

ಚಿಕ್ಕಬಳ್ಳಾಪುರ: ನನಗಿಂತಲೂ ಹಿಂದೆ ಇದ್ದ ಎಲ್ಲಾ ಎಂಎಲ್ಎಗಳು ಚುನಾವಣೆ ಸಂದರ್ಭದಲ್ಲಿ ಕೇವಲ ಮತವನ್ನು ಹಾಕಿಸಿಕೊಂಡು ಮನೆಗೆ ಹೋದರು. ನನ್ನಂತೆ ಅವರೇನು ಸೌಲಭ್ಯಗಳನ್ನು ಕೊಡಲಿಲ್ಲ. ನಾನು ಎಲ್ಲವನ್ನೂ ಕೊಟ್ಟರು ಸೋಲಿನ ಉಡುಗೊರೆಯನ್ನು ಯಾಕೆ ಕೊಟ್ಟಿರಿ? ಎಂದು ಸಂಸದ ಡಾ.ಕೆ.ಸುಧಾಕರ್ ಕಾರ್ಯಕರ್ತರ ಮುಂದೆ ಗದ್ಗದಿತರಾದರು.
ತಾಲೂಕಿನ ದೊಡ್ಡಕಿರುಗಂಬಿ, ಶ್ರೀರಾಮಪುರ, ಕಣಿತಹಳ್ಳಿ ಗ್ರಾಮಗಳಲ್ಲಿ ಗುರುವಾರ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಹಮ್ಮಿಕೊಂಡಿದ್ದ ವಿವಿಧ ಮೂಲಸೌಕರ್ಯ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು, 2023ರ ಚುನಾವಣೆಯಲ್ಲಿ ನನಗೆ ಯಾಕೆ ಹೆಚ್ಚಿನ ಮತ ಹಾಕಲಿಲ್ಲ ಎಂಬುದು ಈ ಕ್ಷಣಕ್ಕೂ ಅರ್ಥವಾಗುತ್ತಿಲ್ಲ.
ನಾನೇನಾದರೂ ತಪ್ಪು ಮಾಡಿದರೆ, ನಿಮ್ಮ ನಿರೀಕ್ಷೆ ಹುಸಿ ಮಾಡಿ ಕೆಲಸ ಮಾಡದಿದ್ದರೆ ಸೋಲಿಸಿ ತಪ್ಪಿಲ್ಲ. ನೀವು ಕೇಳದೆ ಎಲ್ಲವನ್ನೂ ನಿಮ್ಮ ಮನೆಯ ಬಾಗಿಲಿಗೆ ತಲುಪಿಸಿದೆ. ಆದರೂ ನೀವು ಮತ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಪಕ್ಷ ನನ್ನನ್ನು ಸಂಸದನಾಗಿಯೇ ಮುಂದುವರಿಸಿದರೆ ಹಾಗೆಯೇ ಇರುತ್ತೇನೆ. ವಿಧಾನಸಭೆಗೆ ಪಕ್ಷದ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರು ಚರ್ಚಿಸಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರನ್ನೇ ನನ್ನ ಪ್ರತಿನಿಧಿ ಎಂದು ಭಾವಿಸಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದಂತೆ. ಕ್ಷೇತ್ರದ ಅಭಿವೃದ್ಧಿ ಇದೇ ರೀತಿ ಮುಂದುವರಿಯಲಿದೆ' ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕ್ಷೇತ್ರದ ಮಹಿಳೆಯರಿಗೆ ಶ್ವಾಸಕೋಶದ ತೊಂದರೆ ಆಗಬಾರದೆಂದು ನಮ್ಮ ಸರ್ಕಾರ ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ನೀಡಿದೆ. ಕ್ಷೇತ್ರದಲ್ಲಿ ಸಾಯಿ ಕೃಷ್ಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುಕ್ಕರ್, ಮಿಕ್ಸರ್ ಗ್ರೈಂಡರ್, ಸ್ಟೌವ್ ನೀಡುವ ಮೂಲಕ ಮಹಿಳೆಯರ ಶ್ರಮವನ್ನು ತಗ್ಗಿಸಲಾಗಿದೆ. ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟಾಗ ಮತದಾನದ ಸಂದರ್ಭದಲ್ಲಿ ಯಾವುದಾದರೂ ಒಂದು ನೆನಪಿಗೆ ಬರಬೇಕಲ್ಲ ಎಂದು ಮೆಲುಕು ಹಾಕಿದರು.
ಈಗ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೆ 5000 ನಗದು ಪ್ರೋತ್ಸಾಹ ಧನ ಕೊಡುತ್ತಿದ್ದೇನೆ. ಇವನ್ನೆಲ್ಲ ನಾವು ಏಕೆ ಮಾಡುತ್ತಿದ್ದೇವೆ? ಎಂಬುದು ನಿಮಗೆ ಅರ್ಥವಾಗಬೇಕು. ನಾನು ಡ್ರಾಮಾ ಮಾಡುತ್ತಿಲ್ಲ. ನಾವು ನೀಲಿ ಟವಲ್ ಹಾಕಿಕೊಳ್ಳುವುದು, ದೊಡ್ಡಮ್ಮ ಅನ್ನುವುದು ಅವ್ವ ಅನ್ನೋದು ಮಾಡುವುದಿಲ್ಲ.
ಬಡವರ ಮನೆಗೆ ಹೋಗಿ ತಟ್ಟೆ ತೆಗೆದುಕೊಂಡು ತಾನೇ ಊಟ ಹಾಕಿಕೊಳ್ಳುವುದು ಮಾಡುವುದಿಲ್ಲ. ಇಷ್ಟಕ್ಕೆ ನೀವು ತೃಪ್ತರಾಗಿ ಆಕಾಶವನ್ನೇ ತಂದುಕೊಟ್ಟಷ್ಟು ಸಂತೋಷದಿಂದ ಮತ ಹಾಕಿದಿರಿ. ಈ ತರದ ಡ್ರಾಮಾ ನಾನು ಮಾಡುವುದಿಲ್ಲ ಎನ್ನುವ ಮೂಲಕ ಹೆಸರು ಹೇಳದೇ ಶಾಸಕ ಪ್ರದೀಪ್ ಈಶ್ವರವರ ಕಾಲೆಳೆದರು.
ಆಕಾಶ ಎಷ್ಟು ದೂರ ಇದೆಯೋ? ನಿಮ್ಮ ಶಾಸಕನು ಅಷ್ಟೇ ದೂರ ಇದ್ದಾರೆ. ಕೊನೆಗೆ ನಿಮ್ಮ ಗ್ರಾಮಕ್ಕೆ ನಿಮ್ಮ ಬಳಿಗೆ ಬಂದವನು ಇದೆ ಸುಧಾಕರ. ನೀವು ಮತ ಹಾಕಿದ್ದೀರೊ ಇಲ್ಲವೋ ಗೊತ್ತಿಲ್ಲ ಎಂದರು.