

ಕಲಬುರಗಿ: ರೈತರ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಲಬುರಗಿಯಲ್ಲಿ ವಿವಿಧ ಸಂಘಟನೆ ಹಾಗೂ ರೈತರಿಂದ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಸರ್ಕಾರದ ಗಮನಕ್ಕಿದೆ. ಹೀಗಾಗಿ ಯಾವ ಸಾಲ ಮನ್ನಾ ಮಾಡಬೇಕು ಹಾಗೂ ಹೇಗೆ ಮಾಡಬೇಕೆಂಬುದನ್ನು ಪರಾಮರ್ಶಿಸಲಾಗುವುದು ಎಂದರು.
ರಾಜ್ಯದ ಬರ ಪರಿಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳಲಾಗಿದೆ. ಈಗ ಬೆಳಗಾವಿಗೆ ತೆರಳಿ ಅಲ್ಲೂ ಕೂಡಾ ವಾಸ್ತವ ಅರಿಯಲಾಗುವುದು. ಪ್ರವಾಸದ ನಂತರ ಸಂಬಂಧ ಪಟ್ಟವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಸಾಲಮನ್ನಾ ಅಷ್ಟು ಸುಲಭದ ಕೆಲಸವಲ್ಲ.
ಆದರೆ, ಈ ಹಿಂದೆ ಬೇರೆ ರಾಜ್ಯಗಳು ಮಾಡದೇ ಇದ್ದಾಗಲೂ ನಾವು ಸಾಲ ಮನ್ನಾ ಮಾಡಿದ್ದೇವೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗಲೂ ಮಾಡಿದ್ದೇವೆ. ಈ ವಿಚಾರವನ್ನು ಪರಿಶೀಲಿಸಲಾಗುವುದು ಎಂದರು.
ಬಳಿಕ ಮುಖ್ಯಮಂತ್ರಿ ಸುಮಾರು ಮೂರೂವರೆ ಗಂಟೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿ ಅವಲೋಕನಾ ಸಭೆ ನಡೆಸಿದರು. ರಾಜ್ಯದಲ್ಲಿ ಬರದ ಛಾಯೆಯಿದ್ದು, ಜನಾಭಿಪ್ರಾಯ ಹಾಗೂ ತಜ್ಞರ ವರದಿ ಆಧರಿಸಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಬರ ಪೀಡಿತ ಪ್ರದೇಶಗಳ ಘೋಷಣೆಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರ, ರೈತರ ಸಮಸ್ಯೆ ಅರಿಯಲು ಪ್ರಜಾಸೇವೆ ರಚಿಸಲಾಗಿದ್ದು, ಶೀಘ್ರ ಸಚಿವರನ್ನು ನೇಮಕ ಮಾಡಲಾಗುವುದು. ಅದರಡಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಸಿಎಂ ಡಿ ಕೆ ಶಿವಕುಮಾರ ಪುನರುಚ್ಚರಿಸಿದರು.
ಡಿಸಿಎಂ ಡಾ. ಜಿ. ಪರಮೇಶ್ವರ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ವಿ. ಮುನಿಯಪ್ಪ, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಸೇರಿದಂತೆ ಮುಂತಾದವರಿದ್ದರು.