'ಟೈ ಧರಿಸಿಲ್ಲ' ಎಂದು ಕಾಲು ಮುಟ್ಟಲು ಒತ್ತಾಯ: ದುಃಸ್ವಪ್ನವಾದ ಕನಸಿನ ಉದ್ಯೋಗ; IndiGo ವಿರುದ್ಧ ಮಾಜಿ ಉದ್ಯೋಗಿ ಆರೋಪ, ಭಾರೀ ಚರ್ಚೆ..!

ಕೇವಲ ಟೈ ಧರಿಸದೇ ಕೆಲಸಕ್ಕೆ ಬಂದಿದ್ದಕ್ಕಾಗಿ ತಮಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಅಲ್ಲದೆ, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ (IndiGo) ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಲ್ಲಿ ಗ್ರೌಂಡ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಜಂಶೀದ್ ವೈ. (Mohammad Jamshid Y), ಸಂಸ್ಥೆಯಲ್ಲಿನ "ಮಾನವೀಯತೆ ಇಲ್ಲದ ಕೆಲಸದ ಸಂಸ್ಕೃತಿ"ಯೇ ತಮ್ಮ ಕನಸಿನ ಉದ್ಯೋಗ ತೊರೆಯುವಂತೆ ಮಾಡಿತು ಎಂದು ಆರೋಪಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅವರು, ಕೇವಲ ಟೈ ಧರಿಸದೇ ಕೆಲಸಕ್ಕೆ ಬಂದಿದ್ದಕ್ಕಾಗಿ ತಮಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಅಲ್ಲದೆ, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಅದನ್ನು ನಿರಾಕರಿಸಿದ್ದರಿಂದ ಮತ್ತಷ್ಟು ಅವಮಾನ ಎದುರಿಸಬೇಕಾಯಿತು ಎಂದು ಆರೋಪಿಸಿದ್ದಾರೆ.

ಘಟನೆ ನಡೆದ ದಿನ ಅವರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ವಾರದ ಪರಿಶೀಲನೆ ನಡೆಸುವ ಜವಾಬ್ದಾರಿಯಲ್ಲಿದ್ದೆ. ಪರಿಶೀಲನೆ ಮುಗಿಸಿ ಹಿಂದಿರುಗುವಾಗ ಅಧಿಕಾರಿಯೊಬ್ಬರು ತಾವು ಟೈ ಧರಿಸದಿರುವುದನ್ನು ಗಮನಿಸಿದ್ದರು.

"ಟೈ ಧರಿಸದೇ ಬಂದಿರುವುದು ನನ್ನ ತಪ್ಪು ಎಂದು ಕೂಡಲೇ ಒಪ್ಪಿಕೊಂಡೆ. ಅದು ಉದ್ದೇಶಪೂರ್ವಕವಾಗಿರಲಿಲ್ಲ. ಅಜಾಗರೂಕತೆಯಿಂದ ಮರೆತುಬಿಟ್ಟಿದ್ದೆ ಎಂದು ಕ್ಷಮೆ ಕೇಳಿದೆ. ಮುಂದೆ ಈ ತಪ್ಪು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದೆ.

ಆದರೆ, ಅಷ್ಟಕ್ಕೆ ವಿಷಯ ಮುಗಿಯಲಿಲ್ಲ. ಸಂಬಂಧಿತ ಅಧಿಕಾರಿ ಮೇಲ್ವಿಚಾರಕಿಯನ್ನು ಕರೆಸಿ, ಟೈ ಇಲ್ಲದ ಉದ್ಯೋಗಿಯನ್ನು ಟರ್ಮಿನಲ್‌ಗೆ ಹೇಗೆ ಬಿಡಲಾಯಿತು ಎಂದು ಪ್ರಶ್ನಿಸಿದರು. ಮೇಲ್ವಿಚಾರಕಿ ಕ್ಷಮೆ ಕೇಳಿದ ಬಳಿಕ, ಅವರ ಬಳಿಯೂ ಕ್ಷಮೆ ಕೇಳುವಂತೆ ಸೂಚಿಸಲಾಯಿತು. ತಕ್ಷಣವೇ ಕ್ಷಮೆಯಾಚಿಸಿದೆ. ಇದರ ಬಳಿಕ ನಡೆದ ಬೆಳವಣಿಗೆಯೇ ತಮ್ಮನ್ನು ತೀವ್ರವಾಗಿ ನೋಯಿಸಿತು.

File photo
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಅವಘಡ; ತಪ್ಪಿದ ದೊಡ್ಡ ದುರಂತ!

ನಂತರ ನನ್ನ ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ನನಗೆ ಆದೇಶಿಸಲಾಯಿತು. ವೃತ್ತಿಪರ ಕೆಲಸದ ಸ್ಥಳದಲ್ಲಿ ಇದು ಅತ್ಯಂತ ಅವಮಾನಕಾರಿ ಹಾಗೂ ಮಾನವೀಯತೆಗೆ ವಿರುದ್ಧವಾದ ನಡೆ ಎಂದು ಭಾವಿಸಿ, ನಾನು ಗೌರವಪೂರ್ವಕವಾಗಿ ನಿರಾಕರಿಸಿದೆ. ಅದಾದ ಬಳಿಕ ತಕ್ಷಣವೇ ಟರ್ಮಿನಲ್‌ನಿಂದ ಹೊರಹೋಗುವಂತೆ ಹೇಳಲಾಯಿತು ಎಂದು ಆರೋಪಿಸಿದ್ದಾರೆ.

ಇದಾದ ನಂತರ ಪೂರ್ವನಿಗದಿತ ರಜೆ ಮುಗಿಸಿ ಕೆಲಸಕ್ಕೆ ಹಿಂತಿರುಗಿದಾಗ, ಈ ಘಟನೆ ಸಹೋದ್ಯೋಗಿಗಳ ನಡುವೆ ಚರ್ಚೆಯ ವಿಷಯವಾಗಿತ್ತು. ಇದರಿಂದ ಮತ್ತಷ್ಟು ಮಾನಸಿಕ ಅವಮಾನ ಅನುಭವಿಸಬೇಕಾಯಿತು.

ಘಟನೆಯ ನಂತರ ಇಂಡಿಗೋ ಸಂಸ್ಥೆಯ ನೈತಿಕತೆ ಮತ್ತು ನಿಯಮ ಪಾಲನಾ ವಿಭಾಗಕ್ಕೆ (Ethics & Compliance Team) ದೂರು ನೀಡಿದ್ದಾಗಿ ಜಂಶೀದ್ ಹೇಳಿದ್ದಾರೆ. ಆದರೆ ತನಿಖೆಯ ಫಲಿತಾಂಶದಿಂದ ತೃಪ್ತಿ ಆಗಲಿಲ್ಲ ಎಂದಿದ್ದಾರೆ.

"ತನಿಖೆ ಮುಗಿದ ಬಳಿಕ, ಘಟನೆ ನಡೆದ ದಿನ ನಾನು ಟರ್ಮಿನಲ್-1ರಲ್ಲಿ ಇದ್ದುದನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಲಾಯಿತು. ತನಿಖಾ ಪ್ರಕ್ರಿಯೆಯನ್ನು ನಾನು ಗೌರವಿಸುತ್ತೇನೆ. ಆದರೆ ಈ ತೀರ್ಮಾನ ನನಗೆ ಅರ್ಥವಾಗಲಿಲ್ಲ.

"ಟರ್ಮಿನಲ್-1ರ ಚೆಕ್-ಇನ್ ಪ್ರದೇಶ ಸಂಪೂರ್ಣವಾಗಿ ಸಿಸಿಟಿವಿ ನಿಗಾದಲ್ಲಿದೆ. ಅಂತಹ ಸ್ಥಳದಲ್ಲಿ ನಾನು ಇದ್ದದ್ದನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ ಎನ್ನುವುದು ನನಗೆ ಆಶ್ಚರ್ಯ ಉಂಟುಮಾಡಿತು ಎಂದು ಹೇಳಿದ್ದಾರೆ.

ಜಂಶೀದ್ ಅವರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಉದ್ಯೋಗಿಗಳೊಂದಿಗೆ ನಡೆದುಕೊಳ್ಳುವ ವಿಧಾನ, ಕಾರ್ಯಸ್ಥಳದಲ್ಲಿನ ಗೌರವ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕೆಲಸದ ಸಂಸ್ಕೃತಿ ಕುರಿತು ಹೊಸ ಚರ್ಚೆಗೆ ವೇದಿಕೆ ಕಲ್ಪಿಸಿವೆ.

ಆದರೆ, ಈ ಆರೋಪಗಳ ಕುರಿತು ಇಂಡಿಗೋ ಸಂಸ್ಥೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಸ್ಥೆಯ ಪ್ರತಿಕ್ರಿಯೆ ಹಾಗೂ ಆಂತರಿಕ ತನಿಖೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಈ ಪ್ರಕರಣದಲ್ಲಿ ಮಾಜಿ ಉದ್ಯೋಗಿಯ ಆರೋಪಗಳು ಮಾತ್ರ ಸಾರ್ವಜನಿಕವಾಗಿ ಲಭ್ಯವಿದ್ದು, ಅವುಗಳ ಕುರಿತು ಇಂಡಿಗೋ ಸಂಸ್ಥೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಹೀಗಾಗಿ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಸಂಸ್ಥೆಯ ಪ್ರತಿಕ್ರಿಯೆ ಹಾಗೂ ಮುಂದಿನ ಬೆಳವಣಿಗೆಗಳ ಬಳಿಕವೇ ಸ್ಪಷ್ಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com