'ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ಮಾತು ಸಾಲದು, ಯೋಜನೆಯನ್ನೇ ರದ್ದುಪಡಿಸಿ'; ಸಿಎಂ ಡಿಕೆ.ಶಿವಕುಮಾರ್'ಗೆ ಬಿಡದಿ ರೈತರ ಒತ್ತಾಯ

ಕೆಲವು ದೊಡ್ಡ ಜಮೀನು ಹೊಂದಿರುವ ರೈತರು ಜಮೀನು ನೀಡಲು ಮುಂದಾದರೆ, ಸಣ್ಣ ರೈತರಿಗೆ ಕೃಷಿ ಮಾಡುವುದು ಕಷ್ಟವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
AI Image
ಎಐ ಸೃಷ್ಟಿತ ಚಿತ್ರ
Updated on

ಬೆಂಗಳೂರು: ಬಲವಂತವಾಗಿ ಜಮೀನು ಪಡೆಯುವುದಿಲ್ಲ ಎಂಬ ಮಾತು ಸಾಲದು, ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಹಾಗೂ ಎಐ ಸಿಟಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಅಧಿಕೃತ ಘೋಷಣೆ ಮಾಡಬೇಕು ಎಂದು ಬಿಡದಿ ರೈತರು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಬಿಡದಿ ಹೋಬಳಿಯ 20ಕ್ಕೂ ಹೆಚ್ಚು ಗ್ರಾಮಗಳ ರೈತರು, ಸರ್ಕಾರ ಈಗಾಗಲೇ ಪರಿಹಾರ ಪ್ಯಾಕೇಜ್ ಘೋಷಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಕೆಲವು ದೊಡ್ಡ ಜಮೀನು ಹೊಂದಿರುವ ರೈತರು ಜಮೀನು ನೀಡಲು ಮುಂದಾದರೆ, ಸಣ್ಣ ರೈತರಿಗೆ ಕೃಷಿ ಮಾಡುವುದು ಕಷ್ಟವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು ಶೇ.20ರಷ್ಟು ಜಮೀನಿನ ಮಾಲೀಕರು ಹೊರಗಿನವರು ಹಾಗೂ ಉದ್ಯಮಿಗಳು. ಅವರು ಸರ್ಕಾರಕ್ಕೆ ಭೂಮಿ ನೀಡಿದರೆ, ಅವರ ಜಮೀನಿನ ಮಧ್ಯದಲ್ಲಿರುವ ಸಣ್ಣ ರೈತರ ಜಮೀನಿಗೆ ಹೋಗುವ ದಾರಿ, ನೀರಿನ ಮೂಲಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ ಎಂದು ಹೇಳಿದ್ದಾರೆ.

ಮಂಡಲಹಳ್ಳಿ ನಾಗರಾಜ್ ಮಾತನಾಡಿ, "ನಮ್ಮ ಕುಟುಂಬದ ಬಳಿ ಸುಮಾರು 40 ಎಕರೆ ಜಮೀನಿದೆ. ಒಂದು ಸಣ್ಣ ರೈತನಿಗೆ 2ರಿಂದ 5 ಎಕರೆ ಜಮೀನಿದ್ದರೆ, ಅದರ ಸುತ್ತಲಿನ 15ರಿಂದ 20 ಎಕರೆ ಜಮೀನಿನ ಮಾಲೀಕರು ಸರ್ಕಾರಕ್ಕೆ ಭೂಮಿ ನೀಡಿದರೆ, ಆ ಜಮೀನಿಗೆ ಬೇಲಿ ಹಾಕಲಾಗುತ್ತದೆ. ಆಗ ಸಣ್ಣ ರೈತ ತನ್ನ ಜಮೀನಿಗೆ ಹೇಗೆ ಹೋಗಬೇಕು? ನೀರಿನ ಮೂಲಗಳು ಮತ್ತು ಸಂಪರ್ಕ ಮಾರ್ಗವೇ ಕಡಿತವಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದರು.

ಬೈರಮಂಗಲದ ಮಾಜಿ ತಾಲ್ಲೂಕು ಸದಸ್ಯ ಎಚ್.ಜಿ. ಪ್ರಕಾಶ್ ಮಾತನಾಡಿ, ರೈತರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸುವ ಮುಖ್ಯಮಂತ್ರಿ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ಅದೇ ಸಮಯದಲ್ಲಿ ಬಿಡದಿ ಹೋಬಳಿಯ ಹೊಸೂರು, ಕೆ.ಜಿ. ಗೊಳ್ಳರಪಾಳ್ಯ, ಅರಳಾಳುಸಂದ್ರ ಮತ್ತು ಬನ್ನಿಗಿರಿ ಗ್ರಾಮಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ ಎಂದು ಹೇಳಿದರು.

AI Image
Watch | ಬಿಡದಿ ಟೌನ್‌ಶಿಪ್ ಅಗತ್ಯವಿಲ್ಲದಿದ್ದರೆ ಏಕೆ ಮುಂದುವರಿಯಬೇಕು? HDK ಪ್ರಶ್ನೆ

"ನಾವು ನಮ್ಮ ಪ್ರಾಣವನ್ನೇ ಕೊಡುತ್ತೇವೆ, ಆದರೆ, ನಮ್ಮ ಜಮೀನನ್ನು ಬಿಡಲು ಒಪ್ಪುವುದಿಲ್ಲ. ಸರ್ಕಾರ ಮೊದಲು ಅಂತಿಮ ಅಧಿಸೂಚನೆಯನ್ನು ಹಿಂಪಡೆಯಬೇಕು," ಎಂದು ಆಗ್ರಹಿಸಿದ್ದಾರೆ,

ರೈತ ಮುಖಂಡೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ಭಾಗ್ಯ ನಾಗರಾಜ್ ಮಾತನಾಡಿ, ಬಿಡದಿ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ರೈತರು, ಅದರಲ್ಲೂ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಅನೇಕ ಕುಟುಂಬಗಳು ರೇಷ್ಮೆ ಕೃಷಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಜಮೀನು ಬಲವಂತವಾಗಿ ಪಡೆಯುವುದಿಲ್ಲ ಎಂಬ ಹೇಳಿಕೆ ನೀಡುವ ಬದಲು ಯೋಜನೆಯನ್ನೇ ರದ್ದುಪಡಿಸಬೇಕು. ಆಗ ಮಾತ್ರ ರೈತರ ಆತಂಕ ದೂರವಾಗುತ್ತದೆ," ಎಂದು ಒತ್ತಾಯಿಸಿದರು.

ಬಿಡದಿ ಟೌನ್‌ಶಿಪ್ ಹಾಗೂ ಎಐ ಸಿಟಿ ಯೋಜನೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸರ್ಕಾರ ಸಮಿತಿ ರಚನೆ ಘೋಷಿಸಿದರೂ ಯೋಜನೆಯನ್ನು ಸಂಪೂರ್ಣ ಕೈಬಿಡುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com