

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (AAP)31 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಗುರುದಾಸ್‌ಪುರ, ಪಠಾಣ್‌ಕೋಟ್ ಮತ್ತು ಅಮೃತಸರ ಉತ್ತರ ಕ್ಷೇತ್ರಗಳಂತಹ ಪ್ರಮುಖ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಹಲವು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ.
ಪಕ್ಷವು ಸುಜನ್‌ಪುರದಿಂದ ಸರ್ವಾನ್ ಸಲಾರಿಯಾ, ಪಠಾಣ್‌ಕೋಟ್‌ನಿಂದ ರೋಹಿತ್ ಸ್ಯಾಲ್, ಗುರುದಾಸ್‌ಪುರದಿಂದ ರಾಮನ್ ಬಹಲ್, ದಿನಾ ನಗರದಿಂದ ಶಂಶೇರ್ ಸಿಂಗ್ ಮತ್ತು ಖಾದಿಯಾನ್‌ನಿಂದ ಗುರಿಕ್ಬಾಲ್ ಸಿಂಗ್ ಮಹಲ್ ಅವರನ್ನು ಅಮೃತಸರ ಉತ್ತರದಿಂದ ಕರಮ್‌ಜಿತ್ ಸಿಂಗ್ ರಿಂಟು ಸೇರಿದಂತೆ 31 ಅಭ್ಯರ್ಥಿಗಳನ್ನು ಹೆಸರನ್ನು ಅಂತಿಮಗೊಳಿಸಲಾಗಿದೆ.
ಪ್ರಸ್ತುತ ಜೈಲಿನಲ್ಲಿರುವ ಮಾಜಿ ಸಚಿವ ಲಾಲ್‌ಜಿತ್ ಸಿಂಗ್ ಭುಲ್ಲರ್ ಪ್ರತಿನಿಧಿಸುತ್ತಿರುವ ಪತ್ತಿ ವಿಧಾನಸಭಾ ಕ್ಷೇತ್ರಕ್ಕೆ, ಎಎಪಿ ಹೊಸ ಅಭ್ಯರ್ಥಿಯನ್ನು ಘೋಷಿಸಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭುಲ್ಲರ್ ನಿನ್ನೆಯಷ್ಟೇ ಘೋಷಿಸಿದ್ದರು. ಅವರು ಜೈಲಿನಲ್ಲಿಯೇ ಇರುವುದರಿಂದ, ಪಕ್ಷವು ಅವರ ಉಮೇದುವಾರಿಕೆಯನ್ನು ಹಿಂಪಡೆಯಬಹುದು ಅಥವಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ, ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಬೇರೆ ಪಕ್ಷಕ್ಕೂ ಸೇರುವುದಿಲ್ಲ ಎಂದು ಭುಲ್ಲರ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಎಎಪಿಯ ಹಲವು ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ ಹಲವು ಕ್ಷೇತ್ರಗಳಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಇಬ್ಬರು ಸಂಸದರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ನೀಡಲಾಗಿದೆ. ಸಂಗ್ರೂರು ಸಂಸದ ಮತ್ತು ಮಾಜಿ ಸಚಿವ ಗುರ್ಮೀತ್ ಸಿಂಗ್ 'ಮೀತ್ ಹಾಯರ್' ಅವರನ್ನು ಬರ್ನಾಲಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಅವರು ಈ ಹಿಂದೆ ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಹೊಶಿಯಾರ್‌ಪುರ ಸಂಸದ ರಾಜ್‌ಕುಮಾರ್ ಚಬ್ಬೇವాల్ ಅವರನ್ನು ಫಗ್ವಾರಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.