Mysuru Chamundi Hills: ಇಂದು ಮೊದಲ ಆಷಾಢ ಶುಕ್ರವಾರ, ಹಸಿರು ಸೀರೆಯಲ್ಲಿ ಕಂಗೊಳಿಸಿದ ಚಾಮುಂಡಿ, ವಿಶೇಷ ಪೂಜೆ-Video

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಇಡೀ ಬೆಟ್ಟವನ್ನು ವಿಶೇಷ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯುತ್ತಿದೆ.
Mysuru Chamundi Devi on first day of Ashada Friday
ಮೈಸೂರು ಚಾಮುಂಡಿ ದೇವಿಗೆ ಇಂದು ಹಸಿರು ಸೀರೆಯುಟ್ಟು ಅಲಂಕಾರ
Updated on

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಆವರಿಸಿದೆ. ಭಕ್ತರು ಮುಂಜಾನೆಯಿಂದಲೇ ದೇವಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಹಲವರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಇಡೀ ಬೆಟ್ಟವನ್ನು ವಿಶೇಷ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯುತ್ತಿದೆ. ತಾಯಿ ಚಾಮುಂಡಿ ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಉತ್ಸವ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬೆಳಗಿನ ಜಾವದಿಂದಲೇ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ನಾಗಶೇಷ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ (ಕಂಗೊಳಿಸುತ್ತಿದ್ದು, ನೋಡಲೆರಡು ಕಣ್ಣು ಸಾಲದಮ್ಮ ಎನ್ನುವಂತಿದೆ ದೇವಿ ಶೃಂಗಾರ. ನಸುಕಿನ ಜಾವ 3.30ಕ್ಕೆ ಪೂಜಾ ಕೈಂಕರ್ಯ ಶುರುವಾಗಿದ್ದು, ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.

ಭಕ್ತರಿಗೆ ದರ್ಶನ ವ್ಯವಸ್ಥೆ

ಈ ಬಾರಿ 2 ಸಾವಿರ ರೂ. ಮೌಲ್ಯದ ಟಿಕೆಟ್ ಪಡೆದವರಿಗೆ ನೇರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮುಂಜಾನೆ 5:30ರಿಂದ ಬೆಳಗ್ಗೆ 10 ಗಂಟೆಯವರೆಗೆ ವಿವಿಐಪಿಗಳಿಗೆ ದರ್ಶನಕ್ಕೆ ಅವಕಾಶವಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗೆ ಸರದಿ ಸಾಲಿನಲ್ಲಿ ಹೋಗಲು ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಭಕ್ತರು, ಮೆಟ್ಟಿಲುಗಳ ಮೂಲಕ ಬರುವ ಭಕ್ತರು ಹಾಗೂ 2000 ರೂ ಟಿಕೆಟ್ ಪಡೆದು ಬರುವ ಭಕ್ತರಿಗೆ ಪ್ರತ್ಯೇಕ ಕ್ಯೂ ಲೈನ್ ವ್ಯವಸ್ಥೆ ಮಾಡಲಾಗಿದೆ.

ವಿಐಪಿ ದರ್ಶನಕ್ಕೆ ಸಮಯ ನಿಗದಿ, ಸೂಕ್ತ ಪೊಲೀಸ್​ ಬಂದೋಬಸ್ತ್

ಮಹಿಷಾಸುರ ಪ್ರತಿಮೆಯವರೆಗೆ ಮಾತ್ರ ವಿಐಪಿ ವಾಹನಗಳು ಬರಲು ಅವಕಾಶ ನೀಡಲಾಗಿದೆ. ವಿಐಪಿಗಳಿಗೆ ಬೆಳಗ್ಗೆ 9.30ರ ವರೆಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ಹೋಗಬೇಕು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಭಾರಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟು 1,588 ಪೊಲೀಸರು ನಿಯೋಜನೆ ಮಾಡಿದ್ದು, ಡಿಐಜಿ 1, ಡಿಸಿಪಿ 4, ಎಸಿಪಿ 12, ಪಿಐ 31, ಪಿಎಸ್ಐ 67, ಎಎಸ್ಐ 115, ಎಚ್.ಸಿ 329, ಪಿಸಿ 729,ಹೋಂ ಗಾರ್ಡ್ 300 ಒಟ್ಟು 1588 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com