‘ಪ್ರತ್ಯೇಕ ಸಚಿವಾಲಯದಿಂದ ಅನಿವಾಸಿ ಕನ್ನಡಿಗರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ಸಾಧ್ಯ’: MLC ಆರತಿ ಕೃಷ್ಣ (INTERVIEW)
ಬೆಂಗಳೂರು: ಅನಿವಾಸಿ ಕನ್ನಡಿಗರ (ಎನ್‌ಆರ್‌ಕೆ) ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಅಂತಹ ಸಚಿವಾಲಯದ ಅಗತ್ಯತೆ ಮತ್ತು ಅದರ ಪ್ರಯೋಜನಗಳ ಕುರಿತು ವಿಧಾನ ಪರಿಷತ್ ಸದಸ್ಯೆ ಹಾಗೂ ಕರ್ನಾಟಕ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಶ್ವದಾದ್ಯಂತ ನೆಲೆಸಿರುವ 30 ಲಕ್ಷಕ್ಕೂ ಹೆಚ್ಚು ಕನ್ನಡಿಗರ ಸಮಸ್ಯೆಗಳು, ಪ್ರಸ್ತಾವಿತ ಎನ್‌ಆರ್‌ಐ ಸಚಿವಾಲಯದ ಉದ್ದೇಶ, ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರಿಗೆ ನೀಡುತ್ತಿರುವ ನೆರವು ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಅವರು ಮಾತನಾಡಿದ್ದು, ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ, ಚಿಕ್ಕಮಗಳೂರಿಗೆ ಎರಡು ದಶಕಗಳ ಬಳಿಕ ಸಚಿವ ಸ್ಥಾನ ಹಾಗೂ ಪ್ರಸ್ತಾವಿತ ಎನ್‌ಆರ್‌ಐ ಸಚಿವಾಲಯದ ಹೊಣೆಗಾರಿಕೆಯನ್ನು ಅನುಭವ ಹೊಂದಿರುವವರಿಗೆ ನೀಡಬೇಕು ಎಂಬ ಚರ್ಚೆ ನಡೆಯುತ್ತಿದೆ. ನಿಮ್ಮ ಹೆಸರೂ ಕೇಳಿಬರುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಸಚಿವ ಸಂಪುಟ ರಚನೆ ಕುರಿತ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್‌ಗೆ ಸೇರಿದ್ದು, ಅವರು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂಬುದು ನನ್ನ ನಿಲುವು. ಚಿಕ್ಕಮಗಳೂರಿಗೆ ಎರಡು ದಶಕಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದೂ ಸತ್ಯ. ಪ್ರತ್ಯೇಕ ಅನಿವಾಸಿ ಭಾರತೀಯರ ಸಚಿವಾಲಯ ರಚನೆಯಾದರೆ, ಎನ್‌ಆರ್‌ಐಗಳು, ಭಾರತೀಯ ಮೂಲದ ವಿದೇಶೀಯರು (PIO), ಭಾರತೀಯ ರಾಯಭಾರ ಕಚೇರಿಗಳು ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ನನಗಿರುವ ಅನುಭವ ಸರ್ಕಾರಕ್ಕೆ ಉಪಯೋಗವಾಗಬಹುದು. ಪಕ್ಷ ನನಗೆ ಆ ಜವಾಬ್ದಾರಿ ನೀಡಿದರೆ ಸಂತೋಷದಿಂದ ಸ್ವೀಕರಿಸುತ್ತೇನೆ.
ವಿದೇಶಿದಲ್ಲಿ ಅನಿವಾಸಿ ಕನ್ನಡಿಗರ ಸಂಖ್ಯೆ ಎಷ್ಟಿದೆ?
ವಿಶ್ವದ ವಿವಿಧ ದೇಶಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಬ್ರಿಟನ್, ಅಮೆರಿಕ ಹಾಗೂ ಇತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವೃತ್ತಿಪರರು, ಉದ್ಯಮಿಗಳು ಮತ್ತು ಉನ್ನತ ಹುದ್ದೆಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತ್ಯೇಕ ಅನಿವಾಸಿ ಭಾರತೀಯರ ಸಚಿವಾಲಯದಿಂದ ಏನು ಪ್ರಯೋಜನವಾಗಲಿದೆ?
ವಿದೇಶದಲ್ಲಿರುವ ಕನ್ನಡಿಗರಿಗೆ ಇದು ಒಂದೇ ಸಂಪರ್ಕ ಕೇಂದ್ರವಾಗಲಿದೆ. ಪ್ರಸ್ತುತ ಯಾವುದೇ ಸಮಸ್ಯೆ ಪರಿಹರಿಸಿಕೊಳ್ಳಲು ರಾಜ್ಯ ಸರ್ಕಾರ, ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರ ಕಚೇರಿಗಳ ನಡುವೆ ಹಲವು ಹಂತಗಳಲ್ಲಿ ಸಂಪರ್ಕ ಸಾಧಿಸಬೇಕಿದೆ. ಪ್ರತ್ಯೇಕ ಸಚಿವಾಲಯ ಇದ್ದರೆ ವಿದೇಶಾಂಗ ಸಚಿವಾಲಯದೊಂದಿಗೆ ನೇರ ಸಮನ್ವಯ ಸಾಧಿಸಿ, ಸಾವು ಸಂಭವಿಸಿದ ಸಂದರ್ಭ, ಯುದ್ಧ ಪರಿಸ್ಥಿತಿ, ಕಾರ್ಮಿಕರ ಸಮಸ್ಯೆಗಳು, ಸ್ಥಳಾಂತರ ಕಾರ್ಯಾಚರಣೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ತ್ವರಿತ ನೆರವು ಒದಗಿಸಬಹುದು. ಜೊತೆಗೆ, ಅನಿವಾಸಿ ಕನ್ನಡಿಗರ ಹೂಡಿಕೆಗಳನ್ನು ಕರ್ನಾಟಕಕ್ಕೆ ಸೆಳೆಯಲು ಸಹ ಇದು ನೆರವಾಗಲಿದೆ.
ಅನಿವಾಸಿ ಕನ್ನಡಿಗರು ಪ್ರಮುಖವಾಗಿ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?
ಪ್ರದೇಶದಿಂದ ಪ್ರದೇಶಕ್ಕೆ ಸಮಸ್ಯೆಗಳು ಬದಲಾಗುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೆಲೆಸಿರುವವರು ಆಸ್ತಿ ವಿವಾದ, ವಂಚನೆ, ನಕಲಿ ದಾಖಲೆಗಳ ಮೂಲಕ ಆಸ್ತಿ ಮಾರಾಟ ಹಾಗೂ ವೈವಾಹಿಕ ವಂಚನೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವುದು, ಒಪ್ಪಂದ ಉಲ್ಲಂಘನೆ, ಕಾರ್ಮಿಕ ಶೋಷಣೆ ಹಾಗೂ ಉದ್ಯೋಗ ಕಳೆದುಕೊಂಡ ಬಳಿಕ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಉಕ್ರೇನ್ ಯುದ್ಧ, ಸುಡಾನ್ ಸಂಘರ್ಷ ಹಾಗೂ ಇತ್ತೀಚಿನ ಮಧ್ಯಪ್ರಾಚ್ಯ ಉದ್ವಿಗ್ನತೆಯಂತಹ ಸಂದರ್ಭಗಳಲ್ಲಿ ಅನೇಕ ಕನ್ನಡಿಗರಿಗೆ ತುರ್ತು ಸ್ಥಳಾಂತರ ಮತ್ತು ರಾಯಭಾರ ಕಚೇರಿಗಳ ನೆರವು ಅಗತ್ಯವಿರುತ್ತದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಾರ್ಯದರ್ಶಿಯಾಗಿ, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನಿಮ್ಮ ಪ್ರಸ್ತುತ ಜವಾಬ್ದಾರಿಗಳೇನು?
ಸ್ಯಾಮ್ ಪಿತ್ರೋಡಾ ನೇತೃತ್ವದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಕಾರ್ಯಚಟುವಟಿಕೆಗಳನ್ನು 35 ದೇಶಗಳಲ್ಲಿ ನಾನು ನೋಡಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್ ಬೆಂಬಲಿಗರಿರುವ ದೇಶಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸುವುದು, ಪದಾಧಿಕಾರಿಗಳ ನೇಮಕ, ಸದಸ್ಯತ್ವ ವಿಸ್ತರಣೆ ಮೊದಲಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದೇನೆ. ಜೊತೆಗೆ ಸಲ್ಮಾನ್ ಖುರ್ಷಿದ್ ನೇತೃತ್ವದ ಎಐಸಿಸಿ ವಿದೇಶಾಂಗ ವಿಭಾಗದ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೆ ವಿದೇಶಿ ಗಣ್ಯರ ಸಭೆಗಳನ್ನು ಸಂಯೋಜಿಸುತ್ತೇನೆ. ಈ ಹಿಂದೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಹಿಂದೆ ಕೆಲಸ ಮಾಡಿರುವುದರಿಂದ, ನಾನು ರಾಯಭಾರ ಕಚೇರಿಗಳೊಂದಿಗೆ ಬಲವಾದ ಸಂಪರ್ಕಗಳನ್ನು ಕಾಯ್ದುಕೊಳ್ಳುತ್ತೇನೆ ಮತ್ತು ರಾಹುಲ್ ಗಾಂಧಿಯವರ ವಿದೇಶ ಪ್ರವಾಸಗಳ ಸಮಯದಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತೇನೆ.
ಪ್ರಸ್ತಾವಿತ ಅನಿವಾಸಿ ಭಾರತೀಯರ ಸಚಿವಾಲಯದ ಕುರಿತು ಇನ್ನಷ್ಟು ವಿವರಿಸಿ..?
ಕರ್ನಾಟಕದಲ್ಲಿ ಈಗಾಗಲೇ ಎನ್‌ಆರ್‌ಐ ಫೋರಂ ಇದೆ. ಆದರೆ ಅದಕ್ಕೆ ಅಗತ್ಯವಾದ ಆರ್ಥಿಕ ಬೆಂಬಲ ಸಿಕ್ಕಿಲ್ಲ. ನಾನು ಉಪಾಧ್ಯಕ್ಷೆಯಾಗಿದ್ದಾಗ ಕೇರಳ ಮಾದರಿಯನ್ನು ಆಧರಿಸಿ ಕರ್ನಾಟಕದ ಮೊದಲ ಎನ್‌ಆರ್‌ಐ ನೀತಿಯನ್ನು ಜಾರಿಗೆ ತಂದೆವು. ಮೊದಲ ಬಾರಿಗೆ ರೂ.2 ಕೋಟಿ ಅನುದಾನವೂ ದೊರಕಿತ್ತು. ಆದರೆ, ಅದು ಸಾಕಾಗಲಿಲ್ಲ. ಶಾಶ್ವತ ಸಚಿವಾಲಯ ರಚನೆಯಾಗಿ ಸಮರ್ಪಕ ಅನುದಾನ ದೊರೆತರೆ ತಾತ್ಕಾಲಿಕ ವ್ಯವಸ್ಥೆಗಳ ಬದಲು ಸಾಂಸ್ಥಿಕವಾಗಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಈ ಪ್ರಸ್ತಾವನೆಯನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗಿತ್ತು. ಈಗ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿದೆ.
ಈ ಕೆಲಸಗಳನ್ನು ಈಗಾಗಲೇ ಕೇಂದ್ರ ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತಿದೆ. ಹಾಗಿದ್ದರೂ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಚಿವಾಲಯ ಏಕೆ ಬೇಕು?
ಕೇಂದ್ರ ವಿದೇಶಾಂಗ ಸಚಿವಾಲಯದ ಪಾತ್ರ ಬಹಳ ಮಹತ್ವದ್ದಾಗಿದೆ. ಆದರೆ, ಅದು ದೇಶದ ಎಲ್ಲ ರಾಜ್ಯಗಳ ಪ್ರಕರಣಗಳನ್ನು ನಿರ್ವಹಿಸುತ್ತದೆ. ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಚಿವಾಲಯ ಇದ್ದರೆ ಕನ್ನಡಿಗರ ಸಮಸ್ಯೆಗಳ ಬಗ್ಗೆ ವೈಯಕ್ತಿಕವಾಗಿ ಅನುಸರಣೆ ಮಾಡಬಹುದು. ರಾಯಭಾರ ಕಚೇರಿಗಳು, ವಿದೇಶಾಂಗ ಸಚಿವಾಲಯ ಹಾಗೂ ಕುಟುಂಬಗಳ ನಡುವೆ ಸಮನ್ವಯ ಸಾಧಿಸಿ, ದೂರು ನಿವಾರಣೆ, ಕಲ್ಯಾಣ ಯೋಜನೆಗಳು, ತುರ್ತು ನೆರವು ಹಾಗೂ ಹೂಡಿಕೆಗಳಿಗೆ ಒಂದೇ ಸಂಸ್ಥೆಯ ಮೂಲಕ ಸೇವೆ ಒದಗಿಸಬಹುದು. ಇದರಿಂದ ವ್ಯವಸ್ಥೆ ಹೆಚ್ಚು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಅನುಭವವೇನು?
ಕೋವಿಡ್-19 ಸಾಂಕ್ರಾಮಿಕ, ಉಕ್ರೇನ್ ಯುದ್ಧ, ಇತ್ತೀಚಿನ ಇರಾನ್-ಇಸ್ರೇಲ್ ಉದ್ವಿಗ್ನತೆ ಸೇರಿದಂತೆ ಹಲವು ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ವೈಯಕ್ತಿಕವಾಗಿ ನೆರವು ಒದಗಿಸಿದ್ದೇನೆ. ವಿದೇಶಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲು, ಉದ್ಯೋಗದಾತರಿಂದ ಪಾಸ್‌ಪೋರ್ಟ್ ಮರಳಿ ಕೊಡಿಸಲು, ಹಡಗುಗಳಲ್ಲಿ ಸಿಲುಕಿದ್ದ ನಾವಿಕರನ್ನು ಬಿಡುಗಡೆಗೊಳಿಸಲು, ಭಾರತೀಯ ರಾಯಭಾರ ಕಚೇರಿಗಳ ಮೂಲಕ ತುರ್ತು ಪ್ರಯಾಣ ದಾಖಲೆಗಳನ್ನು ಒದಗಿಸಲು ಹಾಗೂ ವಿದೇಶಗಳಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹಗಳನ್ನು ತಾಯ್ನಾಡಿಗೆ ತಲುಪಿಸಲು ಸಮನ್ವಯ ಸಾಧಿಸಿದ್ದೇನೆ.

