ತಾರಕಕ್ಕೇರಿದ ತಿರುಪರಂಕುಂದ್ರಂ ದೀಪ ವಿವಾದ: ವಿಜಯ್ ಸರ್ಕಾರದಿಂದ 'ಸುಪ್ರೀಂ' ಆದೇಶ ಉಲ್ಲಂಘನೆ ಆರೋಪ; BJP ತೀವ್ರ ಪ್ರತಿಭಟನೆ, ಗಂಭೀರ ಪರಿಣಾಮ ಎಚ್ಚರಿಕೆ!
ತಮಿಳುನಾಡು ಸರ್ಕಾರ ಮಾತ್ರ ಸಂಪ್ರದಾಯದಂತೆ ನಿಗದಿತ ದೀಪ ಮಂಟಪದಲ್ಲೇ ಕಾರ್ತಿಕೈ ದೀಪ ಬೆಳಗಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಚೆನ್ನೈ: ತಮಿಳುನಾಡಿನ ತಿರುಪರಂಕುಂದ್ರಂನಲ್ಲಿ ಕಾರ್ತಿಕೈ ದೀಪೋತ್ಸವದ ವೇಳೆ ಮತ್ತೊಮ್ಮೆ ವಿವಾದ ಭುಗಿಲೆದ್ದಿದ್ದು, ಸುಪ್ರೀಂ ಕೋರ್ಟ್ ಆದೇಶ ಪಾಲನೆ ವಿಚಾರವಾಗಿ ಸಿಎಂ ಜೋಸೆಫ್ ವಿಜಯ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಟ್ಟದ ಮೇಲಿರುವ ವಿವಾದಿತ 'ದೀಪಸ್ತಂಭ'ದಲ್ಲಿ ದೀಪ ಬೆಳಗಿಸಬೇಕಿದ್ದರೂ, ಮಂಗಳವಾರ ಸಂಜೆ ಎಂದಿನಂತೆ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ದೀಪ ಮಂಟಪದಲ್ಲಷ್ಟೇ ದೀಪ ಬೆಳಗಿಸಲಾಗಿದೆ.
ಇದರಿಂದ ಟಿವಿಕೆ ಸರ್ಕಾರ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ, ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ತಮಿಳುನಾಡು ಸರ್ಕಾರ ಮಾತ್ರ ಸಂಪ್ರದಾಯದಂತೆ ನಿಗದಿತ ದೀಪ ಮಂಟಪದಲ್ಲೇ ಕಾರ್ತಿಕೈ ದೀಪ ಬೆಳಗಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ವಿವಾದಿತ ಕಲ್ಲಿನ ಸ್ತಂಭದ ಮೇಲೆ ದೀಪ ಬೆಳಗಿಸಬೇಕಿತ್ತು ಎಂಬುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಾದವಾಗಿದೆ.
ದೀಪ ಬೆಳಗಿಸಿದ ಜಾಗವೇ ವಿವಾದಕ್ಕೆ ಕಾರಣ
ತಮಿಳುನಾಡಿನ ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್ ಹೇಳಿಕೆ ನೀಡಿ, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪವಿರುವ ಸಾಂಪ್ರದಾಯಿಕ 'ದೀಪ ಮಂಟಪ'ದಲ್ಲಿ ದೀಪ ಬೆಳಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ದೇವಸ್ಥಾನವು ಪ್ರಧಾನ ದೇವರಾದ ಶ್ರೀ ಸುಬ್ರಮಣ್ಯ ಸ್ವಾಮಿ ಅವರ ಗರ್ಭಗುಡಿಯ ಮೇಲ್ಭಾಗದಲ್ಲಿದೆ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ದೇವಸ್ಥಾನದ ಅಧಿಕೃತ ತಂಡವು ಪೊಲೀಸರ ಭದ್ರತೆಯಲ್ಲಿ ಎಂದಿನ ಸ್ಥಳದಲ್ಲೇ ದೀಪ ಬೆಳಗಿಸಿದೆ.
ಆದರೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಬೆಟ್ಟದ ಮೇಲಿನ ವಿವಾದಿತ 'ದೀಪತ್ತೂನ್' (ಕಲ್ಲಿನ ಸ್ತಂಭ) ಸ್ಥಳದಲ್ಲಿ ದೀಪ ಬೆಳಗಿಸದಿರುವುದು ಆಕ್ರೋಶಕ್ಕೆ ಕಾರಣವಾಯಿತು.
ಬಿಜೆಪಿ ಪ್ರತಿಭಟನೆ, ಪೊಲೀಸರೊಂದಿಗೆ ವಾಗ್ವಾದ, ಸಂಘರ್ಷ
ಈ ನಡುವೆ ನ್ಯಾಯಾಲಯದ ಆದೇಶವನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮತ್ತು ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ತಿರುಪರಂಕುಂದ್ರಂನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ನಿರ್ದೇಶನವನ್ನು ಒಂದು ಬಾರಿಗಾದರೂ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಗುಂಪುಗೂಡದಂತೆ ತಡೆಯಲು ಪೊಲೀಸರು ಯತ್ನಿಸಿದಾಗ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆಯಿತು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಮಹಿಳಾ ಪ್ರತಿಭಟನಾಕಾರರನ್ನು ಮಹಿಳಾ ಪೊಲೀಸರು ಬಲವಂತವಾಗಿ ಸ್ಥಳದಿಂದ ತೆರವುಗೊಳಿಸಿದರು. ಈ ವೇಳೆ ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಇದಕ್ಕೂ ಮುನ್ನ ರಾಜ್ಯದ ವಿವಿಧೆಡೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಿರುಪರಂಕುಂದ್ರಂನಲ್ಲಿ ದೊಡ್ಡ ಮಟ್ಟದ ಜನಸಮೂಹ ಸೇರುವುದನ್ನು ತಡೆಯಲು ಕೆಲವರನ್ನು ಗೃಹಬಂಧನದಲ್ಲೂ ಇರಿಸಲಾಗಿತ್ತು.
'ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ': ಬಿಜೆಪಿ ಎಚ್ಚರಿಕೆ
ಸರ್ಕಾರದ ನಿಲುವಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ, "ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಾವು ನಿರಾಕರಿಸಿದ್ದೇವೆ ಎಂದು ಹೇಳುವ ಮೂಲಕ ಸರ್ಕಾರ ಅಹಂಕಾರ ಪ್ರದರ್ಶಿಸಿದೆ. ಇದಕ್ಕೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟ್ಯಾಗೋರ್ ಬಿ. ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಾರ್ತಿಕೈ ದೀಪೋತ್ಸವದ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸಿದ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳಿಗೆ ನಿರಾಸೆಯಾಗಿದೆ. ಯಾವ ಸ್ಥಳದಲ್ಲಿ ದೀಪ ಬೆಳಗಿಸಬೇಕಿತ್ತೋ, ಅದೇ ಸ್ಥಳದಲ್ಲಿ ದೀಪ ಬೆಳಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



