

ಲಖನೌ: 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದ್ದು, 320ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
403 ಸದಸ್ಯ ಬಲದ ವಿಧಾನಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ(NDA) ಮೈತ್ರಿಕೂಟವು 320 ಸ್ಥಾನಗಳ ಗುರಿಯನ್ನು ಮೀರಿ ಗೆಲ್ಲಲಿದೆ ಎಂದು ಯೋಗಿ ಅದಿತ್ಯನಾಥ್ ಹೇಳಿದರು.
ಇದೇ ವೇಳೆ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ'ಯನ್ನು(Special Intensive Revision - SIR) ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಲಖನೌನಲ್ಲಿ ನಡೆದ 'ನ್ಯೂಸ್18 ರೈಸಿಂಗ್ ಭಾರತ್ ಶೃಂಗಸಭೆ: ನಾರ್ತ್ ಎಡಿಷನ್' ಕಾರ್ಯಕ್ರಮದಲ್ಲಿ ಮಾತನಾಡಿದ ಯುಪಿ ಸಿಎಂ, "ಯಾವುದೇ ಮಹಿಳೆ, ಯುವಕ, ವ್ಯಾಪಾರಿ ಅಥವಾ ಬಡ ವ್ಯಕ್ತಿಯನ್ನು ಕೇಳಿ ನೋಡಿ; ಅವರೆಲ್ಲರೂ ಈ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೇಳುತ್ತಾರೆ. ಅಭಿವೃದ್ಧಿಯನ್ನು ಇಷ್ಟಪಡದವರು, ಪ್ರತಿಯೊಂದು ಉಪಕ್ರಮದಲ್ಲೂ ನಕಾರಾತ್ಮಕತೆಯನ್ನು ಹುಡುಕುವವರು ಮತ್ತು ಅರಾಜಕತೆಯ ವಾತಾವರಣವನ್ನು ಬಯಸುವವರು ಖಂಡಿತವಾಗಿಯೂ ನಿರಾಶೆಗೊಳ್ಳುತ್ತಾರೆ" ಎಂದು ಹೇಳಿದರು.
ಇದೇ ವೇಳೆ ಸಮಾಜವಾದಿ ಪಕ್ಷ (Samajwadi Party) ಮತ್ತು ಕಾಂಗ್ರೆಸ್ (Congress) ಗುರಿಯಾಗಿಸಿ ಮಾತನಾಡಿದ ಸಿಎಂ, ರಾಜ್ಯದ ಭೂತಕಾಲ ಮತ್ತು ವರ್ತಮಾನದ ನಡುವಿನ ವ್ಯತ್ಯಾಸದ ಬಗ್ಗೆ ಬಿಜೆಪಿ ತನ್ನ ಪ್ರಚಾರ ಮಾಡುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ (ಎಸ್ಪಿ ಮತ್ತು ಕಾಂಗ್ರೆಸ್ ಸರ್ಕಾರ) ನಡೆದ ಜಂಗಲ್ ರಾಜ್, ಗೂಂಡಾರಾಜ್, ಕರ್ಫ್ಯೂಗಳು ಮತ್ತು ಗಲಭೆಗಳನ್ನ ಪಕ್ಷವು ಎತ್ತಿ ತೋರಿಸುತ್ತದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಪೂರ್ಣ ಬಹುಮತ ಪಡೆಯಲಿದೆ. ಸತತ ಮೂರನೇ ಬಾರಿಗೆ ಸರ್ಕಾರವನ್ನ ರಚಿಸುವಲ್ಲಿ ಮತ್ತೊಮ್ಮೆ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ತಮ್ಮ ಸರ್ಕಾರವು 2.30 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ ಮತ್ತು ಇನ್ನೂ 32,000 ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ಅಲ್ಲದೆ, ಪೊಲೀಸ್ ತರಬೇತಿ ಸಾಮರ್ಥ್ಯವನ್ನು ಏಕಕಾಲದಲ್ಲಿ 6,000 ದಿಂದ 60,000 ಸಿಬ್ಬಂದಿಗೆ ಹೆಚ್ಚಿಸಿರುವುದು, ಎಲ್ಲಾ 18 ವಿಭಾಗೀಯ ಕೇಂದ್ರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು (forensic laboratories) ಸ್ಥಾಪಿಸಿರುವುದು, ಎಲ್ಲಾ 75 ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದಿರುವುದು ಮತ್ತು ಏಳು ನಗರಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದನ್ನು ಅವರು ಉಲ್ಲೇಖಿಸಿದರು.
ಇನ್ನು ಎಸ್ಐಆರ್ ಕುರಿತು ಮಾತನಾಡಿದ ಆದಿತ್ಯನಾಥ್, ಮತದಾರರ ಪಟ್ಟಿಯ "ಶುದ್ಧತೆಯನ್ನು" (ನಿಖರತೆಯನ್ನು) ಖಚಿತಪಡಿಸಿಕೊಳ್ಳಲು ಇದೊಂದು ಸ್ವಾಗತಾರ್ಹ ಕ್ರಮ ಎಂದು ಬಣ್ಣಿಸಿದರು. ಮೃತಪಟ್ಟ ವ್ಯಕ್ತಿಗಳು ಮತ್ತು ಭಾರತೀಯರಲ್ಲದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಬೇಕು ಹಾಗೂ ಅರ್ಹರಾದ ಪ್ರತಿಯೊಬ್ಬ ವಯಸ್ಕ ಭಾರತೀಯ ಪ್ರಜೆಯನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದು ಅವರು ಹೇಳಿದರು.