ಶಾಸಕ ಪ್ರದೀಪ್​​ ಈಶ್ವರ್​​ ಮೇಲೆ ಚಪ್ಪಲಿ ಎಸೆದ ಪ್ರಕರಣ: ನಾಲ್ವರ ವಿರುದ್ಧದ ಕೇಸ್​​ಗೆ ಹೈಕೋರ್ಟ್ ತಡೆಯಾಜ್ಞೆ

ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಕೇಸ್ ದಾಖಲಿಸಬಹುದಿತ್ತು. 800 ಜನರಲ್ಲಿ ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದೇಕೆ? ಎಂದು ಚಿಕ್ಕಬಳ್ಳಾಪುರ ಪೊಲೀಸರಿಗೆ ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ.
Chappal thrown on Pradeep Eshwar
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಕರಣ
Updated on

ಬೆಂಗಳೂರು: ಕಾಂಗ್ರೆಸ್​​ ಶಾಸಕ ಪ್ರದೀಪ್​​ ಈಶ್ವರ್​​ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಪ್ರಕರಣ ಸಂಬಂಧ ನಾಲ್ವರ ವಿರುದ್ಧದ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಕೇಸ್ ದಾಖಲಿಸಬಹುದಿತ್ತು. 800 ಜನರಲ್ಲಿ ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದೇಕೆ? ಎಂದು ಚಿಕ್ಕಬಳ್ಳಾಪುರ ಪೊಲೀಸರಿಗೆ ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸೂಚಿಸಿ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್​.ಮಹೇಂದ್ರ ಮತ್ತು ಟಿ.ಎಸ್‌.ಪ್ರಕಾಶ್ ವಿರುದ್ಧದ ಕೇಸ್​ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನಡೆದ ಘಟನೆಯೇನು?

ಚಿಕ್ಕಬಳ್ಳಾಪುರದಲ್ಲಿ ಜೂನ್​​ 27ರಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಗಲಾಟೆ ನಡೆದಿತ್ತು. ಹೆಚ್ ಡಿ ಕುಮಾರಸ್ವಾಮಿ ಅವರ ಕುರಿತು ಪ್ರದೀಪ್ ಈಶ್ವರ್ ನೀಡಿದ್ದ ಹೇಳಿಕೆ ಬಗ್ಗೆ ಸಿಡಿದೆದ್ದಿದ್ದ ಜೆಡಿಎಸ್​​ ಕಾರ್ಯಕರ್ತರು, ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆಯುತ್ತಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ನುಗ್ಗಿದ್ದರು. ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಘೋಷಣೆ ಕೂಗಿ ಗಲಾಟೆ ನಡೆಸಿದ್ದರು. ಬಳಿಕ ಸ್ವಾಮೀಜಿ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.

Chappal thrown on Pradeep Eshwar
ಚಪ್ಪಲಿ ಎಸೆತ ಪ್ರಕರಣ: ನನ್ನ ಕುಟುಂಬವನ್ನು ಕೀಳಾಗಿ ನಿಂದಿಸಿದರು; ಸಿದ್ದರಾಮಯ್ಯ ಮುಂದೆ ಪ್ರದೀಪ್ ಈಶ್ವರ್ ಕಣ್ಣೀರು!

ಕಾರ್ಯಕ್ರಮ ಮುಗಿದ ಬಳಿಕ ಗಲಾಟೆ ಮತ್ತೆ ಆರಂಭವಾಗಿ ಪ್ರದೀಪ್ ಈಶ್ವರ್ ತಮ್ಮ ಕಾರಿನ ಸನ್‌ರೂಫ್ ಓಪನ್​​ ಮಾಡಿ ನಿಂತು ಮೆರವಣಿಗೆ ಹೊರಟಿದ್ದರು. ಈ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ತಿರುಗೇಟು ನೀಡಲು ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದ್ದರು. ಇದರಿಂದ ತೀವ್ರ ರೊಚ್ಚಿಗೆದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ನೇರವಾಗಿ ಚಪ್ಪಲಿ ಎಸೆದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಸ್ವಯಂಪ್ರೇರಿತ (Suo Moto) ಎಫ್‌ಐಆರ್ ದಾಖಲಿಸಿದ್ದರು. ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಾಲ್ವರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com