

ಬೆಂಗಳೂರು: ರಾಜಧಾನಿಯ ಜೀವನಾಡಿಯಾಗಿರುವ ಬಿಎಂಟಿಸಿ (BMTC) ಬಸ್‍ನಲ್ಲಿ ಖದೀಮರು, ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಾ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ ನೋಡಿ; ಪ್ರಯಾಣಿಕರಂತೆ ಬಸ್‍ನಲ್ಲಿ ಬಂದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗನ್ನೇ ಕದ್ದಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಘಟನೆ?
ಬಿಎಂಟಿಸಿ ಬಸ್ ನಂಬರ್ KA-57 F 6331 ನಲ್ಲಿ ಪ್ರಯಾಣಿಕರು ಹೆಚ್ಚಿಗಿದ್ದನ್ನೇ ಲಾಭ ಮಾಡಿಕೊಂಡ ಮಹಿಳೆಯೊಬ್ಬಳು, ಅತ್ಯಂತ ಚಾಣಾಕ್ಷತನದಿಂದ ಕಂಡಕ್ಟರ್ ಅವರ ಡ್ಯೂಟಿ ಬ್ಯಾಗ್ ಅನ್ನು ಎಗರಿಸಿದ್ದಾಳೆ. ಇನ್ನು, ಕದ್ದ ಟಿಕೆಟ್ ಮತ್ತು ಹಣದ ಬ್ಯಾಗ್ ಅನ್ನು ತಾನು ತಂದಿದ್ದ ಬ್ಯಾಗ್‌ನೊಳಗೆ ಯಾರಿಗೂ ತಿಳಿಯದಂತೆ ಅಡಗಿಸಿಟ್ಟುಕೊಂಡಿದ್ದಳು.
ಏತನ್ಮಧ್ಯೆ, ಬ್ಯಾಗ್ ನಾಪತ್ತೆಯಾಗಿರುವುದನ್ನು ಗೊತ್ತಾದ ತಕ್ಷಣವೇ, ಕಂಡಕ್ಟರ್ ಬಸ್‍ನ ಡೋರ್ ಕ್ಲೋಸ್ ಮಾಡಿದ್ದಾರೆ. ಇದರಿಂದಾಗಿ ಕಳ್ಳತನ ಮಾಡಿದ ಮಹಿಳೆಗೆ ಬಸ್‍ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ತಗ್ಲಾಕೊಂಡ ನಂತರ ಆ ಮಹಿಳೆ, ಅಮಾಯಕಿಯಂತೆ ನಟಿಸಿ, ನಾನು ಕದ್ದಿಲ್ಲ ಎಂದು ಜೋರಾಗಿ ಕಿರುಚಾಡುತ್ತಾ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. "ಬ್ಯಾಗ್ ಓಪನ್ ಮಾಡಬೇಡಿ, ಪೊಲೀಸರನ್ನು ಕರೆಯಿರಿ" ಎಂದು ಕೂಗಾಡುತ್ತಾ ತಾನು ಅಮಾಯಕಿ ಎಂಬಂತೆ ನಟಿಸಿದ್ದಾಳೆ.
ಮುಂದುವರೆದು, ಆಕೆಯ ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಕಂಡಕ್ಟರ್‌ನ ಟಿಕೆಟ್ ಬ್ಯಾಗ್ ಪತ್ತೆಯಾಗಿದೆ. ಇದಾದ ನಂತರ, ಬಸ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಳ್ಳತನ ಆರೋಪದ ಮೇಲೆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಈ ಮಹಿಳೆ ತಮಿಳುನಾಡು ಮೂಲದವಳೆಂದು ಶಂಕಿಸಲಾಗಿದೆ.