'ನೀನ್ ರಾಜಾ ಅಲ್ಲ.. ಇನ್ನೇನ್ ಕಿತ್ಕೋಡದಪ್ಪಾ'; ಆಶಾ ಕಾರ್ಯಕರ್ತೆಯರಿಗೆ ತಾರಾ ಬೆಂಬಲ, ಸಚಿವ ನರೇಂದ್ರಸ್ವಾಮಿಗೆ ಜಾಡಿಸಿದ ನಟಿ! Video

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ ತಾರಾ ಸೇರಿದಂತೆ ಕನ್ನಡ ಚಿತ್ರೋದ್ಯಮದ ನಟಿಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ.
ಇತ್ತ ಹೋರಾಟ ಮುಂದುವರಿಸಿರುವ ಕಾರ್ಯಕರ್ತೆಯರಿಗೆ ಇಂದು ಕನ್ನಡ ಚಿತ್ರರಂಗದ ಕಲಾವಿದರಾದ ತಾರಾ, ಮಾಳವಿಕಾ ಅವಿನಾಶ್, ಅವಿನಾಶ್ ಹಾಗೂ ಹಲವು ಸಾಹಿತಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಇದೇ ವೇಳೆ ಆಶಾ ಕಾರ್ಯಕರ್ತೆಯರ ಹೋರಾಟದ ಕುರಿತು ಕ್ಷುಲ್ಲಕ ಹೇಳಿಕೆ ನೀಡಿದ್ದ ಸಚಿವ ನರೇಂದ್ರ ಸ್ವಾಮಿ ಹೇಳಿಕೆಗೂ ನಟಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಂಠೀಹಾರ ಕೇಳ್ತಿಲ್ಲ.. ದುಡಿಮೆಗೆ ತಕ್ಕ ಫಲ ಕೇಳುತ್ತಿದ್ದೇವೆ
ಸಚಿವ ನರೇಂದ್ರಸ್ವಾಮಿ ಅವರ ಹೇಳಿಕೆಗೆ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಕೇಳುತ್ತಿರುವುದು ಕಂಠಿಹಾರವನ್ನಲ್ಲ, ಬದಲಾಗಿ ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ಹಾಗೂ ಸರ್ಕಾರ ನೀಡಿದ್ದ ಭರವಸೆಯ ಈಡೇರಿಕೆಯನ್ನು ಮಾತ್ರ. ಸಂವಿಧಾನದ ಬಗ್ಗೆ ಮಾತನಾಡುವ ಪಕ್ಷದ ಸಚಿವರು ದುಡಿಯುವ ಮಹಿಳೆಯರನ್ನು ಹೀಗೆ ಅವಮಾನಿಸುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
'ನೀನ್ ರಾಜಾ ಅಲ್ಲ.. ಇನ್ನೇನ್ ಕಿತ್ಕೋಡದಪ್ಪಾ'
ಇನ್ನು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ನಟಿ ತಾರಾ, ಆಶಾ ಕಾರ್ಯಕರ್ತೆಯರು ಬೀದಿಗಿಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದರು.
ಕಾರ್ಯಕರ್ತೆಯರಿಗೆ ನಿಯಮಿತ ವೇತನ, ಕಾರ್ಮಿಕ ಸ್ಥಾನಮಾನ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಅವರು ಒತ್ತಾಯಿಸಿದರು. ಇದೇ ವೇಳೆ, "ಕೇಳಿದಾಗೆಲ್ಲ ಕಂಠಿಹಾರ ಕೊಡಲು ಆಗುತ್ತಾ?" ಎಂಬ ಸಚಿವ ನರೇಂದ್ರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ತಾರಾ, "ಹಾರ ಕೊಡಲು ನೀವೇನು ರಾಜರಲ್ಲ, ನಿಮ್ಮನ್ನು ಅಧಿಕಾರಕ್ಕೆ ತಂದವರು ನಾವು" ಎಂದು ಅಸಮಾಧಾನ ಹೊರಹಾಕಿದರು.
"ನೀನೇನ್ ರಾಜನಾ? ಜನ ಮತ ಹಾಕಲಿಲ್ಲ ಅಂದರೆ ನೀನು ಗೆಲ್ಲುವುದಿಲ್ಲ. ಸಚಿವರು ಬಂದು ಆಶಾ ಕಾರ್ಯಕರ್ತೆಯರ ಕಾಲಿಗಾದರೂ ಬಿದ್ದರೂ ತಪ್ಪಿಲ್ಲ. ಇಡೀ ಕುಟುಂಬ ಬಿಟ್ಟು ಇವರು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಿಂದೆ 10 ಸಾವಿರ ಘೋಷಣೆ ಮಾಡಿದ್ದರು, ಅವರು ಕೊಟ್ಟ ಆಶ್ವಾಸನೆಯನ್ನಾದರೂ ಮೊದಲು ಈಡೇರಿಸಿ. ಬೇಡಿಕೆ ಈಡೇರಲಿಲ್ಲ ಅಂದರೆ ಇದು ರಾಜ್ಯದ ಹೋರಾಟವಾಗಿ ಉಳಿಯದೆ, ರಾಷ್ಟ್ರದ ಹೋರಾಟವಾಗುತ್ತದೆ" ಎಂದು ತಾರಾ ಎಚ್ಚರಿಕೆ ನೀಡಿದರು.
'ಕೇಳಿಸಿಕೊಳ್ಳುವ ಕಿವಿ ಇರಬೇಕು'
"ನಾವೆಲ್ಲಾ ಹೆಣ್ಣುಮಕ್ಕಳು ಸೇರಿದಾಗ ಹೇಗಿದ್ದೀರಾ ಅಂತ ಮೊದಲು ಕೇಳುತ್ತೇವೆ. ನೀವು ಕಳೆದ 9 ದಿನಗಳಿಂದ ಹೋರಾಟ ಮಾಡುತ್ತಿದ್ದೀರಿ. ಗೌರವದಿಂದ ಬದುಕಲು, ಗೌರವಧನ ನೀಡುವಂತೆ ಕೇಳುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಹೆಣ್ಣುಮಕ್ಕಳು ಸುಮ್ಮನೆ ಖರ್ಚು ಮಾಡುವುದಿಲ್ಲ, ಒಂದು ರೂಪಾಯಿ ಖರ್ಚು ಮಾಡಬೇಕಾದರೂ ಯೋಚನೆ ಮಾಡುತ್ತೇವೆ. ಒಂದು ಹೆಣ್ಣು ಮಗು ಸಂಸಾರದ ಬಗ್ಗೆ ಕಾಳಜಿ ವಹಿಸುತ್ತಾಳೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆ ಮಾಡುತ್ತಿದ್ದೀರಾ, ಇದನ್ನು ಕೇಳಿಸಿಕೊಳ್ಳುವ ಕಿವಿಗಳು ಸರ್ಕಾರಕ್ಕೆ ಇರಬೇಕು" ಎಂದು ತಾರಾ ಹೇಳಿದರು.
ತಿಂಗಳ ಮೊದಲ ದಿನವೇ ಗೌರವಧನ ಪಾವತಿಸಿ
ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಗೌರವಧನ ಪಾವತಿಯಾಗಬೇಕು ಎಂದು ತಾರಾ ಒತ್ತಾಯಿಸಿದರು. 11 ತಿಂಗಳಲ್ಲಿ ಕೇವಲ ಐದು ಬಾರಿ ಮಾತ್ರ ಗೌರವಧನ ಪಾವತಿಯಾಗಿರುವುದನ್ನು ಪ್ರಸ್ತಾಪಿಸಿದ ಅವರು, ಪ್ರತಿ ತಿಂಗಳ 1ನೇ ತಾರೀಖಿನಂದೇ ಹಣ ಖಾತೆಗೆ ಜಮೆಯಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಮೊದಲು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತರುವ ಮೂಲಕ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಘೋಷಿಸಿದ್ದ 10 ಸಾವಿರ ರೂ. ಗೌರವಧನದ ಭರವಸೆಯನ್ನಾದರೂ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇನ್ನು ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಇತರರ ಆರೋಗ್ಯ ಕಾಯುವ ಈ ತಾಯಂದಿರಿಗೆ ರಾಜ್ಯ ಸರ್ಕಾರ ತಕ್ಷಣವೇ 15 ಸಾವಿರ ರೂಪಾಯಿ ಮಾಸಿಕ ಗೌರವಧನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ನಟ ಅವಿನಾಶ್ ಕೂಡ ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಧೈರ್ಯ ತುಂಬಿದರು.
ಸಾಹಿತಿಗಳ ಸಾಥ್
ಹೋರಾಟಕ್ಕೆ ಸಾಹಿತಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರೂ ಕೈಜೋಡಿಸಿದ್ದಾರೆ. ಒಂಬತ್ತು ದಿನಗಳಿಂದ ಪ್ರತಿಭಟಿಸುತ್ತಿರುವ ಮಹಿಳೆಯರತ್ತ ಸರ್ಕಾರ ಗಮನಹರಿಸದಿರುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಟೀಕಿಸಿದರೆ, ಮುಖ್ಯಮಂತ್ರಿಗಳು ಕೇವಲ ಸಹೋದರಿಯರು ಎನ್ನದೆ ಬೇಡಿಕೆಗಳ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಒತ್ತಾಯಿಸಿದರು.
ಡಾ. ವಸುಂಧರಾ ಭೂಪತಿ, ಪ್ರಾಂತ ರೈತ ಸಂಘದ ಯಶವಂತ್, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಮನಮೋಹನ್ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ. ಚಂದ್ರಶೇಖರ್ ತಾಳ್ಯ ಅವರು ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




