

ಬೆಂಗಳೂರು: ಭಾರತದಲ್ಲಿ ದೇಗುಲದ ಆನೆಗಳ ಬದುಕು ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆನೆಗಳು, ಮತ್ತೊಂದೆಡೆ ದೀರ್ಘಕಾಲ ಬಂಧನದಲ್ಲಿ ಬದುಕಬೇಕಾದ ಸಂಕಷ್ಟ ಎದುರಿಸುತ್ತಿವೆ.
ಇದಕ್ಕೆ ಕರ್ನಾಟಕದ ಅಲಕನೂರು ಮಠದ ಆನೆ ಧ್ರುವರಾಜನ ಸಾವು ಉದಾಹರಣೆಯಾಗಿದೆ. ಧ್ರುವರಾಜ ಆನೆ 25 ವರ್ಷಕ್ಕೂ ಹೆಚ್ಚು ಕಾಲ ಅಲಕನೂರು ಮಠದ ಸೇವೆಯಲ್ಲಿತ್ತು. ಆದರೆ ಕೇವಲ 30ನೇ ವಯಸ್ಸಿನಲ್ಲೇ ಮೃತಪಟ್ಟಿದೆ ಎಂದು ಸುಜಯ್ ಜಗದೀಶ್ ಎನ್ನುವವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಅವರು, 'ಸಾಮಾನ್ಯವಾಗಿ ಆನೆಗಳ ನೈಸರ್ಗಿಕ ಜೀವಿತಾವಧಿ ಸುಮಾರು 70 ವರ್ಷಗಳೆಂದು ಹೇಳಲಾಗುತ್ತದೆ. ಹೀಗಾಗಿ ಧ್ರುವರಾಜನ ಸಾವು, ದೇಗುಲದ ಆನೆಗಳ ಜೀವನ ಪರಿಸ್ಥಿತಿ ಮತ್ತು ಅವುಗಳ ಕಲ್ಯಾಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ' ಎಂದಿದ್ದಾರೆ.
ಸಂಪ್ರದಾಯದ ಹೆಸರಿನಲ್ಲಿ ಬಂಧನದ ಬದುಕು?
ದೇಗುಲದ ಧಾರ್ಮಿಕ ಆಚರಣೆಗಳು, ಮೆರವಣಿಗೆಗಳು ಮತ್ತು ಉತ್ಸವಗಳಲ್ಲಿ ಆನೆಗಳಿಗೆ ವಿಶೇಷ ಸ್ಥಾನವಿದೆ. ಭಕ್ತರು ಅವುಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಆದರೆ ಈ ಗೌರವದ ಮತ್ತೊಂದು ಮುಖವಾಗಿ ಆನೆಗಳು ದೀರ್ಘಕಾಲ ಸೆರೆಯಲ್ಲಿದ್ದು, ತಮ್ಮ ಸಹಜ ಪರಿಸರದಿಂದ ದೂರವಾಗಿ ಬದುಕಬೇಕಾದ ಪರಿಸ್ಥಿತಿ ಎದುರಿಸುತ್ತಿವೆ.
ಧಾರ್ಮಿಕ ಸಂಪ್ರದಾಯಗಳನ್ನು ಉಳಿಸುವುದರ ಜೊತೆಗೆ ಆನೆಗಳ ಆರೋಗ್ಯ, ಸ್ವಾತಂತ್ರ್ಯ ಮತ್ತು ಕಲ್ಯಾಣಕ್ಕೂ ಆದ್ಯತೆ ನೀಡಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ರಮ್ಯಾ ಪೋಸ್ಟ್
ದೇಗುಲದ ಆನೆ ಕಾಲಿಗೆ ಸರಪಳಿ ಬಿಗಿದು ತೀವ್ರ ಗಾಯವಾಗಿರುವ ಫೋಟೋ ವೈರಲ್ ಆಗುತ್ತಲೇ ಈ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆಯನ್ನು ಇಂತಹ ಅಮಾನವೀಯ ಸ್ಥಿತಿಯಲ್ಲಿ ಇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಯನ್ನೂ ಪ್ರಶ್ನಿಸಿದ್ದಾರೆ.
“ಇಂತಹ ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಪಟ್ಟ ಇಲಾಖೆಯೇ ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಸಚಿವರು ಹಾಗೂ ಧಾರ್ಮಿಕ ವಲಯದ ಒತ್ತಡಕ್ಕೆ ಇಲಾಖೆ ಹೆದರಿದೆಯೇ ಎಂಬ ಅನುಮಾನ ಮೂಡುತ್ತಿದೆ” ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿದ್ದೇನು?
ರಮ್ಯಾ ತಮ್ಮ ಪೋಸ್ಟ್‌ನಲ್ಲಿ, “ಪ್ಯಾಥೆಟಿಕ್. ಇದು ನನಗೆ ತೀವ್ರ ಕೋಪ ಮತ್ತು ದುಃಖ ಉಂಟುಮಾಡುತ್ತಿದೆ. ಸಚಿವರು ಹಾಗೂ ಧಾರ್ಮಿಕ ವಲಯಕ್ಕೆ ಹೆದರಿರುವಂತೆ ಕಾಣುವ ಇಲಾಖೆಯೇ ಇಂತಹ ಅಮಾನವೀಯ ಮತ್ತು ಕಾನೂನುಬಾಹಿರ ಕೃತ್ಯಗಳಿಗೆ ಅವಕಾಶ ನೀಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಆನೆಯ ಕಾಲಿಗೆ ಸರಪಳಿ ಬಿಗಿದು ಗಾಯವಾಗಿರುವ ಘಟನೆ ಪ್ರಾಣಿ ಕಲ್ಯಾಣದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ದೇಗುಲದ ಸಂಪ್ರದಾಯಗಳ ಹೆಸರಿನಲ್ಲಿ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯಬಾರದು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.
ನೆಟ್ಟಿಗರ ಪ್ರತಿಕ್ರಿಯೆ
ದೇಗುಲದ ಆನೆಯ ಕಾಲಿಗೆ ಸರಪಳಿ ಬಿಗಿದಿರುವುದರಿಂದ ತೀವ್ರ ಗಾಯವಾಗಿರುವುದನ್ನು ಕಂಡು ಪ್ರಾಣಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ರಮ್ಯಾ ಕೂಡ ಧ್ವನಿ ಎತ್ತಿದ್ದು, ಆನೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯದ ಧ್ವನಿಯನ್ನು ತಮ್ಮ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
“ಇದು ಶೋಚನೀಯ. ನನಗೆ ತುಂಬಾ ಕೋಪ ಮತ್ತು ದುಃಖವಾಗುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ. ಸಚಿವರು ಮತ್ತು ಧಾರ್ಮಿಕ ವಲಯದ ಒತ್ತಡಕ್ಕೆ ಮಣಿದು ಸಂಬಂಧಪಟ್ಟ ಇಲಾಖೆ ಇಂತಹ ಕೃತ್ಯಗಳನ್ನು ತಡೆಯಲು ವಿಫಲವಾಗಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.