ದೇಶ

ಪಂಜಾಬ್ ಚುನಾವಣೆ: ಬಿಜೆಪಿ- ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ

ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ವಿಚಾರವಾಗಿ 2020ರ ಸೆಪ್ಟೆಂಬರ್‌ನಲ್ಲಿ ಎಸ್‌ಎಡಿ, ಬಿಜೆಪಿಯೊಂದಿಗಿನ ತನ್ನ 24 ವರ್ಷಗಳ ಹಳೆಯ ಮೈತ್ರಿಯನ್ನು ಕಡಿದುಕೊಂಡಿತ್ತು.

ಪಂಜಾಬ್ ಚುನಾವಣೆ: ಬಿಜೆಪಿ- ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ನರೇಂದ್ರ ಮೋದಿ ಮತ್ತು ಸುಖಬೀರ್ ಸಿಂಗ್ ಬಾದಲ್
Published On :

ನವದೆಹಲಿ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಮೈತ್ರಿ ಘೋಷಿಸಿವೆ.

ಪಂಜಾಬ್‌ನಲ್ಲಿ ಬಿಜೆಪಿ ಮತ್ತು ಅಕಾಲಿ ದಳದ ಮೈತ್ರಿಯು ಮತ್ತೆ ಮೊದಲಿನ ಸ್ಥಿತಿಗೆ ಮರಳಿದೆ. ಈಗ ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ವಿಚಾರವಾಗಿ 2020ರ ಸೆಪ್ಟೆಂಬರ್‌ನಲ್ಲಿ ಎಸ್‌ಎಡಿ, ಬಿಜೆಪಿಯೊಂದಿಗಿನ ತನ್ನ 24 ವರ್ಷಗಳ ಹಳೆಯ ಮೈತ್ರಿಯನ್ನು ಕಡಿದುಕೊಂಡಿತ್ತು. ಇದಕ್ಕೂ ಮೊದಲು, ಲೋಕಸಭಾ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಮೋದಿ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು.

ಗುರುಪುರಬ್ (ಗುರುನಾನಕ್ ಜಯಂತಿ) ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ನಿತಿನ್ ನಬಿನ್, ಗೃಹ ಸಚಿವ ಅಮಿತ್ ಶಾ ಮತ್ತು ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಈ ಮೈತ್ರಿ ಘೋಷಿಸಿದ್ದಾರೆ. ಹಳೆಯ ಮಿತ್ರಪಕ್ಷಗಳು ಮತ್ತೆ ಒಂದಾಗಲಿವೆ ಎಂಬ ಬಗ್ಗೆ ಕಳೆದ ಕೆಲವು ವಾರಗಳಿಂದ ತೀವ್ರ ಊಹಾಪೋಹಗಳು ಕೇಳಿಬರುತ್ತಿದ್ದವು, ಇದೀಗ ಅದಕ್ಕೆ ಅಧಿಕೃತ ಘೋಷಣೆ ಸಿಕ್ಕಿದೆ.

ಎನ್‌ಡಿಎ (NDA) ಮೈತ್ರಿಕೂಟದ ಅತ್ಯಂತ ಹಳೆಯ ಮಿತ್ರಪಕ್ಷವಾದ ಅಕಾಲಿ ದಳವು ಈಗ ಮತ್ತೆ ಎನ್‌ಡಿಎಗೆ ಮರಳುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಅಮಿತ್ ಶಾ ಮೈತ್ರಿಯನ್ನು ಘೋಷಿಸುವಾಗ ಹೇಳಿದರು.

ಈ ಮೈತ್ರಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಅಮಿತ್ ಶಾ, ಪ್ರಧಾನಿಯವರು ಈ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಮತ್ತು ಈ ಮೈತ್ರಿಯನ್ನು "ಹಿಂದೂ-ಸಿಖ್ ಸಹೋದರತ್ವದ ಸಂಕೇತ" ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು. 2027ರ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (SAD) ನಡುವೆ ಸೀಟು ಹಂಚಿಕೆ ಕುರಿತ ಮಾತುಕತೆಗಳು ನಡೆಯುತ್ತಿವೆ.

ಈ ಮೈತ್ರಿಯ ಭಾಗವಾಗಿ ರಾಜ್ಯದ ಒಟ್ಟು 117 ಸ್ಥಾನಗಳ ಪೈಕಿ ಬಿಜೆಪಿ ಸುಮಾರು 40 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಹೀಗಾದಲ್ಲಿ, 2020ರಲ್ಲಿ ಮೈತ್ರಿ ಮುರಿದುಬೀಳುವ ಮೊದಲು ಬಿಜೆಪಿ ಸ್ಪರ್ಧಿಸುತ್ತಿದ್ದ 23 ಸ್ಥಾನಗಳಿಗೆ ಹೋಲಿಸಿದರೆ, ಇದು ಬಹುತೇಕ ದುಪ್ಪಟ್ಟಾಗಲಿದೆ. ಈ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅಕಾಲಿ ದಳವು (SAD) ಹಿಂದೆ 94 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿತ್ತು.

2022ರ ವಿಧಾನಸಭಾ ಚುನಾವಣೆಯಲ್ಲಿ, ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆಗ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡರೆ, ಅಕಾಲಿ ದಳವು ಒಟ್ಟು 117 ಕ್ಷೇತ್ರಗಳ ಪೈಕಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲು ಶಕ್ತವಾಗಿತ್ತು.

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು (AAP) ಹೊರತುಪಡಿಸಿ, ತಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಎನ್ ಡಿಎ ಮೈತ್ರಿ ಕೂಟಕ್ಕೆ ಅಕಾಲಿ ದಳದ ಮರಳುವಿಕೆಯನ್ನು ಸ್ವಾಗತಿಸಿದರು, ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷ ಎಂದು ಬಣ್ಣಿಸಿದರು ಮತ್ತು ದಶಕಗಳಿಂದಲೂ ಉಭಯ ಪಕ್ಷಗಳ ನಡುವಿನ ಬಾಂಧವ್ಯವು ಬಲವಾಗಿಯೇ ಉಳಿದಿದೆ ಎಂದು ಹೇಳಿದರು.

"ಅಕಾಲಿ ದಳದೊಂದಿಗೆ ನಮ್ಮ ಸಂಬಂಧ ಯಾವಾಗಲೂ ಬಲವಾಗಿದೆ. ನಮ್ಮ ಬಾಂಧವ್ಯ ವಾಜಪೇಯಿ-ಅಡ್ವಾಣಿ ಯುಗದಷ್ಟು ಹಳೆಯದು, ಎಂದು ಹೇಳಿದ ಶಾ, ಅಕಾಲಿ ದಳವನ್ನು ಎನ್‌ಡಿಎಗೆ ಮರಳಿ ಸ್ವಾಗತಿಸುವುದಾಗಿ ತಿಳಿಸಿದರು.

ಬಿಜೆಪಿ-ಎಸ್‌ಎಡಿ ಮೈತ್ರಿಕೂಟದ ವಿವರವಾದ ಪ್ರಣಾಳಿಕೆಯನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ ಶಾ, ಪಂಜಾಬ್‌ನಲ್ಲಿ ಮಾದಕವಸ್ತು ಪಿಡುಗನ್ನು ನಿರ್ಮೂಲನೆ ಮಾಡುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರುತ್ತದೆ ಎಂದು ಒತ್ತಿ ಹೇಳಿದರು.

ಎಸ್‌ಎಡಿ ಜೊತೆಗೂಡಿರುವುದರಿಂದ, ರೈತರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಹಿಂದೂ-ಸಿಖ್ ಐಕ್ಯತೆಯನ್ನು ಉತ್ತೇಜಿಸುವ ಬಿಜೆಪಿಯ ಬದ್ಧತೆಗೆ ಮತ್ತಷ್ಟು ಬಲ ಸಿಗಲಿದೆ ಎಂದೂ ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.