ರಾಜ್ಯ

ಲಾಲ್‌ಬಾಗ್‌ನಿಂದ ಸುರಂಗರಸ್ತೆ ಸ್ಥಳಾಂತರಕ್ಕೆ ಸರ್ಕಾರ ನಿರ್ಧಾರ: ಪರ್ಯಾಯ ಮಾರ್ಗಗಳ ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ

ಲಾಲ್‌ಬಾಗ್‌ನಿಂದ ಸುರಂಗರಸ್ತೆ ಸ್ಥಳಾಂತರಕ್ಕೆ ಸರ್ಕಾರ ನಿರ್ಧಾರ: ಪರ್ಯಾಯ ಮಾರ್ಗಗಳ ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಪರಿಸರ ಪ್ರೇಮಿಗಳ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದ ಮೂಲಕ ಹಾದುಹೋಗಲು ಉದ್ದೇಶಿಸಿದ್ದ ಸುರಂಗ ರಸ್ತೆ ಯೋಜನೆಯ ಮಾರ್ಗವನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, 'ಯೋಜನೆಗೆ ಸೂಕ್ತವಾದ ಪರ್ಯಾಯ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರಂಗ ರಸ್ತೆ ಯೋಜನೆಯನ್ನು ಲಾಲ್‌ಬಾಗ್‌ನಿಂದ ದೂರಕ್ಕೆ ಸ್ಥಳಾಂತರಿಸುವುದಾಗಿ ಜನರಿಗೆ ನೀಡಿರುವ ಭರವಸೆಗೆ ಸರ್ಕಾರ ಬದ್ಧವಾಗಿದೆ. ಪರ್ಯಾಯವಾಗಿ ಒಂದು ಅಥವಾ ಎರಡು ಸ್ಥಳಗಳನ್ನು ಗುರುತಿಸಿದ್ದು, ಅವುಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಸೂಕ್ತವಾದ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಗುರುತಿಸಿರುವ ಪ್ರತಿಯೊಂದು ಪರ್ಯಾಯ ಸ್ಥಳದಲ್ಲೂ ಕೆಲ ಸಮಸ್ಯೆಗಳಿವೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿದೆ. ಈ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು, ಶೀಘ್ರದಲ್ಲೇ ಒಂದು ಪರ್ಯಾಯ ಮಾರ್ಗವನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಯೋಜನಾ ವೆಚ್ಚ ಕಡಿತಕ್ಕೆ ಗುತ್ತಿಗೆದಾರರೊಂದಿಗೆ ಮಾತುಕತೆ

ಸುರಂಗ ರಸ್ತೆ ಯೋಜನೆಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಹಣಕಾಸು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೂ ಒಳಗೊಂಡಿರುವ ಈ ಸಮಿತಿ ಈಗಾಗಲೇ ಗುತ್ತಿಗೆದಾರರೊಂದಿಗೆ ಒಂದು ಅಥವಾ ಎರಡು ಸುತ್ತಿನ ಮಾತುಕತೆ ನಡೆಸಿದೆ.

ಯೋಜನೆಯ ಮಾರ್ಗ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಪರ್ಯಾಯ ಸ್ಥಳ ಗುರುತಿಸಲು ಸಮೀಕ್ಷೆ ನಡೆಯುತ್ತಿದೆ. ಹೀಗಾಗಿ ಸರ್ಕಾರದ ಆದೇಶ ಹೊರಡಿಸುವಲ್ಲಿ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು.

ಮಾರ್ಗ ಬದಲಾವಣೆಗೆ ಸಂಸದ ತೇಜಸ್ವಿ ಸೂರ್ಯ ಸ್ವಾಗತ

ಈ ನಡುವೆ ಸುರಂಗ ರಸ್ತೆ ಮಾರ್ಗವನ್ನು ಲಾಲ್‌ಬಾಗ್‌ನಿಂದ ಬೇರೆಡೆಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ. ಲಾಲ್‌ಬಾಗ್‌ ಉಳಿಸಲು ಹೋರಾಟ ನಡೆಸಿದ ನಾಗರಿಕರಿಗೆ ಇದು ಭಾಗಶಃ ಜಯ ಎಂದು ಅವರು ಹೇಳಿದ್ದಾರೆ.

ಆದರೆ, ಸುರಂಗ ರಸ್ತೆ ಮಾರ್ಗ ಬದಲಾಯಿಸಿದ ಮಾತ್ರಕ್ಕೆ ಯೋಜನೆ ವೈಜ್ಞಾನಿಕವಾಗುವುದಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ಈ ಯೋಜನೆಯಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಯೋಜನೆಯ ಮೌಲ್ಯಮಾಪನ ಮತ್ತು ಅದರ ಹಿಂದಿನ ಕಾರಣಗಳನ್ನು ಸರ್ಕಾರ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಂತೆಯೇ ಹೆಬ್ಬಾಳ ಕೆರೆಯ 3.4 ಎಕರೆಗೂ ಹೆಚ್ಚು ಪ್ರದೇಶಕ್ಕೆ ಧಕ್ಕೆಯಾಗುವ ಆತಂಕವಿರುವ ಹೆಬ್ಬಾಳ ಕಿರು ಸುರಂಗ ರಸ್ತೆ ಯೋಜನೆಯ ಬಗ್ಗೆಯೂ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ವಿಸ್ತರಣೆಗೆ ಅಡ್ಡಿಯಾಗದಿರಲಿ

ಉದ್ದೇಶಿತ ಸುರಂಗ ರಸ್ತೆ ಯೋಜನೆಯಿಂದ ಮೆಟ್ರೋ ವಿಸ್ತರಣೆಯ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ. ರೆಡ್‌ಲೈನ್ ಮೆಟ್ರೋ ಮಾರ್ಗದಲ್ಲಿ ಪಶುವೈದ್ಯಕೀಯ ಕಾಲೇಜು ನಿಲ್ದಾಣವನ್ನು ಕೈಬಿಟ್ಟಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಸಮಗ್ರ ಯೋಜನೆ ರೂಪಿಸಲು ಅಧಿಕಾರಯುತ ಮತ್ತು ಸ್ವತಂತ್ರವಾದ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಟಿಎ) ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೆಟ್ರೋ, ಉಪನಗರ ರೈಲು, ಬಸ್ ಸೇವೆ, ಪಾದಚಾರಿ ಮಾರ್ಗಗಳು ಹಾಗೂ ಕೊನೆಯ ಹಂತದ ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದ ಕೆರೆಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳ ರಕ್ಷಣೆಯ ಜತೆಗೆ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಗಾಗಿ ನಾಗರಿಕರ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.