

ಶಿವಮೊಗ್ಗ: ಹಿಂದುತ್ವ ಅಂತಾ ಓಡಾಡ್ತಿದ್ದ ಈಶ್ವರಪ್ಪ, ಬಸನಗೌಡ ಯತ್ನಾಳ್ ಸೇರಿದಂತೆ ಎಲ್ಲರನ್ನು ಅನಂತ ಕುಮಾರ್ ಹೆಗಡೆ ಮುಗಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಸ್ವಲ್ಪ ಚಿಗುರಿಕೊಂಡು ಬಿಟ್ಟಿದ್ದಾರೆ. ಮಾತೆತ್ತಿದರೆ ಕಾಂಗ್ರೆಸ್ ಮತ್ತು ಮುಸ್ಲಿಮರಿಗೆ ಬೈಯುತ್ತಿದ್ದಾರೆ. ಬಿಜೆಪಿಯವರಿಗೆ ಬೈಯ್ಯೊದಿಕ್ಕೆ ಅವರ ಬಳಿ ವಿಷಯವಿಲ್ಲ.
ಕಟ್ಟಾ ಹಿಂದುತ್ವಾ ಅಂತಾ ಹೇಳಿಕೊಂಡು ಓಡಾಡ್ತಿದ್ದವರ ರೆಕ್ಕೆ-ಪುಕ್ಕ ಎಲ್ಲಾ ಕಟ್ ಮಾಡಿ ಹಾಕಿದ್ದಾರೆ. ಎಷ್ಟೇ ಎಗರಾಡಿದ್ರೂ ನೀವು ಬಿಜೆಪಿಗೆ ಹೋಗೋಕಾಗಲ್ಲ. ನೀವು ಮತ್ತೆ ಬಿಜೆಪಿಗೆ ಹೋಗೋದು ಕಷ್ಟ ಇದೆ, ಹೋದ್ರು ನಿಮಗೆ ಟಿಕೆಟ್ ಅಂತೂ ಕೊಡೊಲ್ಲ ಎಂದಿದ್ದಾರೆ. ಯಾಕಂದ್ರೆ ಹಿಂದುತ್ವ ಅಂತಾ ಯಾರ್ಯಾರು ಇದ್ರು ಅವರನ್ನೆಲ್ಲಾ ಅನಂತ್ ಕುಮಾರ್ ಹೆಗಡೆ ಮುಗ್ಸಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಇನ್ನೂ ಬೇಸೂರು ಗ್ರಾಮದಲ್ಲಿ ವಿದ್ಯುತ್ ಸ್ಥಾವರ ಸಂಬಂಧ ಮಾತನಾಡಿದ ಅವರು, ವಿದ್ಯುತ್ ಸ್ಥಾವರ ನಿರ್ಮಾಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಮ್ಮ ರೈತರು ಹೋರಾಟ ನಡೆಸಿದ್ದರು. ಅದರಲ್ಲಿ ನಾನು ಭಾಗಿಯಾಗಿ ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೆವು. ಮಲೆ ನಾಡು ಭಾಗದಲ್ಲಿ ಎಲ್ಲಿಯೂ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದು ಬೇಡ ಎಂದು ರೈತರು ಪ್ರತಿಭಟನೆ ನಡೆಸಿದ್ದರು ಎಂದರು.
ಮಲೆನಾಡು ಭಾಗ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಾನು ಇರೋವರೆಗೂ ಈ ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ವಿದ್ಯುತ್ ಖಾಸಗೀಕರಣದ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.