ದೇಶ

ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!

ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!
ಯೋಗಿ ಆದಿತ್ಯನಾಥ್ - ಕೇಶವ್ ಪ್ರಸಾದ್ ಮೌರ್ಯ
Published On :

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಬುಧವಾರ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದಿಂದ ಆಯ್ಕೆಯಾದ ಶಾಸಕರು(MLAಗಳು) ನಿರ್ಧರಿಸಲಿದ್ದಾರೆ ಎಂದು ಕೇಶವ್ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆ.

ಇಂದು ಜೌನ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ, ಬಿಜೆಪಿ ತನ್ನ 'ಕಮಲ' ಚಿಹ್ನೆಯ ಅಡಿಯಲ್ಲಿ ಚುನಾವಣೆ ಎದುರಿಸುತ್ತದೆ ಮತ್ತು ಚುನಾವಣಾ ಫಲಿತಾಂಶದ ನಂತರ, ಆಯ್ಕೆಯಾದ ನೂತನ ಶಾಸಕರು ಒಮ್ಮತದ ಮೂಲಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕೆ ಹೆಸರಿಸುತ್ತಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೌರ್ಯ, ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ಮುಖವು ಅದರ ಚಿಹ್ನೆಯಾದ 'ಕಮಲ'ವೇ ಆಗಿದೆ ಎಂದು ಹೇಳಿದರು.

"ಚುನಾವಣೆಯ ಸಮಯದಲ್ಲಿ ಬಿಜೆಪಿಯ ಫೇಸ್ 'ಕಮಲ' ಚಿಹ್ನೆಯೇ ಆಗಿರುತ್ತದೆ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಚುನಾವಣೆಯ ನಂತರ, ಆಯ್ಕೆಯಾದ ಶಾಸಕರು ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಳ್ಳುವ ನಿರ್ಧಾರವೇ, ಸರ್ಕಾರವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ" ಎಂದು ಮೌರ್ಯ ಹೇಳಿದರು.

"ಪ್ರಸ್ತುತ, ಯೋಗಿ ಜಿ (ಆದಿತ್ಯನಾಥ್) ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಯೋಗಿ ಜಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೆಯವರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆಯೇ ಎಂಬುದನ್ನು ಆಗ ಆಯ್ಕೆಯಾಗುವ ಶಾಸಕರು ನಿರ್ಧರಿಸುತ್ತಾರೆ," ಎಂದು ಅವರು ಹೇಳಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.