'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ'.. 'ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಆನೆಗಳ ಸ್ಥಳಾಂತರದಿಂದ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆನೆಗಳಿಗೆ ತಮ್ಮ ಹಳೆಯ ದಾರಿಗಳು ನೆನಪಿರುತ್ತವೆ. ಅವು ಮತ್ತೆ ಅದೇ ಮಾರ್ಗಗಳಲ್ಲಿ ಸಂಚರಿಸುತ್ತವೆ. ಕಾಡು ಆನೆಗಳಿಗೂ ಅವುಗಳ ನೆಲೆಯ..

ಬೆಂಗಳೂರು: ಆನೆಗಳ ಸ್ಥಳಾಂತರ ವಿಚಾರವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ವ್ಯಾಪಕ ಪರ-ವಿರೋಧ ಚರ್ಚೆಗಳ ನಡುವೆಯೇ ನಟಿ ಹಾಗೂ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ, 'ಆನೆಗಳ ಸ್ಥಳಾಂತರ ಪರಿಹಾರವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ, 'ಆನೆಗಳ ಸ್ಥಳಾಂತರದಿಂದ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆನೆಗಳಿಗೆ ತಮ್ಮ ಹಳೆಯ ದಾರಿಗಳು ನೆನಪಿರುತ್ತವೆ. ಅವು ಮತ್ತೆ ಅದೇ ಮಾರ್ಗಗಳಲ್ಲಿ ಸಂಚರಿಸುತ್ತವೆ. ಕಾಡು ಆನೆಗಳಿಗೂ ಅವುಗಳ ನೆಲೆಯ ಮೇಲೆ ಹಕ್ಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆನೆಗಳ ಸಂಚಾರದ ಹಾದಿಗಳಲ್ಲಿ ಒತ್ತುವರಿಗಳು ಅವುಗಳ ಸಹಜ ಚಲನವಲನಕ್ಕೆ ಅಡ್ಡಿಯಾಗಿವೆ. ಆನೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಬದಲು, ಅವುಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳನ್ನು ಮುಕ್ತಗೊಳಿಸಬೇಕು. ಒತ್ತುವರಿಗಳನ್ನು ತೆರವುಗೊಳಿಸಿ, ಅಗತ್ಯವಿದ್ದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಆನೆಗಳ ಸಂಚಾರಕ್ಕೆ ದಾರಿಗಳನ್ನು ನಿರ್ಮಿಸಬೇಕು' ಎಂದು ರಮ್ಯಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಲ್ಲದೆ, ಆನೆಗಳಿಗೆ ಆಹಾರವಾಗುವ ಬಿದಿರು ಸೇರಿದಂತೆ ಇತರ ಸಸ್ಯಗಳನ್ನು ನೆಡಬೇಕು. ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಲು ಅತ್ಯಾಧುನಿಕ ಸೆನ್ಸರ್‌ಗಳು ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕು. ಆನೆಗಳಿಗೂ ಹಾನಿಯಾಗಬಾರದು, ಜನರಿಗೂ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ವೈಜ್ಞಾನಿಕ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ನಯನಾ ಮೋಟಮ್ಮ ಎಚ್ಚರಿಕೆ
ಇತ್ತ ಹಾಸನ ಜಿಲ್ಲೆಯಿಂದ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ತಮ್ಮ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಸೋಮವಾರ ಸ್ಪೀಕರ್ ಕಚೇರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ತಮ್ಮ ಕ್ಷೇತ್ರದ ಜನರ ಹಿತಾಸಕ್ತಿ ಮತ್ತು ಜೀವಗಳನ್ನು ನಿರ್ಲಕ್ಷಿಸಲಾಗುತ್ತಿದ್ದರೆ, ಶಾಸಕಿಯಾಗಿ ಮುಂದುವರಿಯಲು ತಮಗೆ ಇಷ್ಟವಿಲ್ಲ ಎಂದು ಅವರು ತಿಳಿಸಿದ್ದಾರೆ.
ನನ್ನ ಪಾತ್ರವಿಲ್ಲ ಎಂದ ಸಚಿವ ಶಿವಲಿಂಗೇಗೌಡ
ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು, ಆನೆ ಸ್ಥಳಾಂತರ ವಿಚಾರವಾಗಿ ಉಂಟಾಗಿರುವ ವಿವಾದದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಸಚಿವರ ಸೂಚನೆಯಂತೆ ಅಧಿಕಾರಿಗಳು ಆನೆ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಈ ನಿರ್ಧಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ಅಸಮಾಧಾನಗೊಂಡಿರುವ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿರುವುದು ಅವರ ವೈಯಕ್ತಿಕ ವಿಚಾರ. ಅದು ಅವರ ಭಾವನೆ ಮತ್ತು ನಿರ್ಧಾರಕ್ಕೆ ಸಂಬಂಧಿಸಿದ್ದು.. ಅಲ್ಲದೆ, ಈ ವಿವಾದದಲ್ಲಿ ನಯನಾ ಮೋಟಮ್ಮ ಅವರು ತಮ್ಮ ಹೆಸರನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




