ಕ್ರಿಕೆಟ್

ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆ ಪುಡಿಗಟ್ಟಿದ ವೈಭವ್ ಸೂರ್ಯವಂಶಿ! ಬಿಹಾರದ ಸಮಷ್ಠಿಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; Video

ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆ ಪುಡಿಗಟ್ಟಿದ ವೈಭವ್ ಸೂರ್ಯವಂಶಿ! ಬಿಹಾರದ ಸಮಷ್ಠಿಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; Video
ವೈಭವ್ ಸೂರ್ಯವಂಶಿ
Published On :

ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಕೇವಲ 28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಬಾರಿಸಿ ಭಾರತ ಎ ತಂಡವನ್ನು 250 ರನ್‌ಗಳ ದಾಖಲೆಯ ಗುರಿ ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳಿದ್ದವು.

ವೈಭವ್ ಸೂರ್ಯವಂಶಿ ಈ ದಾಖಲೆ ಮಾಡುತ್ತಿದ್ದಂತೆಯೇ ಬಿಹಾರದ ಸಮಷ್ಟಿಪುರದಲ್ಲಿ ಸಂಭ್ರಮ ಮುಗಿಲುಟ್ಟಿದೆ. ವೈಭವ್ ಸೂರ್ಯವಂಶಿ ಅವರ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮನೆ ಮುಂದೆ ಜಮಾಯಿಸಿದ್ದ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಆಕರ್ಷಕ ಬಾಣ, ಬಿರುಸು ಸಿಡಿ ಸಂಭ್ರಮಿಸಿದ್ದಾರೆ.

ಅತಿವೇಗದ ದ್ವಿಶತಕದ ವಿಶ್ವ ದಾಖಲೆ: ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ನ್ಯೂಜಿಲೆಂಡ್‌ ಮೂಲದ ಚಾಂದ್ ಬೌಸ್ 2024ರ ಅಕ್ಟೋಬರ್‌ನಲ್ಲಿ ಕ್ಯಾಂಟರ್‌ಬರಿ ಪರ ಒಟಾಗೋ ವಿರುದ್ಧ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ವೈಭವ್ ಆ ದಾಖಲೆಯನ್ನು ಭಾರೀ ಅಂತರದಿಂದ ಹಿಂದಿಕ್ಕಿದ್ದಾರೆ. 15ನೇ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಿರುವುದು ಕ್ರಿಕೆಟ್ ವಲಯದಲ್ಲಿ ಭಾರೀ ಗಮನ ಸೆಳೆದಿದೆ.

ಒಂದೇ ಇನಿಂಗ್ಸ್‌ನಲ್ಲಿ 28 ಸಿಕ್ಸರ್‌: ಯುಎಇ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವೈಭವ್ ಸೂರ್ಯವಂಶಿ ಒಂದೇ ಇನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯಿದು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಡಾರ್ಸಿ ಶಾರ್ಟ್ 2018ರಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ 23 ಸಿಕ್ಸರ್‌ಗಳನ್ನು ಬಾರಿಸಿದ್ದರು. ವೈಭವ್ ಇದೀಗ ಆ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿಶತಕದ ಸಾಧನೆಗೂ ಮುನ್ನವೇ ವೈಭವ್ ಸೂರ್ಯವಂಶಿ ಲಿಸ್ಟ್ ಎ ಕ್ರಿಕೆಟ್‌ನ ವೇಗದ ಶತಕದ ದಾಖಲೆಯನ್ನು ಮುರಿದಿದ್ದರು.

28 ಎಸೆತಗಳಲ್ಲಿ ಶತಕ: ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 2023ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಟ್ಯಾಸ್ಮೇನಿಯಾ ವಿರುದ್ಧ 29 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ವೈಭವ್ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅವರು 40 ಎಸೆತಗಳಲ್ಲಿ 150 ರನ್ ಗಳಿಸಿ, 52 ಎಸೆತಗಳಲ್ಲಿ 200 ರನ್ ತಲುಪಿದರು. ವೈಭವ್ ಸೂರ್ಯವಂಶಿ 150 ರನ್ ಪೂರೈಸುವಷ್ಟರಲ್ಲಿ 20 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಸಿಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.