ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ: 'Operation Gaja' ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ; 3 ಕಡೆ ಚದುರಿದ ಕಾಡಾನೆಗಳ ಹಿಂಡು, ಹಾಸನ-ಚಿಕ್ಕಮಗಳೂರಿನಲ್ಲಿ ಹೈ ಅಲರ್ಟ್..!
ಆನೆಗಳನ್ನು ಪ್ರಚೋದಿಸುವ ಅಥವಾ ಅವುಗಳ ಚಲನವಲನಕ್ಕೆ ಅಡ್ಡಿಪಡಿಸುವ ಯಾವುದೇ ಘಟನೆ ಸಂಭವಿಸಿದರೂ ಅವು ಮತ್ತಷ್ಟು ಉದ್ರಿಕ್ತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಹಿಂಡುಗಳು ಸಣ್ಣ ಗುಂಪುಗಳಾಗಿ ವಿಭಜನೆಯಾಗಿ ಮಾನವ-ಆನೆ ಸಂಘರ್ಷ ಹೆಚ್ಚಾಗಬಹುದು.

ಬೆಂಗಳೂರು: ಸಾರ್ವಜನಿಕರು ಹಾಗೂ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ‘ಆಪರೇಷನ್ ಗಜ’ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇದರ ಪರಿಣಾಮ ಬೇಲೂರಿನಿಂದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದತ್ತ ಸ್ಥಳಾಂತರಿಸಲಾಗುತ್ತಿದ್ದ ಆನೆಗಳು ಮೂರು ವಿಭಿನ್ನ ಸ್ಥಳಗಳಲ್ಲಿ ಚದುರಿಕೊಂಡಿವೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ನಿವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ.
ಆನೆಗಳನ್ನು ಪ್ರಚೋದಿಸುವ ಅಥವಾ ಅವುಗಳ ಚಲನವಲನಕ್ಕೆ ಅಡ್ಡಿಪಡಿಸುವ ಯಾವುದೇ ಘಟನೆ ಸಂಭವಿಸಿದರೂ ಅವು ಮತ್ತಷ್ಟು ಉದ್ರಿಕ್ತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಹಿಂಡುಗಳು ಸಣ್ಣ ಗುಂಪುಗಳಾಗಿ ವಿಭಜನೆಯಾಗಿ ಮಾನವ-ಆನೆ ಸಂಘರ್ಷ ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ.
ಈ ಕುರಿತು ಮಾತನಾಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು, ಸದ್ಯಕ್ಕೆ ಆನೆಗಳನ್ನು ಮುಂದೆ ಕೊಂಡೊಯ್ಯದಿರಲು ನಿರ್ಧರಿಸಲಾಗಿದೆ. ಅವುಗಳನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನವನ್ನೂ ಮಾಡುವುದಿಲ್ಲ. ಸದ್ಯ ಅವು ಮೂಡಿಗೆರೆಯಲ್ಲಿವೆ. ಹಿಂಡನ್ನು ವಿಭಜಿಸಲು ನಾವು ಬಯಸುವುದಿಲ್ಲ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ನವೆಂಬರ್ 30ರಂದು ಸಭೆ ನಡೆಸಲಾಗುವುದು. ಬಳಿಕ ಕಾರ್ಯಾಚರಣೆಯ ಮುಂದಿನ ಹಂತವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ನವೆಂಬರ್ 30ರಂದು ಸಭೆ ನಡೆಯಲಿದ್ದು, ಅಲ್ಲಿಯವರೆಗೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ತೀವ್ರ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಲೂರಿನಿಂದ ಬಂದಿದ್ದ ಒಟ್ಟು 56 ಆನೆಗಳ ಹಿಂಡು ಈಗ ಮೂರು ಕಡೆಗಳಲ್ಲಿ ನೆಲೆಸಿದೆ. 38 ಆನೆಗಳಿರುವ ಒಂದು ಹಿಂಡು ಮೂಡಿಗೆರೆಯಲ್ಲಿದ್ದು, ತಟಕೊಳದವರೆಗೆ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ. ನಾಲ್ಕು ಗಂಡಾನೆಗಳು ಆರಂಭದಲ್ಲೇ ಬೇಲೂರಿನತ್ತ ಹಿಂದಿರುಗಿದ್ದು, ಈಗ ಅಲ್ಲಿನ ಕಾಫಿ ತೋಟಗಳಲ್ಲಿ ನೆಲೆಸಿವೆ. ಉಳಿದ 14 ಆನೆಗಳು ಕೊಡಗಿನತ್ತ ಸಾಗಲು ಪ್ರಯತ್ನಿಸುತ್ತಿದ್ದು, ಅವುಗಳ ಚಲನವಲನವನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ನವೆಂಬರ್ 18 ಮತ್ತು 19ರಂದು ಎರಡು ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಿದ ಬಳಿಕ, ನವೆಂಬರ್ 21ರಿಂದ ಬೇಲೂರಿನ ಆನೆಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದತ್ತ ಕೊಂಡೊಯ್ಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದರ ಭಾಗವಾಗಿ 56 ಆನೆಗಳನ್ನು ಭದ್ರಾದತ್ತ ಸಾಗಿಸಲು ಅರಣ್ಯ ಸಿಬ್ಬಂದಿ ಮುಂದಾಗಿದ್ದರು.
ನವೆಂಬರ್ 24ರವರೆಗೆ ಹಾಸನ ಗಡಿ ಮತ್ತು ಬೇಲೂರಿನಿಂದ ಮೂಡಿಗೆರೆ ಹಾಗೂ ತಟಕೊಳ ಅರಣ್ಯ ಪ್ರದೇಶದವರೆಗೆ ಸುಮಾರು 20 ಕಿ.ಮೀ ದೂರ ಆನೆಗಳನ್ನು ಕೊಂಡೊಯ್ಯಲಾಗಿತ್ತು. ಆದರೆ, ರಾಜಕಾರಣಿಗಳು ಮತ್ತು ಸ್ಥಳೀಯ ನಿವಾಸಿಗಳಿಂದ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಪರಿಣಾಮ ಆನೆಗಳು ಚದುರಿಕೊಂಡಿವೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆನೆಗಳು ತಮ್ಮ ಸಾಂಪ್ರದಾಯಿಕ ಮಾರ್ಗದ ಮೂಲಕ ಸಾಗಬೇಕಿದ್ದ ಒಟ್ಟು ದೂರ 60ರಿಂದ 66 ಕಿ.ಮೀ. ಈ ಪೈಕಿ ಇನ್ನೂ ಸುಮಾರು 40 ಕಿ.ಮೀ ಕ್ರಮಿಸಬೇಕಿದೆ. ಈಗ ಮೂರು ವಿಭಿನ್ನ ಸ್ಥಳಗಳಲ್ಲಿ ಆನೆಗಳ ಮೇಲೆ ನಿಗಾ ಇಡುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ 38 ಆನೆಗಳಿರುವ ಹಿಂಡು ಅರಣ್ಯಾಧಿಕಾರಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಗುಂಪಿನಲ್ಲಿ ಮರಿಯಾನೆಗಳು, ಹೆಣ್ಣಾನೆಗಳು, ಹರೆಯದ ಆನೆಗಳು ಮತ್ತು ಉಪಪ್ರಾಪ್ತ ವಯಸ್ಸಿನ ಆನೆಗಳಿವೆ. ಮರಿಯಾನೆಗಳ ಬಗ್ಗೆ ಹೆಣ್ಣಾನೆಗಳು ಹೆಚ್ಚು ಕಾಳಜಿ ವಹಿಸುತ್ತವೆ. ಆದರೆ ಹರೆಯದ ಮತ್ತು ಉಪಪ್ರಾಪ್ತ ಆನೆಗಳು ಕುತೂಹಲದಿಂದ ಅತ್ತಿತ್ತ ಸಂಚರಿಸುವ ಹಾಗೂ ಸುಲಭವಾಗಿ ದಾರಿ ತಪ್ಪುವ ಸಾಧ್ಯತೆಯಿದೆ. ಹೀಗಾಗಿ ಇಡೀ ಹಿಂಡನ್ನು ಒಂದೇ ಸ್ಥಳದಲ್ಲಿ ದೀರ್ಘಕಾಲ ಇರಿಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವೈ. ಯದುಕೊಂಡಲು ಮಾತನಾಡಿ, 1990ರ ದಶಕದಲ್ಲಿ ಬಂದ ಆನೆಗಳು ಇಂದಿಗೂ ಬೇಲೂರು ಪ್ರದೇಶದಲ್ಲೇ ನೆಲೆಸಿವೆ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ಹಿಂದಿನ ದಾಖಲೆಗಳ ಪ್ರಕಾರ ಆನೆಗಳು ಚಿಕ್ಕಮಗಳೂರು ಮತ್ತು ಮೂಡಿಗೆರೆ ನಡುವೆ ಸಂಚರಿಸುತ್ತಿದ್ದವು. ಅವು ಭದ್ರಾ ಪ್ರದೇಶವನ್ನು ತಲುಪಬೇಕಾದರೆ ಮೂಡಿಗರೆಯಿಂದ ಇನ್ನೂ 40 ಕಿ.ಮೀ ಸಾಗಬೇಕಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಈ ಕಾರ್ಯಾಚರಣೆಗಾಗಿ ರೈತರು ಹಿಂದೆ ಅಳವಡಿಸಿದ್ದ ಸೌರ ವಿದ್ಯುತ್ ಬೇಲಿಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಆನೆಗಳು ಈ ಮುಕ್ತ ಮಾರ್ಗಗಳನ್ನು ಬಳಸಿಕೊಂಡು ಯಾವುದೇ ಅಡೆತಡೆಯಿಲ್ಲದೆ ಸಂಚರಿಸುತ್ತಿವೆ. ಆನೆಗಳ ಚಲನವಲನ ಮತ್ತು ಅರಣ್ಯದ ಗಡಿಭಾಗಗಳ ಮೇಲೆ ನಿಗಾ ಇಡಲು ಹೆಚ್ಚುವರಿ ಸಿಬ್ಬಂದಿ, ಕುಮ್ಕಿ ಆನೆಗಳು ಹಾಗೂ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



