಉರುಳಿ ಬಿದ್ದು ಮನೆ ಹಾಗೂ ವಾಹನಗಳು ಜಖಂಗೊಂಡಿವೆ.

ಮಹಾರಾಷ್ಟ್ರದ ಕೊಲ್ಲಾಪುರ, ರತ್ನಗಿರಿ ಹಾಗೂ ಪಶ್ಚಿಮ ಘಟ್ಟದ ಕಣಕುಂಬಿ ಭಾಗದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿಯ ಒಳಹರಿವು ಕೇವಲ ಒಂದೇ ದಿನದಲ್ಲಿ 15 ಸಾವಿರದಿಂದ 60 ಸಾವಿರ ಕ್ಯೂಸೆಕ್‌ ದಾಟಿದೆ. ಪರಿಣಾಮವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಸೇರಿದಂತೆ ಒಟ್ಟು ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.

ನಿಪ್ಪಾಣಿ ತಾಲೂಕಿನಲ್ಲಿ ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕಾರದಗಾ-ಬೋಜ್ ಸೇರಿದಂತೆ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದ ಪ್ರಸಿದ್ಧ ಮಾರುತಿ ಮಂದಿರವು ಮಲಪ್ರಭಾ ನದಿಯ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ.

ಇನ್ನು ಬಾಗಲಕೋಟೆಯ ಹಿಪ್ಪರಗಿ ಬ್ಯಾರೇಜ್‌ನ ಒಳಹರಿವು 30 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯಾಗಿ 16 ಗೇಟ್‌ಗಳ ಮೂಲಕ 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ಕೆಆರ್ ಎಸ್
ಕರಾವಳಿಯಲ್ಲಿ ಮುಂಗಾರು ಚುರುಕು: ಉತ್ತರ ಕನ್ನಡದಲ್ಲಿ ಭಾರೀ ಮಳೆ; ಸೂಪಾ, ಕದ್ರಿ ಅಣೆಕಟ್ಟುಗಳ ಒಳಹರಿವು ಹೆಚ್ಚಳ

ದಕ್ಷಿಣ ಕರ್ನಾಟಕದ ಕೊಡಗು ಜಿಲ್ಲೆಯಲ್ಲೂ ಮಳೆ ಬಿರುಸು ಪಡೆದುಕೊಂಡಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಡ್ಯಾಂನ ನೀರಿನ ಮಟ್ಟ ಕೇವಲ ಒಂದೇ ದಿನದಲ್ಲಿ 4 ಅಡಿ ಏರಿಕೆಯಾಗಿದೆ. ಚಿಕ್ಲಿಹೊಳೆ ಜಲಾಶಯವೂ ಭರ್ತಿಯಾಗುವ ಹಂತ ತಲುಪಿದೆ. ತೀವ್ರ ಗಾಳಿ-ಮಳೆಗೆ ಕುಶಾಲನಗರದ ಕಾವೇರಿ ನಿಸರ್ಗಧಾಮದ ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ.

ಮಡಿಕೇರಿಯ ಯವಕಪಾಡಿ, ಕಬ್ಬಿನಕಾಡು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹವಾಮಾನ ಇಲಾಖೆಯು ಜುಲೈ 9 ರವರೆಗೆ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಚುರುಕಾಗಿದ್ದು, ತುಂಗಭದ್ರಾ, ವರದಾ ಮತ್ತು ಶರಾವತಿ ನದಿಗಳು ಮೈದುಂಬಿವೆ. ಗಾಜನೂರಿನ ತುಂಗಾ ಡ್ಯಾಂ ಹಾಗೂ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶಿವಮೊಗ್ಗ ಭಾಗದ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಭಾಗದ ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಇದ್ದು, ಜಿಟಿಜಿಟಿ ಮಳೆಯಾಗುತ್ತಿದೆ. ಇಲ್ಲಿನ ವಾತಾವರಣಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಮೂಡಿಗೆರೆಯ ತ್ರಿಪುರ, ಬಕ್ಕಿ ಮತ್ತು ಬಡವನದಿಣ್ಣೆ ಗ್ರಾಮಗಳಲ್ಲಿ ಬೃಹತ್ ಮರಗಳು ಮನೆ ಮತ್ತು ರಸ್ತೆಯ ಮೇಲೆ ಬಿದ್ದು ಭಾನುವಾರ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಕೆಆರ್ ಎಸ್
ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಕಳೆದ 3 ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಖಾನಾಪುರ ತಾಲೂಕಿನ ಪಾಂಡರಿ ನದಿ ಸೇರಿದಂತೆ ಕಳಸಾ – ಬಂಡೂರಿ ನಾಲೆಗಳು ತುಂಬಿ ಹರಿಯತ್ತಿವೆ.

ಮಲಪ್ರಭಾ ಮಾತ್ರವಲ್ಲದೆ, ಘಟಪ್ರಭಾ, ಕೃಷ್ಣಾ, ದೂದ್ ಗಂಗಾ, ವೇದ್ ಗಂಗಾ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಸಪ್ತ ನದಿಗಳೂ ಕೂಡ ಕೇವಲ ನಾಲ್ಕೇ ದಿನದಲ್ಲಿ ಮೈದುಂಬಿ ಹರಿಯುತ್ತಿವೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ, ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗುವ ಆತಂಕವೂ ಹೆಚ್ಚಾಗಿದೆ. ಮಲಪ್ರಭಾ ನದಿಯು ಸವದತ್ತಿ ಬಳಿ ಇರುವ ನವಿಲುತೀರ್ಥ ಜಲಾಶಯವನ್ನು ಸೇರುತ್ತದೆ. ಈ ಹಿಂದೆ ಖಾಲಿಯಾಗಿದ್ದ ಜಲಾಶಯಕ್ಕೂ ಈಗ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೂ ಜೀವಕಳೆ ಬಂದಿದೆ.

ಕಾವೇರಿಯ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಾಗಿದೆ. ಈ ಮಧ್ಯೆ, 13ಕ್ಕೂ ಹೆಚ್ಚು ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದಿಂದ ದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com