ರಾಜ್ಯ

'ಆಪರೇಷನ್ ಗಜ' ವಿವಾದ; ಕಾಡಾನೆ ಸಮಸ್ಯೆಯ ಚಿಕ್ಕಮಗಳೂರಿಗೆ ವರ್ಗಾಯಿಸುವ ಉದ್ದೇಶವಿಲ್ಲ: ನಯನಾ ಮೋಟಮ್ಮ ಆರೋಪಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ

ಸೋಮವಾರ ರಾತ್ರಿ ಸಲ್ಲಿಸಿರುವ ಸಮಗ್ರ ಸ್ಥಿತಿಗತಿ ವರದಿಯಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಹಾಗೂ ಆನೆ ಯೋಜನೆಯ ಅಧಿಕಾರಿ ಮನೋಜ್ ರಾಜನ್ ಅವರು, ಆನೆಗಳ ಚಲನವಲನದ ಮೇಲೆ..

'ಆಪರೇಷನ್ ಗಜ' ವಿವಾದ; ಕಾಡಾನೆ ಸಮಸ್ಯೆಯ ಚಿಕ್ಕಮಗಳೂರಿಗೆ ವರ್ಗಾಯಿಸುವ ಉದ್ದೇಶವಿಲ್ಲ: ನಯನಾ ಮೋಟಮ್ಮ ಆರೋಪಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ
ಆನೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ
Published On :

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಂದ ಕಾಡಾನೆಗಳನ್ನು ಸೂಕ್ತ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಉದ್ದೇಶದಿಂದ ಕೈಗೊಂಡಿರುವ 'ಆಪರೇಷನ್ ಗಜ' ಕಾರ್ಯಾಚರಣೆಯು ಹಾಸನದ ಆನೆಗಳ ಸಮಸ್ಯೆಯನ್ನು ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸುವ ಪ್ರಯತ್ನವಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಈ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಳವಾರ ಈ ಸ್ಪಷ್ಟನೆ ನೀಡಿದೆ. ಕಾರ್ಯಾಚರಣೆಯನ್ನು ವಿರೋಧಿಸಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಸೋಮವಾರ ವಿಧಾನಸಭಾಧ್ಯಕ್ಷರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಸೋಮವಾರ ರಾತ್ರಿ ಸಲ್ಲಿಸಿರುವ ಸಮಗ್ರ ಸ್ಥಿತಿಗತಿ ವರದಿಯಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಹಾಗೂ ಆನೆ ಯೋಜನೆಯ ಅಧಿಕಾರಿ ಮನೋಜ್ ರಾಜನ್ ಅವರು, ಆನೆಗಳ ಚಲನವಲನದ ಮೇಲೆ ಮೂರು ತಂಡಗಳು ನಿಗಾ ಇರಿಸಿವೆ ಎಂದು ತಿಳಿಸಿದ್ದಾರೆ.

ಇವುಗಳಲ್ಲಿ ಸುಮಾರು 35 ಆನೆಗಳನ್ನು ಒಳಗೊಂಡ ಎರಡು ದೊಡ್ಡ ಗುಂಪುಗಳು, ಬಿಕ್ಕೋಡು ಪ್ರದೇಶದಲ್ಲಿರುವ ಆನೆಗಳು ಹಾಗೂ ಪ್ರತ್ಯೇಕವಾಗಿ ಸಂಚರಿಸುತ್ತಿರುವ ಗಂಡಾನೆಗಳು ಸೇರಿವೆ.

ವರದಿಯ ಪ್ರಕಾರ, 17 ಮತ್ತು 18 ಆನೆಗಳನ್ನು ಒಳಗೊಂಡ ಎರಡು ಗುಂಪುಗಳು ತಟ್ಕೊಳ ಅರಣ್ಯ ಪ್ರದೇಶದತ್ತ ಸಾಗಿವೆ. ಸೋಮವಾರ ಬೆಳಗಿನ ವೀಕ್ಷಣೆಯ ಪ್ರಕಾರ, 17 ಆನೆಗಳ ಗುಂಪು ಹಿಂದಿನ ಸ್ಥಳದಿಂದ ಸುಮಾರು 4ರಿಂದ 5 ಕಿ.ಮೀ. ದೂರ ಸಾಗಿದ್ದು, ಅರಣ್ಯ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಲ್ಲಿತ್ತು. 18 ಆನೆಗಳ ಗುಂಪು ಅರಣ್ಯದಿಂದ ಸುಮಾರು 6.2 ಕಿ.ಮೀ. ದೂರದಲ್ಲಿತ್ತು.

ಆದರೆ, ಇವು ಬೆಳಗಿನ ಸಮಯದಲ್ಲಿ ನಡೆಸಿದ ವೀಕ್ಷಣೆಯ ಮಾಹಿತಿಯಾಗಿದ್ದು, ರಾತ್ರಿ 8.55ರ ವೇಳೆಗೆ ಸ್ವತಂತ್ರವಾಗಿ ಪರಿಶೀಲನೆ ನಡೆಸಿ ದೃಢಪಡಿಸಿರಲಿಲ್ಲ ಎಂದು ಇಲಾಖೆ ತಿಳಿಸಿದೆ.

ಆನೆಗಳಿಗೆ ಜಿಲ್ಲೆಗಳ ಗಡಿ ಗೊತ್ತಿಲ್ಲ

'ಆಪರೇಷನ್ ಗಜ' ಎಂಬುದು ಹಾಸನದ ಆನೆಗಳ ಸಮಸ್ಯೆಯನ್ನು ಚಿಕ್ಕಮಗಳೂರು ಅಥವಾ ಬೇರೆ ಯಾವುದೇ ಜಿಲ್ಲೆಗೆ ವರ್ಗಾಯಿಸುವ ಕಾರ್ಯಾಚರಣೆಯಲ್ಲ. ಆನೆಗಳಿಗೆ ಆಡಳಿತಾತ್ಮಕ ಜಿಲ್ಲೆಗಳ ಗಡಿಗಳ ಅರಿವಿಲ್ಲ. ಅವು ಸಹಜವಾಗಿ ಸೂಕ್ತ ಅರಣ್ಯ ಪ್ರದೇಶಗಳಿಗೆ ತೆರಳಲು ಅನುಕೂಲ ಮಾಡಿಕೊಡುವುದು ಮತ್ತು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಕಾಪಾಡುವುದು ನಮ್ಮ ಉದ್ದೇಶ ಎಂದು ಮನೋಜ್ ರಾಜನ್ ವರದಿಯಲ್ಲಿ ತಿಳಿಸಿದ್ದಾರೆ.

ಸೋಮವಾರ ತಾವು ಖುದ್ದಾಗಿ ತಟ್ಕೊಳ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಆನೆಗಳು ಅರಣ್ಯ ಪ್ರವೇಶಿಸಲು ಇರುವ ಮಾರ್ಗಗಳು, ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು, ಭೂಪ್ರದೇಶ ಹಾಗೂ ಆನೆಗಳ ಸಂಚಾರ ಮಾರ್ಗಗಳನ್ನು ಪರಿಶೀಲಿಸಿರುವುದಾಗಿ ಹೇಳಿದ್ದಾರೆ.

ಕೊಪ್ಪ ಅರಣ್ಯ ವಿಭಾಗಕ್ಕೂ ಭೇಟಿ ನೀಡಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಕಾರ್ಯಾಚರಣೆಯ ಸಿದ್ಧತೆ ಕುರಿತು ಚರ್ಚಿಸಿದ್ದಾರೆ. ಆನೆಗಳ ಗುಂಪುಗಳು ದಿಕ್ಕು ಬದಲಿಸಿದರೆ, ಕೃಷಿ ಜಮೀನು ಅಥವಾ ಜನವಸತಿ ಪ್ರದೇಶಗಳಿಗೆ ನುಗ್ಗಿದರೆ, ಸಣ್ಣ ಅರಣ್ಯ ಪ್ರದೇಶಗಳಲ್ಲಿ ನಿಂತರೆ ಅಥವಾ ಮತ್ತೆ ಹಾಸನ, ಬೇಲೂರು ಹಾಗೂ ಮೂಡಿಗೆರೆ ಕಡೆಗೆ ಹಿಂದಿರುಗಿದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇಲಾಖೆ ಪರಿಶೀಲನೆ ನಡೆಸಿದೆ. ಆನೆಗಳ ಗುಂಪುಗಳು ಸಣ್ಣ ಗುಂಪುಗಳಾಗಿ ವಿಭಜನೆಯಾಗುವ ಸಾಧ್ಯತೆಯನ್ನೂ ಗಮನದಲ್ಲಿಟ್ಟುಕೊಂಡಿದೆ.

ಆನೆ ತಡೆಗೆ ಹಲವು ಮುನ್ನೆಚ್ಚರಿಕೆ ಕ್ರಮ

ಆನೆಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಆನೆ ತಡೆ ಕಂದಕಗಳ ದುರಸ್ತಿ ಮತ್ತು ಬಲವರ್ಧನೆ, ಕಾರ್ಯನಿರ್ವಹಿಸದ ಸೌರ ಬೇಲಿಗಳ ಪುನಃಸ್ಥಾಪನೆ, ಈಗಿರುವ ತಡೆಗೋಡೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಾಧ್ಯತೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ.

ಇದರ ಜತೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು, ಅನುಭವಿ ಮಾವುತರು ಹಾಗೂ ಪಶುವೈದ್ಯಕೀಯ ಮತ್ತು ನಿಗಾ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಕುಮ್ಕಿ ಆನೆ ಶಿಬಿರ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಆದರೆ, ಇವೆಲ್ಲವೂ ಪ್ರಸ್ತಾವಿತ ಅಥವಾ ಕಾರ್ಯಸಾಧ್ಯತೆ ಪರಿಶೀಲನೆಯ ಹಂತದಲ್ಲಿರುವ ಕ್ರಮಗಳಾಗಿದ್ದು, ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ರಾಜನ್, ಆನೆಗಳ ಐತಿಹಾಸಿಕ ಚಲನವಲನ, ಸಾಂಪ್ರದಾಯಿಕ ಸಂಚಾರ ಮಾರ್ಗಗಳು ಹಾಗೂ ಹಾಸನ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಭದ್ರಾ ಅರಣ್ಯ ಪ್ರದೇಶಗಳ ನಡುವಿನ ಸಂಪರ್ಕದ ಬಗ್ಗೆ ವಿವರಿಸಿದ್ದಾರೆ.

ಆನೆಗಳ ಚಲನವಲನದ ಬಗ್ಗೆ ಗ್ರಾಮಮಟ್ಟದಲ್ಲಿ ಮುನ್ನೆಚ್ಚರಿಕೆ ನೀಡುವುದು, ಧ್ವನಿವರ್ಧಕಗಳ ಮೂಲಕ ಮಾಹಿತಿ ಪ್ರಸಾರ, ಗಸ್ತು ಹೆಚ್ಚಳ ಹಾಗೂ ನಿಗಾ ತಂಡಗಳು ಮತ್ತು ಸ್ಥಳೀಯ ಅರಣ್ಯ ಅಧಿಕಾರಿಗಳ ನಡುವೆ ದಿನದ 24 ಗಂಟೆಯೂ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನೂ ಇಲಾಖೆ ರೂಪಿಸಿದೆ.

ಆನೆಗಳನ್ನು ನೋಡಲು ಜನರು ಗುಂಪುಗೂಡುವುದು, ಅವುಗಳನ್ನು ಬೆನ್ನಟ್ಟುವುದು ಅಥವಾ ಪಟಾಕಿ ಸಿಡಿಸುವುದನ್ನು ಮಾಡಬಾರದು. ಇಂತಹ ಕೃತ್ಯಗಳು ಆನೆಗಳ ಚಲನವಲನವನ್ನು ಅನಿರೀಕ್ಷಿತಗೊಳಿಸಬಹುದು ಎಂದು ಇಲಾಖೆ ಎಚ್ಚರಿಸಿದೆ.

ಸೋಮವಾರ ರಾತ್ರಿ 10 ಗಂಟೆಯ ನಂತರ ಆನೆಗಳ ಗುಂಪುಗಳು ತಟ್ಕೊಳ ಮೀಸಲು ಅರಣ್ಯದತ್ತ ಸಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಚಲನವಲನವನ್ನು ವೀಕ್ಷಿಸಲು ತಂಡಗಳನ್ನು ನಿಯೋಜಿಸಲಾಗಿತ್ತು. ಆನೆಗಳ ದಿಕ್ಕು, ವೇಗ ಮತ್ತು ವರ್ತನೆಯನ್ನು ಯಾವುದೇ ಅನಗತ್ಯ ತೊಂದರೆ ನೀಡದೆ ಗಮನಿಸುವುದು ತಂಡಗಳ ಉದ್ದೇಶವಾಗಿತ್ತು.

ಆನೆಗಳನ್ನು ಬಲವಂತವಾಗಿ ಓಡಿಸುವ ಬದಲು ಅವುಗಳ ಸಹಜ ಚಲನವಲನಕ್ಕೆ ಅವಕಾಶ ಮಾಡಿಕೊಡುವುದು ಕಾರ್ಯಾಚರಣೆಯ ಮೂಲ ಉದ್ದೇಶ. ಅಗತ್ಯವಿದ್ದರೆ ಮಾತ್ರ ಆನೆಗಳ ವರ್ತನೆ, ಸಾರ್ವಜನಿಕರ ಸುರಕ್ಷತೆ ಹಾಗೂ ಸ್ಥಳದಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಜೀನಾಮೆ ಸಲ್ಲಿಸಿದ್ದ ನಯನಾ ಮೋಟಮ್ಮ

ಹಾಸನದಿಂದ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ತಮ್ಮ ಮೂಡಿಗೆರೆ ಕ್ಷೇತ್ರದತ್ತ ಓಡಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಸೋಮವಾರ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಈ ಕಾರ್ಯಾಚರಣೆ ಆರಂಭಿಸುವ ಮುನ್ನ ಸಂಬಂಧಪಟ್ಟ ಕ್ಷೇತ್ರಗಳ ಜನಪ್ರತಿನಿಧಿಗಳೊಂದಿಗೆ ಅರಣ್ಯ ಇಲಾಖೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕರೊಂದಿಗೆ ನವೆಂಬರ್ 25ರಂದು ನಡೆಯಬೇಕಿದ್ದ ಸಭೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆದರೆ, ಅದಕ್ಕೂ ಮೊದಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂಬುದು ಅವರ ಆರೋಪ.

"ನನ್ನನ್ನು ಆಯ್ಕೆ ಮಾಡಿದ ಜನರಿಗೆ ನಾನು ಉತ್ತರ ನೀಡಬೇಕಿದೆ. ಸರ್ಕಾರಕ್ಕೆ ಮಾತ್ರ ನಾನು ಉತ್ತರದಾಯಿ ಅಲ್ಲ. ನಮ್ಮನ್ನು ಆಯ್ಕೆ ಮಾಡಿದ ಜನರನ್ನೇ ರಕ್ಷಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕ ಹುದ್ದೆಯಲ್ಲಿರುವುದಕ್ಕೆ ಏನು ಅರ್ಥ?" ಎಂದು ಅವರು ಪ್ರಶ್ನಿಸಿದ್ದರು.

ಚಿಕ್ಕಮಗಳೂರು ಶಾಸಕ ಟಿ.ಡಿ. ತಮ್ಮಯ್ಯ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಕೂಡ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಜನರ ಜೀವ, ಬೆಳೆ ಹಾಗೂ ಜೀವನೋಪಾಯಕ್ಕೆ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ಇನ್ನು, ಹಾಸನ ಡಿಎಫ್‌ಒ ಹರೀಶ್ ಅವರನ್ನು ಅಮಾನತುಗೊಳಿಸುವಂತೆ ತಮ್ಮಯ್ಯ ಒತ್ತಾಯಿಸಿದ್ದರು. ಅಧಿಕಾರಿಯ ಕ್ರಮಗಳಿಂದ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದು, ಆನೆಗಳು ಮೂಡಿಗೆರೆ ಕಡೆಗೆ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.