CWMA ಸಭೆಯ ಬಳಿಕವೇ ರೈತರಿಗೆ ಕಾವೇರಿ ನೀರು ಬಿಡುವ ಕುರಿತು ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಕಾವೇರಿ ವಿಚಾರದಲ್ಲಿ ರೈತರನ್ನು ರಕ್ಷಿಸಬೇಕು. ಕುಡಿಯುವ ನೀರಿನ ಅಗತ್ಯಕ್ಕೂ ಆದ್ಯತೆ ನೀಡಬೇಕು. ಜೊತೆಗೆ, ತಮಿಳುನಾಡಿಗೆ ನೀರು ಬಿಡುಗಡೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಬೇಕಾಗಿದೆ.
DK SHIVAKUMAR
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ನೀರಾವರಿಗಾಗಿ ಕಾವೇರಿ ನೀರು ಬಿಡುಗಡೆ ಮಾಡುವ ಕುರಿತು ಜುಲೈ 15ರಂದು ನಡೆಯಲಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ರೈತರನ್ನು ರಕ್ಷಿಸಬೇಕು. ಕುಡಿಯುವ ನೀರಿನ ಅಗತ್ಯಕ್ಕೂ ಆದ್ಯತೆ ನೀಡಬೇಕು. ಜೊತೆಗೆ, ತಮಿಳುನಾಡಿಗೆ ನೀರು ಬಿಡುಗಡೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಬೇಕಾಗಿದೆ. ಜುಲೈ 15ರಂದು ನಡೆಯಲಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಪರವಾದ ವಾದಗಳನ್ನು ಸಮರ್ಪಿಸುತ್ತೇವೆ. ಆ ಸಭೆಯ ನಂತರವೇ ನೀರು ಬಿಡುಗಡೆ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಕಟಿಸುತ್ತೇವೆ," ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಶಾಸಕರು ಕಾವೇರಿ ನೀರನ್ನು ತಕ್ಷಣವೇ ನೀರಾವರಿಗಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, "ಮಂಡ್ಯ, ಶ್ರೀರಂಗಪಟ್ಟಣದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರ ಮನವಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದರೆ, ಸಿಡಬ್ಲ್ಯುಎಂಎ ಸಭೆಯ ಬಳಿಕವೇ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.

DK SHIVAKUMAR
ಮೇಕೆದಾಟು ಯೋಜನೆಗೆ ಬಿಗ್‌ ಬೂಸ್ಟ್‌: ಕಾವೇರಿ ವನ್ಯಜೀವಿ ಧಾಮದಲ್ಲಿ ಬೋರ್‌ವೆಲ್ ಸಮೀಕ್ಷೆಗೆ ಸಿಎಂ ಡಿಕೆ.ಶಿವಕುಮಾರ್ ಗ್ರೀನ್ ಸಿಗ್ನಲ್!

ತಿರುಪತಿ ದೇವಸ್ಥಾನದಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ ಮೊದಲ ಆರತಿ ಅವಕಾಶ ನೀಡುವ ಕುರಿತು ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದಲೂ ತಿರುಪತಿ ದೇವಸ್ಥಾನದಲ್ಲಿ ಮೊದಲ ಆರತಿ ಕರ್ನಾಟಕಕ್ಕೆ ಸಲ್ಲುತ್ತ ಬಂದಿದೆ. ಪ್ರತಿದಿನ ಕರ್ನಾಟಕದ ಪರವಾಗಿ ಒಬ್ಬ ಅಧಿಕಾರಿ ಈ ಆರತಿಯನ್ನು ಸ್ವೀಕರಿಸುತ್ತಿದ್ದರು. ಇನ್ನು ಮುಂದೆ ಆ ಅಧಿಕಾರಿಯ ಬದಲಿಗೆ ಕರ್ನಾಟಕದಿಂದ ದರ್ಶನಕ್ಕೆ ತೆರಳುವ ಜನಪ್ರತಿನಿಧಿಗಳು, ನ್ಯಾಯಮೂರ್ತಿಗಳು, ಸರ್ಕಾರಿ ಅಧಿಕಾರಿಗಳು, ಸಂಸದರು, ಮೇಯರ್‌ಗಳು, ತಹಶೀಲ್ದಾರ್‌ಗಳು ಸೇರಿದಂತೆ ವಿವಿಧ ಹುದ್ದೆಯ ಗಣ್ಯರಿಗೆ ಈ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಈ ಅವಕಾಶ ಯಾವುದೇ ಒಂದು ರಾಜಕೀಯ ಪಕ್ಷದ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, "ಇದಕ್ಕೆ ನಿಗದಿತ ಮಾರ್ಗಸೂಚಿಗಳಿವೆ. ನಾವು ಕೇವಲ ಮೊದಲ ಆರತಿ ಸ್ವೀಕರಿಸುವ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಮಾಡುತ್ತಿದ್ದೇವೆ. ಉಳಿದ ಎಲ್ಲ ನಿಯಮಗಳು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಮಾರ್ಗಸೂಚಿಗಳ ಪ್ರಕಾರವೇ ಮುಂದುವರಿಯಲಿವೆ. ದೇವಸ್ಥಾನದ ಆಡಳಿತದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com