

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಶನಿವಾರ ಬೆಳಗ್ಗೆ ತಮ್ಮ ತಾಯಿ ಸಾವಿತ್ರಿ ದೇವಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದರು. ತಾಯಿಯ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಬೆಳಗ್ಗೆ 8 ಗಂಟೆಗೆ ಹರಿದ್ವಾರದತ್ತ ಆರಂಭವಾದ ಅಂತಿಮ ಯಾತ್ರೆಯಲ್ಲಿ ತಾಯಿಯ ಪಾರ್ಥಿವ ಶರೀರದ ಚಟ್ಟೆಗೆ ಹೆಗಲು ನೀಡಿದರು.
ಹರಿದ್ವಾರದ ಚಂಡಿ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರುತ್ತಿದೆ. ಉತ್ತರ ಪ್ರದೇಶದ ಹಲವು ಸಚಿವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಯೋಗಿ ಅವರು ಲಖನೌಗೆ ಮರಳಲಿದ್ದು, ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
91 ವರ್ಷದ ಸಾವಿತ್ರಿ ದೇವಿ ಅವರು ನಿನ್ನೆ ಶುಕ್ರವಾರ ಬೆಳಗ್ಗೆ 10.45ಕ್ಕೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.ಸಂಜೆ ವೇಳೆಗೆ ಉತ್ತರಾಖಂಡಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್, ತಾಯಿಯ ಪಾರ್ಥಿವ ಶರೀರದ ಬಳಿ ಕೆಲಕಾಲ ಮೌನವಾಗಿ ನಿಂತು ಅಂತಿಮ ನಮನ ಸಲ್ಲಿಸಿದರು.
ತಾಯಿಯ ಕೊನೆಯ ಕ್ಷಣಗಳ ಬಗ್ಗೆ ತಿಳಿದುಕೊಳ್ಳಲು ಕುಟುಂಬ ಸದಸ್ಯರು ಮತ್ತು ಆರೈಕೆದಾರರೊಂದಿಗೆ ಮಾತನಾಡಿದರು. ತಾಯಿ ಕೊನೆಯುಸಿರೆಳೆಯುವಾಗ ಅವರ ಬಳಿ ಯಾರಿದ್ದರು ಎಂಬ ಬಗ್ಗೆಯೂ ವಿಚಾರಿಸಿದರು.
ಯೋಗಿ ಆದಿತ್ಯನಾಥ್ ಅವರು ಇಡೀ ರಾತ್ರಿ ತಾಯಿಯ ಪಾರ್ಥಿವ ಶರೀರದ ಬಳಿಯೇ ಇದ್ದರು. ಈ ಅವಧಿಯಲ್ಲಿ ಅವರು ಆಹಾರ ಸೇವಿಸಲಿಲ್ಲ. ನೀರು ಸಹ ಕುಡಿಯಲಿಲ್ಲ.
ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಷ್ಟ್ ಅವರು 2020ರ ಏಪ್ರಿಲ್ 20ರಂದು ನಿಧನರಾಗಿದ್ದರು. ಆಗ ದೇಶ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಯೋಗಿ ಅವರಿಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಲು ಸಾಧ್ಯವಾಗಿರಲಿಲ್ಲ.
ಆ ಸಂದರ್ಭದಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದ ಅವರು, ತಂದೆಯ ಕೊನೆಯ ಕ್ಷಣಗಳಲ್ಲಿ ಅವರನ್ನು ಕೊನೆಯ ಬಾರಿಗೆ ನೋಡಬೇಕೆಂಬ ಹೃತ್ಪೂರ್ವಕ ಬಯಕೆ ಇತ್ತು ಎಂದು ಹೇಳಿದ್ದರು. ಹರಿದ್ವಾರದಲ್ಲಿ ತಂದೆಯ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಕಳೆದ ಮೇನಲ್ಲಿ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಂಚೂರು ಗ್ರಾಮದಲ್ಲಿ ನಡೆದ ವಿಷ್ಣು ಪಂಚದೇವ ದೇವಸ್ಥಾನದ ಪ್ರಾಣಪ್ರತಿಷ್ಠೆ ಸಮಾರಂಭ ಹಾಗೂ ಮಹಾಯಾಗದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಬಳಿಕ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿ ತಾಯಿ ಸಾವಿತ್ರಿ ದೇವಿ ಅವರ ಆಶೀರ್ವಾದ ಪಡೆದಿದ್ದರು. ಕುಟುಂಬದವರೊಂದಿಗೆ ಸಮಯ ಕಳೆದಿದ್ದ ಅವರು, ಸ್ಥಳೀಯ ನಿವಾಸಿಗಳನ್ನೂ ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ತಂದೆ ಆನಂದ್ ಸಿಂಗ್ ಬಿಷ್ಟ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ್ದರು.