ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಕೋರಿ 2ನೇ ಬಾರಿ ಹೈಕೋರ್ಟ್ ಮೆಟ್ಟಿಲೇರಿದ ಪವಿತ್ರಾಗೌಡ, ಡಿ.4ಕ್ಕೆ ವಿಚಾರಣೆ ಮುಂದೂಡಿಕೆ

ಪವಿತ್ರಾ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಲ್ಲಿ ಇಂದು ನಡೆಯಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಕೋರಿ 2ನೇ ಬಾರಿ ಹೈಕೋರ್ಟ್ ಮೆಟ್ಟಿಲೇರಿದ ಪವಿತ್ರಾಗೌಡ, ಡಿ.4ಕ್ಕೆ ವಿಚಾರಣೆ ಮುಂದೂಡಿಕೆ
ಪವಿತ್ರಾ ಗೌಡ
Published On :

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿ (A1) ಪವಿತ್ರಾ ಗೌಡ ಮತ್ತೊಮ್ಮೆ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.

ಪವಿತ್ರಾ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಲ್ಲಿ ಇಂದು ನಡೆಯಿತು. ಡಿಸೆಂಬರ್ 12 ಮತ್ತು 13ರಂದು ತಮ್ಮ ಸಹೋದರನ ವಿವಾಹ ಸಮಾರಂಭ ನಿಗದಿಯಾಗಿದೆ. ಕುಟುಂಬದ ಈ ಪ್ರಮುಖ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುವುದು ಅತ್ಯಗತ್ಯವಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಪವಿತ್ರಾ ಗೌಡ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದಾರೆ.

ವಿಚಾರಣೆ ವೇಳೆ, ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ (SPP) ಅರ್ಜಿಯ ಪ್ರತಿಯನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಪವಿತ್ರಾ ಗೌಡ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅರ್ಜಿಯ ಪ್ರತಿ ಹಾಗೂ ನೋಟಿಸ್ ಪಡೆದುಕೊಳ್ಳುವಂತೆ ಎಸ್‌ಪಿಪಿ ಅವರಿಗೆ ಸೂಚನೆ ನೀಡಿತು. ಅಲ್ಲದೆ, ಈ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ನಿಗದಿಪಡಿಸಿತು .

ಈ ಹಿಂದೆ ಸೆಪ್ಟೆಂಬರ್ 26ರಂದು ಬೆಂಗಳೂರಿನ 59ನೇ ಸಿಸಿಎಚ್ (ಸೆಷನ್ಸ್) ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ, ಇದೀಗ ಹೈಕೋರ್ಟ್ ಮೂಲಕವಾದರೂ ತಾತ್ಕಾಲಿಕ ಬಿಡುಗಡೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧಿತರಾದಾಗಿನಿಂದ ಪವಿತ್ರಾ ಗೌಡ ಜಾಮೀನು ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸೆಷನ್ಸ್ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಸೇರಿ ಇದುವರೆಗೆ ಒಟ್ಟು 7ಕ್ಕೂ ಹೆಚ್ಚು ಬಾರಿ ಸಾಮಾನ್ಯ ಹಾಗೂ ಮಧ್ಯಂತರ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಪದೇ ಪದೇ ಜಾಮೀನು ನಿರಾಕರಣೆಗೊಂಡಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 4ರಂದು ನಡೆಯಲಿರುವ ಹೈಕೋರ್ಟ್ ವಿಚಾರಣೆಯಲ್ಲಿ ಪವಿತ್ರಾ ಗೌಡ ಅವರಿಗೆ ಮಧ್ಯಂತರ ಜಾಮೀನು ಸಿಗಬಹುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.