ಇತ್ತ ಕಾವೇರಿಗೆ ದ್ರೋಹ, ಅತ್ತ ಎತ್ತಿನಹೊಳೆಯಲ್ಲಿ ಭ್ರಷ್ಟಾಚಾರದ ಮಹಾಪೂರ! ಕಡುಭ್ರಷ್ಟ ಆಡಳಿತಕ್ಕೆ ನಾಚಿಕೆಯಾಗಬೇಕು- ಆರ್. ಅಶೋಕ್ ಕಿಡಿ!

ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ 10 ಅಡಿ ಸುತ್ತಳತೆಯ ಬೃಹತ್ ಪೈಪ್‌ನ ವೆಲ್ಡಿಂಗ್ ತುಂಡಾಗಿ ಜಲಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
RAshok, CM DK Shivakumar CasualImages
ಆರ್. ಅಶೋಕ್, ಸಿಎಂ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇತ್ತ ಕಾವೇರಿಗೆ ದ್ರೋಹ, ಅತ್ತ ಎತ್ತಿನಹೊಳೆಯಲ್ಲಿ ಭ್ರಷ್ಟಾಚಾರದ ಮಹಾಪೂರ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರದಿಯೊಂದನ್ನು ಹಂಚಿಕೊಂಡಿದ್ದು, ಒಂದೆಡೆ ನಮ್ಮ ಮಂಡ್ಯ, ಮೈಸೂರು ಭಾಗದ ರೈತರ ಜಮೀನುಗಳಿಗೆ, ಕೆರೆ-ನಾಲೆಗಳಿಗೆ ನೀರು ಬಿಡಲು ಬದ್ಧತೆ ಇಲ್ಲದ ನೀವು, ರಾತ್ರೋರಾತ್ರಿ ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದೀರಿ. ಮತ್ತೊಂದೆಡೆ ಬಯಲುಸೀಮೆ ಜನರ ಕುಡಿಯುವ ನೀರಿನ ಬವಣೆ ತೀರಿಸಬೇಕಿದ್ದ ಎತ್ತಿನಹೊಳೆ ಯೋಜನೆಯಲ್ಲಿ ನಿಮ್ಮ ಸರ್ಕಾರದ ಕಮಿಷನ್ ದಂಧೆ, ಭ್ರಷ್ಟಾಚಾರದ ಫಲವಾಗಿ ಕಳಪೆ ಕಾಮಗಾರಿಯಿಂದ ಅಪಾರ ನೀರು ಅನ್ಯಾಯವಾಗಿ ಮಣ್ಣುಪಾಲಾಗುವಂತೆ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಯಲುಸೀಮೆಗೆ ನೀರು ಕೊಡುತ್ತೇವೆ ಎಂದು ಬಿಲ್ಡಪ್ ಕೊಟ್ಟ ನಿಮ್ಮ ನೀರಾವರಿ ಇಲಾಖೆಯ ಅಸಲಿ ಬಣ್ಣ ಈಗ ಬಯಲಾಗಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ 10 ಅಡಿ ಸುತ್ತಳತೆಯ ಬೃಹತ್ ಪೈಪ್‌ನ ವೆಲ್ಡಿಂಗ್ ತುಂಡಾಗಿ ಜಲಸ್ಫೋಟ ಸಂಭವಿಸಿದೆ. ಕಾರಂಜಿಯಂತೆ ಚಿಮ್ಮಿದ ನೀರಿನಿಂದ ಅಪಾರ ನಷ್ಟವಾಗಿದೆ. ಭಾನುವಾರ ಸಂಜೆಯಾದರೂ ದುರಸ್ತಿ ಮಾಡಲಾಗದೆ ಕೋಟ್ಯಂತರ ಲೀಟರ್ ನೀರು ಗಗನಕ್ಕೆ ಚಿಮ್ಮಿ ವ್ಯರ್ಥವಾಗಿ ಪೋಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತರ ಬದುಕು ನಾಶವಾಗಿದ್ದು, ನೀರಾವರಿ ಮಂತ್ರಿಯೂ ಆಗಿರುವ ಸಿಎಂ ಅವರೇ, ನಿಮ್ಮ ಕಳಪೆ ಕಾಮಗಾರಿಯಿಂದಾಗಿ ಸುತ್ತಮುತ್ತಲಿನ ಭತ್ತದ ಗದ್ದೆಗಳು, ಅಡಿಕೆ ಮತ್ತು ಕಾಫಿ ತೋಟಗಳಿಗೆ ನೀರು ಹಾಗೂ ಮಣ್ಣು ನುಗ್ಗಿ ರೈತರ ಇಡೀ ವರ್ಷದ ಬೆಳೆ ಸರ್ವನಾಶವಾಗಿದೆ. ಗದ್ದೆಗಳು ಹಳ್ಳಗಳಾಗಿ ಮಾರ್ಪಟ್ಟಿವೆ. ಬೆಂಗಳೂರಿನಲ್ಲಿ ಕುಳಿತು ಕಂಟ್ರಾಕ್ಟರ್ ಗಳ ಜೊತೆ, ರಿಯಲ್ ಎಸ್ಟೇಟ್ ದೊರೆಗಳ ಜೊತೆ, ಬಂಡವಾಳಶಾಹಿಗಳ ಜೊತೆ ಡೀಲ್ ಕುದುರಿಸಲು ಇರುವ ಸಮಯ, ನಮ್ಮ ರೈತರ ಕಣ್ಣೀರು ಒರೆಸಲು ಏಕಿಲ್ಲ? ತಮಿಳುನಾಡಿಗೆ ನೀರು ಬಿಡುವಾಗ ಇರುವ ನಿಮ್ಮ ಬುಲೆಟ್ ವೇಗ, ಎತ್ತಿನಹೊಳೆಯ ಕಳಪೆ ಪೈಪ್‌ಲೈನ್ ದುರಸ್ತಿ ಮಾಡಲು ಏಕೆ ಬರಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

RAshok, CM DK Shivakumar CasualImages
ಪರಿಸರ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ; ಹಳ್ಳ ಹಿಡಿದ ಕಾಮಗಾರಿ!

ಇದು ಕೇವಲ ತಾಂತ್ರಿಕ ದೋಷವಲ್ಲ, ನಿಮ್ಮ ಸರ್ಕಾರದ ಕಮಿಷನ್ ದಂಧೆಯ ನೇರ ಪರಿಣಾಮ. ಕೂಡಲೇ ಎತ್ತಿನಹೊಳೆ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿ, ನಷ್ಟ ಅನುಭವಿಸಿದ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಿಮ್ಮ ಈ ಭ್ರಷ್ಟ ಸರ್ಕಾರದ ವಿರುದ್ಧ ಬಯಲುಸೀಮೆಯ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com