ಪರಿಸರ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ; ಹಳ್ಳ ಹಿಡಿದ ಕಾಮಗಾರಿ!

ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 6, 2024 ರಂದು ಸಕಲೇಶಪುರದ ಹೆಬ್ಬಾಬಹಳ್ಳಿಯ ಬಳಿ ಉದ್ಘಾಟಿಸಿದರು.
Yetthinahole project
ಎತ್ತಿನಹೊಳೆ ಕಾಮಗಾರಿ
Updated on

ಹಾಸನ: ಕರ್ನಾಟಕದ ಏಳು ಜಿಲ್ಲೆಗಳ 28 ತಾಲ್ಲೂಕುಗಳ ಬರಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಗುರಿ ಹೊಂದಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡದ ಕಾರಣ ಮತ್ತು ಅನುದಾನದ ಕೊರತೆಯಿಂದ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ.

ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 6, 2024 ರಂದು ಸಕಲೇಶಪುರದ ಹೆಬ್ಬಾಬಹಳ್ಳಿಯ ಬಳಿ ಉದ್ಘಾಟಿಸಿದರು. ಹಾಸನ ಜಿಲ್ಲೆಯ ಹಳೇಬೀಡು ಬಳಿ 7 ಕಿ.ಮೀ ಉದ್ದದ ಕಾಲುವೆಗೆ ಅರಣ್ಯ ಅನುಮತಿ ನೀಡದ ಕಾರಣ ಯೋಜನೆಯು ಈಗ ವಿಳಂಬವಾಗಿದೆ. ಈವರೆಗೆ ನಾಲ್ಕು ಬಾರಿ ಪರಿಷ್ಕರಿಸಿದ ನಂತರ ಯೋಜನಾ ವೆಚ್ಚವು 12,912.36 ಕೋಟಿ ರೂ.ಗಳ ಆರಂಭಿಕ ಅಂದಾಜಿನಿಂದ ಈಗ 23,251 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಈ ಯೋಜನೆಯು ಹಾಸನ, ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಏಳು ಬರಪೀಡಿತ ಜಿಲ್ಲೆಗಳ 6,657 ಹಳ್ಳಿಗಳು ಮತ್ತು 38 ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ನಿವಾರಿಸುವ ಗುರಿ ಹೊಂದಿದೆ. ಎತ್ತಿನಹೊಳೆ ಯೋಜನೆಯು ಪಶ್ಚಿಮ ಘಟ್ಟಗಳಿಂದ ನೇತ್ರಾವತಿಯ ಉಪನದಿಗಳಾದ ಕಾಡುಮನೆಹೊಳೆ, ಕಿರೆಹೊಳೆ, ಎತ್ತಿನಹೊಳೆ ಮತ್ತು ಹೊಂಗಡಹಳ್ಳಗಳ ಮೂಲಕ 24.1 ಟಿಎಂಸಿ ಅಡಿಗಳಷ್ಟು ಪ್ರವಾಹದ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ.

ಯೋಜನೆಯು ಎರಡು ಹಂತಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಅಣೆಕಟ್ಟುಗಳು ಮತ್ತು ಸಂಗ್ರಹಣಾ ಟ್ಯಾಂಕ್‌ಗಳನ್ನು ನಿರ್ಮಿಸುವುದು, ಎರಡನೇ ಹಂತದಲ್ಲಿ ವಿತರಣಾ ಕಾಲುವೆ ಮತ್ತು ಸಮತೋಲನ ಜಲಾಶಯಗಳ ನಿರ್ಮಾಣ ಮಾಡುವುದಾಗಿದೆ.

Yetthinahole project
ಎತ್ತಿನಹೊಳೆ ಯೋಜನೆ: ಅನುಭವ, ಆರ್ಥಿಕ ಸಾಮರ್ಥ್ಯ ಪರಿಶೀಲಿಸದೆ ಕಾಮಗಾರಿ ಗುತ್ತಿಗೆ; CAG ವರದಿ

ಮುಖ್ಯ ಕಾಲುವೆಯ ಕೆಲಸದಲ್ಲಿ 80 ಪ್ರತಿಶತಕ್ಕೂ ಹೆಚ್ಚು ಮತ್ತು ಫೀಡರ್‌ಗಳಲ್ಲಿ 97ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಯೋಜನಾ ವರದಿಯ ಪ್ರಕಾರ, 34 ಕಿ.ಮೀ.ವರೆಗಿನ ಎಂಟು ಅಣೆಕಟ್ಟುಗಳಿಂದ ನೀರನ್ನು ಪಂಪ್ ಮಾಡಲಾಗುವುದು, ಅಲ್ಲಿಂದ ನೀರು ತುಮಕೂರಿನ ಲಕ್ಕೆಹಳ್ಳಿಗೆ 260 ಕಿ.ಮೀ. ದೂರದಲ್ಲಿ ತಲುಪುತ್ತದೆ.

ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುವ ಮತ್ತು ಹೆಚ್ಚುತ್ತಿರುವ ಭೂಕುಸಿತದ ಬೆದರಿಕೆಯಿಂದಾಗಿ ಈ ಯೋಜನೆಗೆ ಪರಿಸರವಾದಿಗಳಿಂದ ಪ್ರತಿರೋಧ ವ್ಯಕ್ತವಾಯಿತು. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಸ್ಥಳೀಯರು ಭೂಸ್ವಾಧೀನವನ್ನು ವಿರೋಧಿಸುತ್ತಿದ್ದಾರೆ. ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಅವರ ಪ್ರಕಾರ, ಎಂಟು ಅಣೆಕಟ್ಟುಗಳು ಮತ್ತು ಒಂಬತ್ತು ಪಂಪ್ ಹೌಸ್‌ಗಳ ನಿರ್ಮಾಣ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 34 ಕಿ.ಮೀ.ವರೆಗೆ ಪ್ರಾಯೋಗಿಕವಾಗಿ ಚಾಲನೆ ನಡೆಸಲಾಯಿತು.

ಇತ್ತೀಚಿನ ವರದಿಗಳ ಪ್ರಕಾರ ನೀರಿನ ಸಂಗ್ರಹ 18 ಟಿಎಂಸಿ ಅಡಿಗಳಾಗಿದ್ದು, 6 ಟಿಎಂಸಿ ಅಡಿಗಳ ಕೊರತೆಯಿದೆ. ನೀರಿನ ಲಭ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಳೆಗಾಲದಲ್ಲೂ 24 ಟಿಎಂಸಿ ಅಡಿಗಳಷ್ಟು ನೀರನ್ನು ಎತ್ತುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಡಿಪಿಆರ್ ಪ್ರಕಾರ 24 ಟಿಎಂಸಿ ಅಡಿ ನೀರನ್ನು ಬೇರೆಡೆಗೆ ತಿರುಗಿಸುವ ವಿಶ್ವಾಸ ಸರ್ಕಾರಕ್ಕಿದೆ. ಗುರಿಯನ್ನು ತಲುಪಲು ಸರ್ಕಾರ ಈಗ ಬೇರೆಡೆಗೆ ತಿರುಗಿಸುವ ತಂತ್ರಗಳನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹೆಮ್ಮಿಗೆಯ ಪ್ರಮುಖ ಕಾಫಿ ಬೆಳೆಗಾರ ಮತ್ತು ಮಾಜಿ ಜಿಲ್ಲಾ ಅರಣ್ಯ ವಾರ್ಡನ್ ಎಚ್.ಪಿ. ಮೋಹನ್, ಒಂದು ದಶಕದಲ್ಲಿ ಯೋಜನೆಯ ವೆಚ್ಚ ದ್ವಿಗುಣಗೊಂಡಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯ ನಂತರ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ಹಸಿರು ಕಾರ್ಯಕರ್ತ ಉಮೇಶ್ ಹೇಳಿದರು. ವಿರೋಧ ವ್ಯಕ್ತಪಡಿಸುವವರನ್ನು ಬದಿಗಿಟ್ಟು, ಮಾರ್ಚ್ 2027 ರೊಳಗೆ ಯೋಜನೆಯನ್ನು ಲೋಕಾರ್ಪಣೆ ಮಾಡಲು ರಾಜ್ಯ ಬದ್ಧವಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com