ಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ನಿಧನ

25 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಅವರು ಸ್ವಯಂ ನಿವೃತ್ತಿ ಪಡೆದಿದ್ದರು.
C N Muktha
ಸಿ ಎನ್ ಮುಕ್ತಾ
Updated on

ಮೈಸೂರು: ಖ್ಯಾತ ಸಾಹಿತಿ ಹಾಗೂ ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ಅವರು ನಿನ್ನೆ ಶುಕ್ರವಾರ ಮುಂಜಾನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಅವರ ಪಾರ್ಥಿವ ಶರೀರವನ್ನು ಮೈಸೂರಿನ ಲಕ್ಷ್ಮೀಪುರಂನ ಆರ್‌ಟಿಒ ವೃತ್ತದ ಸಮೀಪದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ನಿನ್ನೆ ಮಧ್ಯಾಹ್ನ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

ಅವಿವಾಹಿತರಾಗಿದ್ದ ಮುಕ್ತಾ ಅವರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. 25 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಅವರು ಸ್ವಯಂ ನಿವೃತ್ತಿ ಪಡೆದಿದ್ದರು.

C N Muktha
ಡಿವಿಜಿ ಒಡನಾಡಿ, ಹಿರಿಯ ಪತ್ರಕರ್ತ, ಸಾಹಿತಿ ಡಾ. ಎಸ್‌.ಆರ್ ರಾಮಸ್ವಾಮಿ ನಿಧನ

ಚಿತ್ರದುರ್ಗದಲ್ಲಿ ಜನಿಸಿದ ಮುಕ್ತಾ ಅವರು ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿ ಅವರ ಪುತ್ರಿ. ಅವರ ಸಹೋದರ ಸಿ.ಬಿ. ಜಯರಾಯ ಖ್ಯಾತ ರಂಗಭೂಮಿ ಕಲಾವಿದರಾಗಿದ್ದರು.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಸರ್ಕಾರಿ ಕಾಲೇಜಿನಲ್ಲಿ ಬಿ.ಎಡ್. ಪದವಿ ಪಡೆದ ಬಳಿಕ ಪ್ರೌಢಶಾಲಾ ಶಿಕ್ಷಕಿಯಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿಯಾಗುವವರೆಗೆ ಸೇವೆ ಸಲ್ಲಿಸಿದರು.

ಆಶ್ರಯ ಅವರ ಮೊದಲ ಕಾದಂಬರಿಯಾಗಿದ್ದು, ಅದೇ ಅವರ ವಿಶಿಷ್ಟ ಸಾಹಿತ್ಯ ಪಯಣಕ್ಕೆ ನಾಂದಿ ಹಾಡಿತು. ನಂತರ ಅನಾವರಣ, ಅಪರಿಚಿತರು, ಜೀವನ ಚಕ್ರ, ಅಮೃತಮಯಿ ಸೇರಿದಂತೆ 75ಕ್ಕೂ ಹೆಚ್ಚು ಕಾದಂಬರಿಗಳು ಹಾಗೂ ಕಥಾಸಂಕಲನಗಳನ್ನು ರಚಿಸಿದರು. ಅವರ ಅನೇಕ ಕೃತಿಗಳು ಜನಪ್ರಿಯ ಕನ್ನಡ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಓದುಗರನ್ನು ಸಂಪಾದಿಸಿದ್ದವು.

ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ, ವಿಮುಕ್ತಿ ಸೇರಿದಂತೆ ಅವರ ಹಲವು ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ.

ಅವರ ಸುಖದ ಸೋಪಾನ ಹಾಗೂ ಕ್ಷಮಯಾ ಧರಿತ್ರಿ ಕಾದಂಬರಿಗಳು ದೂರದರ್ಶನ ಧಾರಾವಾಹಿಗಳಾಗಿಯೂ ರೂಪಾಂತರಗೊಂಡಿದ್ದವು. ಜೊತೆಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ದೋಣಿ ಸಾಗಲಿ ಹಾಗೂ ನಿರ್ದೇಶಕ ಕೊಡ್ಲು ರಾಮಕೃಷ್ಣ ಅವರ ಮಿಸ್ ಕ್ಯಾಲಿಫೋರ್ನಿಯಾ ಚಿತ್ರಗಳಿಗೆ ಕಥೆಯನ್ನೂ ಬರೆದಿದ್ದರು.

ಅವರ ಕಾದಂಬರಿಗಳು ರಾಜ್ಯದ ಪ್ರಮುಖ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆ ಗಳಿಸಿದ್ದವು. 75ಕ್ಕೂ ಹೆಚ್ಚು ಕಾದಂಬರಿಗಳು ಹಾಗೂ 15ಕ್ಕೂ ಅಧಿಕ ಕಥಾಸಂಕಲನಗಳನ್ನು ರಚಿಸಿರುವ ಮುಕ್ತಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.

ಅವರ ನಿಧನಕ್ಕೆ ರಾಜ್ಯದ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com