ಜಪಾನ್ನಿಂದ ಪ್ರತಿಭಟನೆ ಕೈಬಿಡಿ ಎಂದ CM ಡಿಕೆಶಿ, ಖುದ್ದು ಭೇಟಿಗೆ ಆಶಾ ಕಾರ್ಯಕರ್ತೆಯರ ಪಟ್ಟು,ಅಹೋರಾತ್ರಿ ಧರಣಿ ಮುಂದುವರಿಕೆಗೆ ನಿರ್ಧಾರ! Video
"ಆಶಾ ಕಾರ್ಯಕರ್ತೆಯರ ಬಗ್ಗೆ ವಿಶೇಷ ಕಾಳಜಿಯಿದೆ. ನಿಮ್ಮ ಸಮಸ್ಯೆಗಳನ್ನು ನಾವು ಖಂಡಿತವಾಗಿಯೂ ಪರಿಹರಿಸುತ್ತೇವೆ. ದಯವಿಟ್ಟು ಪ್ರತಿಭಟನೆಯನ್ನು ಕೈಬಿಡಿ ಎಂದು ಶಿವಕುಮಾರ್ ಹೇಳಿದ್ದಾಗಿ ಮುಖ್ಯಮಂತ್ರಿಗಳ ಕಚೇರಿ (CMO) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದು, ಪ್ರತಿಭಟನೆಯನ್ನು ಕೈಬಿಡಬೇಕೆಂದು ಮಂಗಳವಾರ ಮನವಿ ಮಾಡಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿಯವರು, ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತೆಯರ ಮುಖಂಡರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದರು.
"ಆಶಾ ಕಾರ್ಯಕರ್ತೆಯರ ಬಗ್ಗೆ ವಿಶೇಷ ಕಾಳಜಿಯಿದೆ. ನಿಮ್ಮ ಸಮಸ್ಯೆಗಳನ್ನು ನಾವು ಖಂಡಿತವಾಗಿಯೂ ಪರಿಹರಿಸುತ್ತೇವೆ. ದಯವಿಟ್ಟು ಪ್ರತಿಭಟನೆಯನ್ನು ಕೈಬಿಡಿ ಎಂದು ಶಿವಕುಮಾರ್ ಹೇಳಿದ್ದಾಗಿ ಮುಖ್ಯಮಂತ್ರಿಗಳ ಕಚೇರಿ (CMO) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ, ಮುಖ್ಯಮಂತ್ರಿಯವರು ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸುವ ಆದೇಶವನ್ನು ಹೊರಡಿಸುವವರೆಗೂ ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ ಎಂದು 'ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ' ಹೇಳಿಕೆಯಲ್ಲಿ ತಿಳಿಸಿದೆ.
'ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್' (AIUTUC) ನೇತೃತ್ವದಲ್ಲಿ ನವೆಂಬರ್ 17 ರಿಂದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮಂಗಳವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಮಾಸಿಕ ಗೌರವಧನವನ್ನು 15,000 ರೂಪಾಯಿಗಳಿಗೆ ನಿಗದಿಪಡಿಸಬೇಕು ಮತ್ತು ಬಾಕಿ ಉಳಿದಿರುವ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾರ್ಯಕರ್ತೆಯರು ಪಟ್ಟುಹಿಡಿದಿದ್ದಾರೆ.
"ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು, ನನ್ನ ಮೇಲೆ ನಂಬಿಕೆ ಇಡಿ," ಎಂದು ಹೇಳಿದ ಸಿಂ ಶಿವಕುಮಾರ್, ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ನನ್ನ ಮನವಿಯನ್ನು ಒಪ್ಪಿಕೊಂಡಿಲ್ಲ ಮತ್ತು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದೀರಿ. ಇದರಿಂದ ಮಹಿಳಾ ಆಶಾ ಕಾರ್ಯಕರ್ತೆಯರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 21 ರಂದೂ ಇದೇ ರೀತಿಯ ಮನವಿ ಮಾಡಿದ್ದ ಶಿವಕುಮಾರ್, ಸರ್ಕಾರವು ಅವರ ಬೇಡಿಕೆಗಳಿಗೆ ಸಮಗ್ರ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದರು.
"ಇನ್ನೊಂದೆಡೆ, ಅಂಗನವಾಡಿ ಕಾರ್ಯಕರ್ತೆಯರು ದೆಹಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳಿವೆ. ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ, ನಿಮ್ಮ ಬೇಡಿಕೆಗಳ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸುತ್ತೇನೆ. ಪ್ರತಿಭಟನೆಯನ್ನು ಹಿಂಪಡೆಯಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ. ನಿಮಗೆ ಖಂಡಿತವಾಗಿಯೂ ನ್ಯಾಯ ಸಿಗಲಿದೆ," ಎಂದು ಅವರು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ವಿರೋಧ ಪಕ್ಷದ ನಾಯಕರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
"ಅವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಿಗೆ ನಾವು ಖಂಡಿತವಾಗಿಯೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ವಿಧಾನಸಭೆ ಅಧಿವೇಶನದವರೆಗೂ ನನಗೆ ಸಮಯ ಕೊಡಿ. ಈ ಮಹಿಳೆಯರು ಬಿಸಿಲು, ಚಳಿ ಎನ್ನದೆ ಹಗಲಿರುಳು ಕಷ್ಟಪಡುವಂತಾಗಬಾರದು," ಎಂದು ಅವರು ಹೇಳಿದರು. ಕಾರ್ಮಿಕರ ಸಮಸ್ಯೆಗಳು ತಮಗೆ ಅರ್ಥವಾಗಿವೆ ಎಂದು ಹೇಳಿದ ಶಿವಕುಮಾರ್, ಜಪಾನ್ ಪ್ರವಾಸದಿಂದ ಹಿಂತಿರುಗಿದ ನಂತರ ಅವರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು.
"ಹೆಚ್ಚುತ್ತಿರುವ ಬೆಲೆಗಳ ನಡುವೆ ನಿಮ್ಮ ನೋವು ಮತ್ತು ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇದಕ್ಕಾಗಿಯೇ ನಾವು 'ಗ್ಯಾರಂಟಿ' ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆವು. ಆರಂಭದಲ್ಲಿ, 'ಗೃಹಲಕ್ಷ್ಮಿ' ಯೋಜನೆಯಿಂದ ಆಶಾ (ASHA) ಕಾರ್ಯಕರ್ತೆಯರನ್ನು ಹೊರಗಿಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ನಿಮ್ಮ ಕಠಿಣ ಪರಿಶ್ರಮವನ್ನು ಪರಿಗಣಿಸಿ, ನಾವು ಈ ಯೋಜನೆಯನ್ನು ನಿಮಗೂ ವಿಸ್ತರಿಸಿದೇವೆ. ಜಪಾನ್ ಪ್ರವಾಸದಿಂದ ಹಿಂತಿರುಗಿದ ನಂತರ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಮಂಗಳವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ 'ಸ್ವತಂತ್ರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ'ದ ಪ್ರಧಾನ ಕಾರ್ಯದರ್ಶಿ ಉಮಾಮಣಿ, "ಎಲ್ಲಾ ದುಡಿಯುವ ಮಹಿಳೆಯರು ಒಂದೇ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಬಿಸಿಯೂಟ ನೌಕರರು - ಎಲ್ಲರೂ ಒಂದೇ. ಒಂದು ಗುಂಪನ್ನು ಇನ್ನೊಂದು ಗುಂಪಿನ ವಿರುದ್ಧ ಎತ್ತಿಕಟ್ಟುವುದು ಸರಿಯಲ್ಲ. ರಾಜ್ಯ ಸರ್ಕಾರವು ಎಲ್ಲರ ಸಮಸ್ಯೆಗಳನ್ನು ಬಗೆಹರಿಸಬೇಕು. ನಮ್ಮ ಸಂಘಟನೆಯು ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಬೆಂಬಲಿಸುತ್ತದೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತದೆ ಎಂದು ಹೇಳಿದರು.
ಫ್ರೀಡಂ ಪಾರ್ಕ್ನಲ್ಲಿ 7ನೇ ದಿನಕ್ಕೆ ಕಾಲಿಟ್ಟ ಧರಣಿ; "ಆಶಾ" ಅನಾರೋಗ್ಯ: 17 ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲು
ನಟ 'ಮುಖ್ಯಮಂತ್ರಿ' ಚಂದ್ರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ 10,000 ರೂಪಾಯಿ ಗೌರವಧನ ನೀಡುವುದಾಗಿ ದೃಢ ಭರವಸೆ ನೀಡಿದ್ದರು, ಆದರೆ ಆ ಭರವಸೆ ಈಡೇರಿಲ್ಲ. ಆದ್ದರಿಂದ, ಸರ್ಕಾರವು ಸಾವಿರಾರು ಆಶಾ ಕಾರ್ಯಕರ್ತೆಯರ ಕ್ಷಮೆ ಕೇಳಬೇಕು ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕು," ಎಂದು ಆಗ್ರಹಿಸಿದರು. ಆಶಾ ಕಾರ್ಯಕರ್ತೆಯರ ಪರಿಸ್ಥಿತಿಯು ಅತ್ಯಂತ ನೋವಿನಿಂದ ಕೂಡಿದೆ. ಅವರ ಬೇಡಿಕೆಗಳನ್ನು ಈಡೇರಿಸಲು ಹಣ ನೀಡದ ಸರ್ಕಾರವು, 'ಬೆಂಗಳೂರು ಹಬ್ಬ'ಕ್ಕಾಗಿ 20 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. "ಇದು ಮಾನವೀಯತೆ ಇರುವ ಸರ್ಕಾರವೇ? ಸರ್ಕಾರದಲ್ಲಿ ಹಣವೇ ಇಲ್ಲ ಎಂಬುದು ನಿಜವೇ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವು 'ಬೆಂಗಳೂರು ಹಬ್ಬ'ಕ್ಕಾಗಿ 20 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ನಿಗಮ-ಮಂಡಳಿಗಳನ್ನು ನಡೆಸಲು ಸಾವಿರಾರು ಕೋಟಿ ರೂ. ಲಭ್ಯವಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ವೇತನ/ಗೌರವಧನ ನೀಡಲು ಮಾತ್ರ ಹಣವಿಲ್ಲವೇ?" ಎಂದು ಅವರು ಪ್ರಶ್ನಿಸಿದರು. ಕೇರಳ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ 12,000 ರೂಪಾಯಿಗಳನ್ನು ನೀಡುತ್ತಿರುವಾಗ, ಕರ್ನಾಟಕ ಸರ್ಕಾರವು ಯಾಕೆ ಅಷ್ಟೇ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


