ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಜ್ಜಾಗಲಿದೆ Bengaluru; 5,000 ಕೋಟಿ ರೂ. ವೆಚ್ಚದಲ್ಲಿ Kanteerava stadium ವಿಶ್ವಮಟ್ಟಕ್ಕೆ..!

ಕಾಮನ್‌ವೆಲ್ತ್ ಅಥವಾ ಇತರ ಜಾಗತಿಕ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಬೇಕಾದರೆ ಅದಕ್ಕೆ ತಕ್ಕ ಮಟ್ಟದ ಮೂಲಸೌಕರ್ಯ ಇರಬೇಕು. ಈಗಿರುವ ಸೌಲಭ್ಯಗಳಿಂದ ರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಮಾತ್ರ ಆಯೋಜಿಸಲು ಸಾಧ್ಯ.
File photo
ಕಂಠೀರವ ಸ್ಟೇಡಿಯಂ
Updated on

ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಸುಮಾರು 5,000 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು. ಈ ಯೋಜನೆಗೆ ಸಚಿವ ಸಂಪುಟ ಅಂತಿಮ ಅನುಮೋದನೆ ನೀಡಲಿದೆ ಎಂದು ಹೇಳಿದರು.

"ಕಾಮನ್‌ವೆಲ್ತ್ ಅಥವಾ ಇತರ ಜಾಗತಿಕ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಬೇಕಾದರೆ ಅದಕ್ಕೆ ತಕ್ಕ ಮಟ್ಟದ ಮೂಲಸೌಕರ್ಯ ಇರಬೇಕು. ಈಗಿರುವ ಸೌಲಭ್ಯಗಳಿಂದ ರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಮಾತ್ರ ಆಯೋಜಿಸಲು ಸಾಧ್ಯ. ಆದ್ದರಿಂದ ವಿಶ್ವಮಟ್ಟದ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಇದಕ್ಕೆ ಅಂದಾಜು 5,000 ಕೋಟಿ ರೂ. ವೆಚ್ಚವಾಗಬಹುದು ಎಂದು ತಿಳಿಸಿದರು.

ಕ್ರೀಡಾಪಟು ವಿದ್ಯಾರ್ಥಿಗಳಿಗೆ ಹಾಜರಾತಿ ವಿನಾಯಿತಿ

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಹಾಜರಾತಿ ವಿನಾಯಿತಿ, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು ಎಂದು ಘೋಷಿಸಿದರು. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದರು.

ಕ್ರೀಡಾಪಟು ವಿದ್ಯಾರ್ಥಿಗಳು ಕೇವಲ ಶೇ.50ರಷ್ಟು ಹಾಜರಾತಿ ಹೊಂದಿದ್ದರೂ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ತಿಳಿಸಿದ ಅವರು, ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಕಾರಣ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಕ್ರೀಡೆಗಾಗಿ ಯಾರೂ ಪರೀಕ್ಷೆಯಿಂದ ವಂಚಿತರಾಗಬಾರದು ಎಂದರು.

File photo
'ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ': ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ; ಕೇಂದ್ರದಿಂದ ವಿಶೇಷ ನೆರವಿಗೆ ಮನವಿ

34 ಕ್ರೀಡಾ ವಿಭಾಗಗಳ ಪ್ರತಿಭಾವಂತ ಕ್ರೀಡಾಪಟುಗಳಿಗೆ ಈ ಸೌಲಭ್ಯ ಅನ್ವಯವಾಗಲಿದ್ದು, ಅರ್ಹ ಸ್ಪರ್ಧೆಗಳ ಪಟ್ಟಿಯನ್ನೂ ಸರ್ಕಾರ ಪ್ರಕಟಿಸಿದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲು

ರಾಜ್ಯದ ವಿವಿಧ ಇಲಾಖೆಗಳಲ್ಲಿನ 72,000 ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲು ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಈ ಸಂಬಂಧ ಕರಡು ಅಧಿಸೂಚನೆ ಈಗಾಗಲೇ ಪ್ರಕಟವಾಗಿದ್ದು, ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಈ ಮೀಸಲಾತಿಯಿಂದ ಸುಮಾರು 2,000 ಹುದ್ದೆಗಳು ಕ್ರೀಡಾಪಟುಗಳಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.

ಮೊದಲ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ

ರಾಜ್ಯದ ಸಂಸ್ಕೃತಿ, ಕ್ರೀಡೆ, ಯುವಜನರ ಆಲೋಚನೆಗಳು ಹಾಗೂ ಆಶಯಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು. ಈ ಉತ್ಸವವನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿ ಪ್ರದಾನ

ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿದ್ದ ಏಕಲವ್ಯ ಪ್ರಶಸ್ತಿ, ಕ್ರೀಡಾರತ್ನ ಪ್ರಶಸ್ತಿ, ಕ್ರೀಡಾಪೋಷಕ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಹಾಕಿ ದಂತಕಥೆ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ಪ್ರದಾನ ಮಾಡಲಾಗುವುದು ಎಂದು ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com