ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ Japan ಮಾದರಿ ಪರಿಹಾರ; ರಾಜ್ಯದಲ್ಲಿ ವಿಶೇಷ ಟ್ಯಾಕ್ಸಿ ಪರಿಚಯಿಸಲು ಡಿಕೆಶಿ ಚಿಂತನೆ..!
ಟ್ಯಾಕ್ಸಿ ಸೇವೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕೈಗೆಟುಕುವ ದರದ ಹೈಬ್ರಿಡ್ ವಿದ್ಯುತ್ ವಾಹನವು ರಾಜ್ಯದಲ್ಲಿ ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸಲು ಸಹಕಾರಿಯಾಗಲಿದೆ.

ಬೆಂಗಳೂರು: ಜಪಾನ್‌ನ ಅಧಿಕೃತ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜಪಾನ್‌ನ ಜನಪ್ರಿಯ ಟ್ಯಾಕ್ಸಿ ಮಾದರಿಯನ್ನು ರಾಜ್ಯದಲ್ಲೂ ಪರಿಚಯಿಸುವಂತೆ ಟೊಯೊಟಾ ಕಂಪನಿಗೆ ಮನವಿ ಮಾಡಿದ್ದಾರೆ.
ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಹಾಗೂ ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಅವಕಾಶಗಳನ್ನು ಪರಿಶೀಲಿಸುವಂತೆಯೂ ಟೊಯೊಟಾ ಸಂಸ್ಥೆಗೆ ಆಹ್ವಾನ ನೀಡಿದ್ದಾರೆ.
ಟ್ಯಾಕ್ಸಿ ಸೇವೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕೈಗೆಟುಕುವ ದರದ ಹೈಬ್ರಿಡ್ ವಿದ್ಯುತ್ ವಾಹನವು ರಾಜ್ಯದಲ್ಲಿ ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೊಯೊಟಾ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಕರ್ನಾಟಕದಲ್ಲಿ ಫ್ಲೆಕ್ಸ್ ಇಂಧನ ವಾಹನಗಳನ್ನು ಪರಿಚಯಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಪರ್ಯಾಯ ಇಂಧನಗಳ ಬಳಕೆ ಹೆಚ್ಚಿಸುವುದು ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಂತಹ ವಾಹನಗಳಿಂದ ಆಗಬಹುದಾದ ಪ್ರಯೋಜನಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಸೋಮವಾರ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಅಧಿಕಾರಿಗಳ ತಂಡ ಟೋಕಿಯೊದಿಂದ ನಾಗೋಯಾಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿ ಟೊಯೊಟಾ ಘಟಕಕ್ಕೆ ಭೇಟಿ ನೀಡಿತು. 1959ರಲ್ಲಿ ಸ್ಥಾಪನೆಯಾದ ಏಷ್ಯಾದ ಟೊಯೊಟಾದ ಮೊದಲ ಪ್ರಮುಖ ಪ್ರಯಾಣಿಕ ವಾಹನ ಉತ್ಪಾದನಾ ಘಟಕವಾದ ಮೊಟೊಮಾಚಿ ಘಟಕವನ್ನೂ ವೀಕ್ಷಿಸಿತು.
ಈ ಸಂದರ್ಭದಲ್ಲಿ ಘಟಕದ ಉತ್ಪಾದನಾ ಸಾಮರ್ಥ್ಯ, ತಯಾರಿಕಾ ಪ್ರಕ್ರಿಯೆಗಳು ಮತ್ತು ತಾಂತ್ರಿಕ ಪ್ರಗತಿಯ ಕುರಿತು ನಿಯೋಗಕ್ಕೆ ಮಾಹಿತಿ ನೀಡಲಾಯಿತು.
ಈ ಘಟಕದಲ್ಲಿ ಹೈಬ್ರಿಡ್ ವಿದ್ಯುತ್, ಬ್ಯಾಟರಿ ಚಾಲಿತ ವಿದ್ಯುತ್ ಹಾಗೂ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನ ಆಧಾರಿತ ವಾಹನಗಳು ಸೇರಿದಂತೆ ವಿವಿಧ ಮಾದರಿಯ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ.
ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ ರಾಜ್ಯವನ್ನು ಮುಂಚೂಣಿಗೆ ತರುವ ಕುರಿತು ಚರ್ಚೆ ನಡೆಯಿತು.
ಬೆಂಗಳೂರಿನ ಆಚೆಗೂ ಕೈಗಾರಿಕಾ ಅಭಿವೃದ್ಧಿಯನ್ನು ವಿಸ್ತರಿಸುವ ‘ಬೆಂಗಳೂರಿನಾಚೆಗೂ’ ಉಪಕ್ರಮಕ್ಕೆ ವಿಶೇಷ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ರಾಜಧಾನಿಯ ಹೊರಭಾಗದ ಜಿಲ್ಲೆಗಳಿಗೂ ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹೊಸ ಕೈಗಾರಿಕಾ ಅವಕಾಶಗಳನ್ನು ಸೃಷ್ಟಿಸುವುದು, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಸಾಧಿಸುವುದು ಮತ್ತು ಹೂಡಿಕೆಗೆ ನೆಚ್ಚಿನ ತಾಣವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ನಿಯೋಗದ ಸದಸ್ಯರು ಜಪಾನ್ ಅಧಿಕಾರಿಗಳ ಮುಂದೆ ವಿವರಿಸಿದರು.
ಇದೇ ವೇಳೆ ಶಿವಕುಮಾರ್ ಮತ್ತು ಪಾಟೀಲ್ ಅವರು ಟೊಯೊಟಾದ ಜಾಗತಿಕ ಕೌಶಲ ಅಭಿವೃದ್ಧಿ ಕಾರ್ಯಕ್ರಮದಡಿ ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಬಿಡದಿಯ ಟೊಯೊಟಾ ಘಟಕದ 20ಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳ ತರಬೇತಿ ಅನುಭವದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ, ಅಂತಾರಾಷ್ಟ್ರೀಯ ಮಟ್ಟದ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಾಂತ್ರಿಕ ಕೌಶಲ ಮತ್ತು ಪರಿಣತಿಯನ್ನು ಹೆಚ್ಚಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಇದು ಕರ್ನಾಟಕದ ಬೆಳೆಯುತ್ತಿರುವ ಉತ್ಪಾದನಾ ವಲಯಕ್ಕೆ ಕೊಡುಗೆ ನೀಡಲಿದೆ ಎಂದು ಹೇಳಿದರು.
ವೀಲ್‌ಚೇರ್ ಬಳಕೆದಾರರಿಗೆ ಅನುಕೂಲವಾಗುವ ವ್ಯವಸ್ಥೆ, ವಿಶಾಲವಾದ ಜಾರುವ ಬಾಗಿಲುಗಳು ಮತ್ತು ಹೆಚ್ಚು ಸ್ಥಳಾವಕಾಶ ಹೊಂದಿರುವ ಎಲ್‌ಪಿಜಿ-ಹೈಬ್ರಿಡ್ ವಾಹನವಾದ ಟೊಯೊಟಾದ ‘ಜೆಪಿಎನ್ ಟ್ಯಾಕ್ಸಿ’ಯನ್ನು ಕರ್ನಾಟಕದಲ್ಲಿ ಪರಿಚಯಿಸುವ ಬಗ್ಗೆಯೂ ಮುಖ್ಯಮಂತ್ರಿ ಆಸಕ್ತಿ ವ್ಯಕ್ತಪಡಿಸಿದರು. ಈ ವಾಹನವನ್ನು ರಾಜ್ಯದಲ್ಲೇ ಉತ್ಪಾದಿಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ನಗರ ಯೋಜನೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಜಪಾನ್ ಹೊಂದಿರುವ ಪರಿಣತಿಯು ಕರ್ನಾಟಕದಲ್ಲಿ ಹೆಚ್ಚು ಸಮರ್ಥ, ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಮತ್ತು ಸುಸ್ಥಿರ ನಗರಗಳನ್ನು ನಿರ್ಮಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದಲ್ಲದೆ, ಮೆಟ್ರೊ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತು ಕಟ್ಟಡಗಳನ್ನು ಭೂಗತ ಕಾಲುದಾರಿಗಳು ಹಾಗೂ ವಾಣಿಜ್ಯ ಮಳಿಗೆಗಳ ಮೂಲಕ ಸಂಪರ್ಕಿಸುವ ಸಕಾಯೆ ಭೂಗತ ಜಾಲ ವ್ಯವಸ್ಥೆಯನ್ನೂ ಶಿವಕುಮಾರ್ ವೀಕ್ಷಿಸಿದರು. ಇಂತಹ ಮಾದರಿಯು ಬೆಂಗಳೂರಿನ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



