9ನೇ ದಿನಕ್ಕೆ ಕಾಲಿಟ್ಟ ಹೋರಾಟ; ಮಳೆ, ಚಳಿ, ಅನಾರೋಗ್ಯಕ್ಕೂ ಜಗ್ಗದ ಆಶಾ ಕಾರ್ಯಕರ್ತೆಯರು, ಬೇಡಿಕೆ ಈಡೇರುವವರೆಗೂ ಪಟ್ಟು ಸಡಿಲಿಸದಿರಲು ನಿರ್ಧಾರ..!
ಮಳೆಯಿಂದ ಪ್ರತಿಭಟನಾ ಸ್ಥಳದಲ್ಲಿ ನೀರು ಸೋರಿಕೆ, ಒದ್ದೆಯಾದ ನೆಲ, ವಿಶ್ರಾಂತಿಗೆ ತೊಂದರೆ ಎದುರಾಗಿದ್ದರೂ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅಲ್ಲಿಯೇ ಉಳಿದು ಬೇಡಿಕೆ ಈಡೇರಿಕೆಗಾಗಿ ಕಾಯುತ್ತಿದ್ದಾರೆ.

ಬೆಂಗಳೂರು: ಮಳೆ, ಚಳಿ, ಅನಾರೋಗ್ಯದ ನಡುವೆಯೂ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ತಿಂಗಳಿಗೆ 15,000 ರೂ. ಗೌರವಧನ ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಸಾವಿರಾರೂ ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದು, ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಳೆಯಿಂದ ಪ್ರತಿಭಟನಾ ಸ್ಥಳದಲ್ಲಿ ನೀರು ಸೋರಿಕೆ, ಒದ್ದೆಯಾದ ನೆಲ, ವಿಶ್ರಾಂತಿಗೆ ತೊಂದರೆ ಎದುರಾಗಿದ್ದರೂ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅಲ್ಲಿಯೇ ಉಳಿದು ಬೇಡಿಕೆ ಈಡೇರಿಕೆಗಾಗಿ ಕಾಯುತ್ತಿದ್ದಾರೆ.
ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿ ಎಂಟು ದಿನಗಳು ಕಳೆದಿದ್ದು, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರಾದ ಆಶಾ ಕಾರ್ಯಕರ್ತೆಯರು ಈಗ ಮಳೆ, ಅನಾರೋಗ್ಯ, ದೈಹಿಕ ಬಳಲಿಕೆ ಮಾತ್ರವಲ್ಲದೆ, ಕುಟುಂಬದ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾ ಹೋರಾಟ ಮುಂದುವರಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಕ್ಕಳೂ ಭಾಗಿಯಾಗಿದ್ದಾರೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕೆಲವು ಕಾರ್ಯಕರ್ತೆಯರು ತಮ್ಮ ಶಿಶುಗಳನ್ನೂ ಕರೆತಂದಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ತಾಯಂದಿರೊಂದಿಗೆ ಪ್ರತಿಭಟನಾ ಸ್ಥಳದಲ್ಲಿರುವ ಕೆಲವು ಮಕ್ಕಳಿಗೆ ಜ್ವರ ಮತ್ತು ಶೀತ ಕಾಣಿಸಿಕೊಂಡಿದ್ದು, ವೈದ್ಯಕೀಯ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ.
ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ಹಗಲಿನಲ್ಲಿ ಆಶಾ ಕಾರ್ಯಕರ್ತೆಯಾಗಿರುವ ತನ್ನ ತಾಯಿಯೊಂದಿಗೆ ಪ್ರತಿಭಟನಾ ಸ್ಥಳದಲ್ಲಿರುತ್ತಾನೆ. ಸಂಜೆ ಮನೆಗೆ ಹಿಂತಿರುಗಿದ ಬಳಿಕ ತಾಯಿ ಬರುವವರೆಗೂ ಊಟ ಮಾಡದೆ ಕಾಯುತ್ತಾನೆ. ತಿಂಗಳಿಗೆ 15,000 ರೂ. ಗೌರವಧನ ನೀಡಬೇಕೆಂಬ ತಾಯಿಯ ಹೋರಾಟಕ್ಕೆ ಈ ಬಾಲಕನೂ ಬೆಂಬಲ ನೀಡುತ್ತಿದ್ದಾನೆ.
ಸುಮಿತ್ರಾ ಎಂಬ ಕಾರ್ಯಕರ್ತೆಯ ಅಜ್ಜಿ ಸಾವಿನ ಹಾಸಿಗೆಯಲ್ಲಿದ್ದರೂ, ಹೋರಾಟ ಮುಂದುವರಿಸುವಂತೆ ಅವರಿಗೆ ಧೈರ್ಯ ತುಂಬಿದ್ದರು. ಹೀಗಾಗಿ ಕುಟುಂಬದ ಸಂಕಷ್ಟದ ನಡುವೆಯೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ಅವರು ಮುಂದುವರಿಸಿದ್ದಾರೆ.
ಇನ್ನು ಕೆಲವರು ಕುಟುಂಬದಲ್ಲಿ ಮದುವೆ ಸಮಾರಂಭಗಳು ಸಮೀಪಿಸುತ್ತಿದ್ದರೂ ಪ್ರತಿಭಟನಾ ಸ್ಥಳದಲ್ಲೇ ಉಳಿದಿದ್ದಾರೆ. ಇತ್ತೀಚೆಗೆ ಪತಿಯನ್ನು ಕಳೆದುಕೊಂಡ ಕೆಲವು ಮಹಿಳೆಯರೂ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಪರಸ್ಪರ ಮಕ್ಕಳನ್ನು ನೋಡಿಕೊಳ್ಳುವುದು, ಊಟ ಮತ್ತು ಜಾಗ ಹಂಚಿಕೊಳ್ಳುವುದು ಸೇರಿದಂತೆ ಒಬ್ಬರಿಗೊಬ್ಬರು ನೆರವಾಗುತ್ತಾ ಮಹಿಳೆಯರು ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಮಳೆಯಿಂದಾಗಿ ಮಲಗುವ ಜಾಗದ ಕೆಲವು ಭಾಗಗಳು ಒದ್ದೆಯಾಗಿದ್ದು, ವಿಶ್ರಾಂತಿ ಪಡೆಯಲು ಮಹಿಳೆಯರಿಗೆ ತೊಂದರೆಯಾಗಿದೆ.
ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ಹೋರಾಟಗಾರ ರಾಜಶೇಖರ್ ಎಂಬುವವರು ಮಾತನಾಡಿ, ಸ್ವಯಂಸೇವಕರು ಮತ್ತು ಸಾರ್ವಜನಿಕರು ಆಹಾರ, ಕುಡಿಯುವ ನೀರು ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ನೆರವಾಗುತ್ತಿದ್ದಾರೆ. ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಟ್ಯಾಂಕರ್‌ಗಳ ಮೂಲಕ ದಿನವಿಡೀ ನೀರು ಪೂರೈಸಲಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿಗಳು, ಹಣ್ಣುಗಳು, ಬಿಸ್ಕತ್‌ಗಳು ಮತ್ತು ಹೊದಿಕೆಗಳನ್ನು ಸಾರ್ವಜನಿಕರು ದೇಣಿಗೆಯಾಗಿ ನೀಡಿದ್ದಾರೆಂದು ಹೇಳಿದ್ದಾರೆ.
ಬೆಳಗಾವಿಯ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಸುಜಾತಾ ಮಾತನಾಡಿ, ಹಲವು ಕಾರ್ಯಕರ್ತೆಯರು ಸಿಂಗಲ್ ಪೇರೆಂಟ್ ಆಗಿದ್ದು, ಕೆಲವರನ್ನು ಪತಿಯರು ತೊರೆದಿದ್ದಾರೆ. ಇನ್ನು ಕೆಲವರು ಮದ್ಯವ್ಯಸನದ ಸಮಸ್ಯೆ ಎದುರಿಸುತ್ತಿರುವ ಪತಿಯರಿರುವ ಕುಟುಂಬಗಳನ್ನು ಮುನ್ನಡೆಸುತ್ತಿದ್ದಾರೆ. ಮನೆ ಬಾಡಿಗೆ ಮತ್ತು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಅವರ ದುಡಿಮೆಯೇ ಆಧಾರವಾಗಿದೆ ಎಂದು ತಿಳಿಸಿದ್ದಾರೆ.
ಕುಟುಂಬಗಳು ತಮ್ಮ ಆದಾಯವನ್ನು ಅವಲಂಬಿಸಿರುವುದರಿಂದ ಹಲವು ದಿನಗಳ ಕಾಲ ಕೆಲಸ ನಿಲ್ಲಿಸುವ ಸ್ಥಿತಿಯಲ್ಲಿ ಅವರಿಲ್ಲ. 2025ರ ಜನವರಿ 10ರಂದು ಸರ್ಕಾರ ತಿಂಗಳಿಗೆ 10,000 ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿತ್ತು. ಹೆಚ್ಚುವರಿ ಕೆಲಸ ಮಾಡುವವರಿಗೆ ಹೆಚ್ಚಿನ ಮೊತ್ತ ನೀಡುವುದಾಗಿಯೂ ತಿಳಿಸಿತ್ತು ಎಂದು ಸಂಘ ಹೇಳಿದೆ.
ಇದೀಗ ಕಾರ್ಯಕರ್ತೆಯರು ತಿಂಗಳಿಗೆ 15,000 ರೂ. ಗೌರವಧನದ ಜೊತೆಗೆ ನಿವೃತ್ತಿ ಸಂದರ್ಭದಲ್ಲಿ ಒಂದು ಬಾರಿಯ ಆರ್ಥಿಕ ನೆರವು, ಅನಾರೋಗ್ಯ, ಅಪಘಾತ ಮತ್ತು ವೈದ್ಯಕೀಯ ಚಿಕಿತ್ಸೆಯ ಸಂದರ್ಭಗಳಲ್ಲಿ ಸಹಾಯ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದೇ ವೇಳೆ ತಮ್ಮ ಕೆಲಸದ ವಿವರ ದಾಖಲಿಸಲು ಬಳಸುವ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಗತ್ಯ ಸಾಧನಗಳು, ತರಬೇತಿ ಹಾಗೂ ಅಪ್ಲಿಕೇಶನ್ ಬಳಸಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ರಾಮಾ ಟಿ.ಸಿ. ಮಾತನಾಡಿ, ಸಂಘವು ಸರ್ಕಾರದೊಂದಿಗೆ ಈಗಾಗಲೇ ಮೂರು ಸುತ್ತಿನ ಮಾತುಕತೆ ನಡೆಸಿದೆ. ಒಂದು ಸುತ್ತಿನ ಮಾತುಕತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದಿದ್ದರೆ, ಎರಡು ಸುತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆದಿವೆ ಎಂದು ತಿಳಿಸಿದರು.
ಮಂಗಳವಾರ ಮುಖ್ಯಮಂತ್ರಿ ಅವರು ವಿಡಿಯೋ ಕರೆ ಮೂಲಕ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದಾರೆ. ಆದರೆ, ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸುವುದಾಗಿ ನೀಡುವ ಮೌಖಿಕ ಭರವಸೆಗೆ ಕಾರ್ಯಕರ್ತೆಯರು ಒಪ್ಪುತ್ತಿಲ್ಲ. ಸರ್ಕಾರದಿಂದ ಲಿಖಿತ ಭರವಸೆ ಸಿಗಬೇಕು ಎಂಬುದು ಅವರ ಆಗ್ರಹ ಎಂದು ತಿಳಿಸಿದರು.
ಪ್ರತಿಭಟನೆಯಿಂದ ಆಶಾ ಕಾರ್ಯಕರ್ತೆಯರ ಆರೋಗ್ಯದ ಮೇಲೆ ಪರಿಣಾಮ
ಈ ನಡುವೆ ದೀರ್ಘಕಾಲದಿಂದ ಪ್ರತಿಭಟನಾ ಸ್ಥಳದಲ್ಲೇ ಉಳಿದಿರುವುದರಿಂದ ಕಾರ್ಯಕರ್ತೆಯರ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ.
ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸ್ವಯಂಸೇವಾ ಸಂಘಟನೆಯಾದ ಮೆಡಿಕಲ್ ಸರ್ವಿಸ್ ಸೆಂಟರ್‌ನ ಡಾ. ಟಿ.ಎಸ್. ಸುನೀತ್ ಕುಮಾರ್ ಮಾತನಾಡಿ, ಪ್ರತಿದಿನ 300ರಿಂದ 400 ಮಂದಿ ವೈದ್ಯಕೀಯ ತಂಡವನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿಸಿದರು. ಮೂತ್ರನಾಳದ ಸೋಂಕು, ಬೆನ್ನು ನೋವು ಮತ್ತು ರಕ್ತದೊತ್ತಡ ಹೆಚ್ಚಳದಂತಹ ಸಮಸ್ಯೆಗಳು ವರದಿಯಾಗಿವೆ ಎಂದು ಹೇಳಿದ್ದಾರೆ.
8 ದಿನಗಳಲ್ಲಿ ಸುಮಾರು 3,500 ಕಾರ್ಯಕರ್ತೆಯರು ವೈದ್ಯಕೀಯ ನೆರವು ಪಡೆದಿದ್ದು, ಅವರಲ್ಲಿ ಸುಮಾರು 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ವೈದ್ಯಕೀಯ ಸ್ವಯಂಸೇವಕರು ಪ್ರತಿಭಟನಾ ಸ್ಥಳದಲ್ಲೇ ಕಾರ್ಯಕರ್ತೆಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



