ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಇಬ್ಬರು ಸಾಕ್ಷಿಗಳು! ದರ್ಶನ್ ಕೊಂಚ ನಿರಾಳ
ಇದೀಗ ಪ್ರಕರಣದ ಇಬ್ಬರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಸಾಕ್ಷ್ಯ ನುಡಿಯುವ ಮೂಲಕ ಪ್ರಾಸಿಕ್ಯೂಷನ್‌ಗೆ ಹಿನ್ನಡೆ ಉಂಟುಮಾಡಿದ್ದಾರೆ. ದರ್ಶನ್ ಗೆ ಕೊಂಚ ಸಮಾಧಾನ ತಂದಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಮೊದಲಿಗೆ ಆರೋಪಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದರು. ಅದಾದ ಬಳಿಕ ಸಾಕ್ಷಿ ಪುನೀತ್ ತಿರುಚಿದ ಹೇಳಿಕೆಯನ್ನು ನೀಡಿದ್ದು, ಪೊಲೀಸರ ಮುಂದೆ ಈ ಹಿಂದೆ ದಾಖಲಿಸಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷಿ ನುಡಿದಿದ್ದ.
ಇದೀಗ ಪ್ರಕರಣದ ಇಬ್ಬರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಸಾಕ್ಷ್ಯ ನುಡಿಯುವ ಮೂಲಕ ಪ್ರಾಸಿಕ್ಯೂಷನ್‌ಗೆ ಹಿನ್ನಡೆ ಉಂಟುಮಾಡಿದ್ದಾರೆ. ದರ್ಶನ್ ಗೆ ಕೊಂಚ ಸಮಾಧಾನ ತಂದಿದೆ.
ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಹೇಳಿದ್ದೇನು? ಘಟನೆ ನಡೆದ ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಮತ್ತು ಪ್ರತ್ಯಕ್ಷ ಸಾಕ್ಷಿ ಕಿರಣ್, ಕೋರ್ಟ್ ನಲ್ಲಿ ಘಟನೆಯ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆಗೆ ಹಾಜರಾದ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್, ಅಂದು ಶೆಡ್‌ನಲ್ಲಿ ನಡೆದ ಘಟನೆಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ವಿಚಾರಣೆಯ ವೇಳೆ ಹತ್ತನೇ ಆರೋಪಿ ವಿನಯ್ ಅವರ ಪರಿಚಯವಿರುವುದಾಗಿ ಹಾಗೂ ಅವರ ಕೆಂಪು ಬಣ್ಣದ ಕಾರಿನ ಬಗ್ಗೆ ತಿಳಿದಿರುವುದಾಗಿ ಒಪ್ಪಿಕೊಂಡರೂ, ಕೊಲೆ ನಡೆದ ದಿನ ಆ ಕಾರು ಶೆಡ್‌ಗೆ ಬಂದಿತ್ತೇ ಎಂಬ ಪ್ರಶ್ನೆಗೆ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.
ನರೇಂದ್ರ ಸಿಂಗ್ ಅವರ ಈ ವರ್ತನೆಯಿಂದಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಈತನನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಹಿಂದಿ ಭಾಷೆಯಲ್ಲಿ ವಿಚಾರಣೆ ಮುಂದುವರಿಸಲು ಮತ್ತು ಭಾಷಾಂತರಕಾರರ ನೆರವು ಪಡೆಯಲು ಎಸ್‌ಪಿಪಿ ಕಾಲಾವಕಾಶ ಕೋರಿದ್ದರಿಂದ, ದರ್ಶನ್ ಪರ ವಕೀಲರ ಆಕ್ಷೇಪದ ನಡುವೆಯೂ ನ್ಯಾಯಾಲಯವು ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಪ್ರಮುಖ ಸಾಕ್ಷಿ ಕಿರಣ್ ಕೂಡ ಉಲ್ಟಾ! ಮತ್ತೊಂದೆಡೆ, 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪ್ರತ್ಯಕ್ಷ ಸಾಕ್ಷಿ ಕಿರಣ್ ಕೂಡ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ. 2024ರ ಜೂನ್ 8ರಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ತಾನು ಕೆಲಸ ಮಾಡಿದ್ದು, ಆ ದಿನ ಪಟ್ಟಣಗೆರೆ ಶೆಡ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ ಎಂದು ಕಿರಣ್ ಹೇಳಿದ್ದಾರೆ. ಪ್ರತಿದಿನ ಸುಮಾರು 50 ವಾಹನಗಳು ಬರುತ್ತಿದ್ದ ಶೆಡ್‌ಗೆ ಅಂದು 80 ವಾಹನಗಳು ಬಂದಿದ್ದವು ಎಂದಿರುವ ಅವರು, ನ್ಯಾಯಾಲಯದಲ್ಲಿದ್ದ ಅಥವಾ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದ ಯಾವುದೇ ಆರೋಪಿಗಳ ಪರಿಚಯ ತನಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಪೊಲೀಸರ ಮುಂದೆ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ನೇ ವಿಧಿಯಡಿ ತಾನು ನೀಡಿದ್ದ ಹೇಳಿಕೆಗಳೂ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.
ಕ್ರಾಸ್ ಎಕ್ಸಾಮಿನೇಷನ್ : ಈ ಹಿನ್ನೆಲೆಯಲ್ಲಿ ಕಿರಣ್ ಅವರ ಕ್ರಾಸ್ ಎಕ್ಸಾಮಿನೇಷನ್ ನಡೆಸಲು ಎಸ್‌ಪಿಪಿ ಸಮಯಾವಕಾಶ ಕೋರಿದ್ದು, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದೆ. ಈಗಾಗಲೇ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ತಾಯಿ, ಪುನೀತ್ ಹಾಗೂ ಯಶಸ್ ಸೂರ್ಯ ಸೇರಿದಂತೆ ಹಲವರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿರುವುದು ಪ್ರಕರಣದ ತನಿಖಾ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ.
ಇದೇ ವೇಳೆ, ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರು ತಮ್ಮ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ವಿಶೇಷ ಸೌಲಭ್ಯವಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಜೈಲಿನ ಆಸ್ಪತ್ರೆಯಲ್ಲಿ ತಮಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೂ ಈವರೆಗೆ ಕೇವಲ ಮೂರು ಬಾರಿ ಮಾತ್ರ ಫಿಸಿಯೋಥೆರಪಿ ನೀಡಲಾಗಿದ್ದು, ಇದರಿಂದ ನೋವು ಕಡಿಮೆಯಾಗಿಲ್ಲ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇದು ಗಂಭೀರ ಆರೋಗ್ಯದ ವಿಚಾರವಾಗಿರುವುದರಿಂದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿ, ಹೊರಗಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ದರ್ಶನ್ ಅವರ ವೈದ್ಯಕೀಯ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



