53 ಎಸೆತಗಳಲ್ಲಿ 204 ರನ್! ಗರಿಷ್ಠ ಸ್ಟ್ರೈಕ್ ರೇಟ್; 14.2 ಓವರ್ ನಲ್ಲೇ ಚೇಸಿಂಗ್; Vaibhav Sooryavanshi ಅಬ್ಬರಕ್ಕೆ ಹಲವು ದಾಖಲೆ ಧೂಳಿಪಟ
250 ರನ್‌ಗಳ ಗುರಿಯನ್ನು ಕೇವಲ 14.2 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತ ಎ ತಂಡ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿತು. 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಲಿಸ್ಟ್ ಎ ಏಕದಿನ ಪಂದ್ಯದಲ್ಲಿ ಇಷ್ಟು ಕಡಿಮೆ ಓವರ್‌ಗಳಲ್ಲಿ..

ದೋಹಾ: ಯುಎಇ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಭಾರತ ತಂಡದ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ದೋಹಾದಲ್ಲಿ ಇಂದು ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಯುಎಇ ನೀಡಿದ್ದ 250 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ವೈಭವ್ ಸೂರ್ಯವಂಶಿ ಅವರ ವಿಶ್ವದಾಖಲೆಯ ದ್ವಿಶತಕದ ನೆರವಿನಿಂದ ಇನ್ನೂ 35.2 ಓವರ್ ಬಾಕಿ ಇರುವಂತೆಯೇ 7 ವಿಕೆಟ್ ಅಂತರದಲ್ಲಿ ದಾಖಲೆಯ ಜಯಭೇರಿ ಭಾರಿಸಿತು.
ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಅಜೇಯ 204 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್‌ಗಳು ಹಾಗೂ 7 ಬೌಂಡರಿಗಳಿದ್ದವು. ಅವರ ಸ್ಫೋಟಕ ಬ್ಯಾಟಿಂಗ್‌ಗೆ ಕ್ರಿಕೆಟ್ ನ ಹಲವು ದಾಖಲೆಗಳು ಪತನವಾಗಿವೆ.
ಲಿಸ್ಟ್ ಎ ಕ್ರಿಕೆಟ್ ನ ಹಲವು ದಾಖಲೆಗಳು ಪತನ
ತಮ್ಮ ಈ ಅಮೋಘ ಬ್ಯಾಟಿಂಗ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನ ಏಕದಿನ ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆಯನ್ನೂ ಅವರು ನಿರ್ಮಿಸಿದರು. ಅಂತೆಯೇ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ಶತಕದ ದಾಖಲೆ ನಿರ್ಮಿಸಿದರು.
40 ಎಸೆತಗಳಲ್ಲಿ 150 ರನ್ ಪೂರೈಸಿ ವೇಗದ 150 ರನ್‌ಗಳ ದಾಖಲೆ ಬರೆದರು. 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ದ್ವಿಶತಕದ ಸಾಧನೆ ಮಾಡಿದರು. ಅಲ್ಲದೆ 53 ಎಸೆತಗಳಲ್ಲಿ 204 ರನ್ ಗಳಿಸಿ ಏಕದಿನ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದವರ ಪೈಕಿ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲಿಸಿದರು.
ಗರಿಷ್ಠ ಸ್ಟ್ರೈಕ್ ರೇಟ್
ವೈಭವ್ ಅವರ ಸ್ಟ್ರೈಕ್ ರೇಟ್ ಬರೋಬ್ಬರಿ 384.90 ಆಗಿತ್ತು. ಈ ಹಿಂದೆ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ 149 ರನ್ ಗಳಿಸುವಾಗ 338.63 ಸ್ಟ್ರೈಕ್ ರೇಟ್ ಹೊಂದಿದ್ದರು. 2023ರಲ್ಲಿ ಟ್ಯಾಸ್ಮೇನಿಯಾ ವಿರುದ್ಧ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 125 ರನ್ ಗಳಿಸುವಾಗ 328.94 ಸ್ಟ್ರೈಕ್ ರೇಟ್ ದಾಖಲಿಸಿದ್ದರು.
5 ಓವರ್ ನಲ್ಲಿ ಶತಕ; ಭಾರತ ದಾಖಲೆ
ಇದೇ ಪಂದ್ಯದಲ್ಲಿ ವೈಭವ್ ಅವರ ಅಬ್ಬರಕ್ಕೆ ಭಾರತ ಎ ತಂಡ ಕೇವಲ 5 ಓವರ್‌ಗಳಲ್ಲಿ 100 ರನ್ ಪೂರೈಸಿತು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದು ಅತ್ಯಂತ ವೇಗವಾಗಿ 100 ರನ್ ಗಳಿಸಿದ ವಿಶ್ವದಾಖಲೆ ಇದಾಗಿದೆ.
14.2 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿ ದಾಖಲೆ
ಅಂತೆಯೇ 250 ರನ್‌ಗಳ ಗುರಿಯನ್ನು ಕೇವಲ 14.2 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತ ಎ ತಂಡ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿತು. 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಲಿಸ್ಟ್ ಎ ಏಕದಿನ ಪಂದ್ಯದಲ್ಲಿ ಇಷ್ಟು ಕಡಿಮೆ ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು.
ಇದಕ್ಕೂ ಮೊದಲು 2003ರಲ್ಲಿ ಲಾಹೋರ್‌ನಲ್ಲಿ ನಡೆದ ಪ್ಯಾಟ್ರನ್ಸ್ ಕಪ್ ಪಂದ್ಯದಲ್ಲಿ ಅಲೈಡ್ ಬ್ಯಾಂಕ್ ಲಿಮಿಟೆಡ್ ತಂಡ ಸರ್ವೀಸ್ ಇಂಡಸ್ಟ್ರೀಸ್ ವಿರುದ್ಧ 20 ಓವರ್‌ಗಳಲ್ಲಿ ಗುರಿ ತಲುಪಿದ್ದು ದಾಖಲೆಯಾಗಿತ್ತು.
ಸಿಕ್ಸರ್ ಗಳಲ್ಲೂ ದಾಖಲೆ
ಭಾರತ ಎ ತಂಡದ ಬ್ಯಾಟರ್‌ಗಳು ಒಟ್ಟಾರೆ 31 ಸಿಕ್ಸರ್‌ಗಳನ್ನು ಸಿಡಿಸಿದರು. ಲಿಸ್ಟ್ ಎ ಕ್ರಿಕೆಟ್‌ನ ಏಕದಿನ ಪಂದ್ಯವೊಂದರಲ್ಲಿ ತಂಡವೊಂದು ಸಿಡಿಸಿದ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳ ಸಂಖ್ಯೆ ಇದಾಗಿದೆ.
2025ರಲ್ಲಿ ಬಿಹಾರ ತಂಡ ಅರುಣಾಚಲ ಪ್ರದೇಶ ವಿರುದ್ಧ 38 ಸಿಕ್ಸರ್‌ಗಳನ್ನು ಸಿಡಿಸಿದ್ದು ಮೊದಲ ಸ್ಥಾನದಲ್ಲಿದೆ. ಭಾರತ ಎ ತಂಡದ ಸಿಕ್ಸರ್‌ಗಳ ಪೈಕಿ 15 ಸಿಕ್ಸರ್‌ಗಳು ವೈಭವ್ ಬ್ಯಾಟ್‌ನಿಂದಲೇ ಬಂದವು.
ವೈಭವ್‌ಗೆ ಮತ್ತೊಂದು ತುದಿಯಲ್ಲಿ ರಿಂಕು ಸಿಂಗ್ ಉತ್ತಮ ಸಾಥ್ ನೀಡಿದರು. ಮೂರನೇ ವಿಕೆಟ್‌ಗೆ ಇಬ್ಬರೂ ಸೇರಿ ಕೇವಲ 137 ರನ್‌ಗಳ ಜೊತೆಯಾಟವಾಡಿದರು. ರಿಂಕು ಸಿಂಗ್ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಸೆಮೀಸ್ ಹಾದಿ
ಈ ಭರ್ಜರಿ ಗೆಲುವಿನೊಂದಿಗೆ ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಶ್ರೀಲಂಕಾ ಎ, ಬಾಂಗ್ಲಾದೇಶ ಎ ಹಾಗೂ ಪಾಕಿಸ್ತಾನ ಎ ತಂಡಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ ನಾಲ್ಕನೇ ಹಾಗೂ ಕೊನೆಯ ತಂಡವಾಗಿ ಭಾರತ ಎ ಹೊರಹೊಮ್ಮಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




