

ಬೆಂಗಳೂರು: ರಾಜ್ಯದಲ್ಲಿ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಸಿಹಿಸುದ್ದಿ ನೀಡಿರುವ ಕರ್ನಾಟಕ ಸರ್ಕಾರ, ಓಲಾ (Ola), ಉಬರ್ (Uber) ಮತ್ತು ರ‍್ಯಾಪಿಡೋ (Rapido) ಸೇರಿದಂತೆ ಆ್ಯಪ್ ಆಧಾರಿತ ಎಲ್ಲಾ ಕ್ಯಾಬ್‌ಗಳಿಗೆ ಡಿಜಿಟಲ್ ದರ ಮೀಟರ್ (Digital Fare Meter) ಅಳವಡಿಸುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಇದರಿಂದ ಇನ್ನು ಮುಂದೆ ಸರ್ಕಾರ ನಿಗದಿಪಡಿಸಿದ ದರದ ಅನ್ವಯವೇ ಕ್ಯಾಬ್ ಚಾಲಕರು ಪ್ರಯಾಣಿಕರಿಂದ ಹಣ ಪಡೆಯಬೇಕಾಗುತ್ತದೆ.
ಇದಕ್ಕಾಗಿ ಅಗತ್ಯ ನಿಯಮಗಳು ಹಾಗೂ ಕಾನೂನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸೋಮವಾರ ತಿಳಿಸಿದ್ದಾರೆ.
ಹೊಸ ವರ್ಷದ ವೇಳೆಗೆ ರಾಜ್ಯಾದ್ಯಂತ ಅರ್ಧ ಹೆಲ್ಮೆಟ್‌ಗಳ ಬಳಕೆಯನ್ನು ನಿಷೇಧಿಸುವ ಕಾನೂನು ರೂಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳಿಂದ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಎದುರಿಸುತ್ತಿರುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಕಾರ್ಯನಿರ್ವಹಿಸುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿರುವ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಕಡ್ಡಾಯ ಮೀಟರ್ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಸಾವಿರಾರು ಚಾಲಕರು ಹಾಗೂ ವಾಹನ ಮಾಲೀಕರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ನಿಗದಿಪಡಿಸಿದ ಪ್ರಯಾಣ ದರದ ನಿಯಮ ಉಲ್ಲಂಘಿಸುವ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ದ್ವಿಚಕ್ರ ವಾಹನ ಸವಾರರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದನ್ನು ತಡೆಯಲು ದಂಡದ ಮೊತ್ತವನ್ನು ದುಪ್ಪಟ್ಟುಗೊಳಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5,000 ರೂ. ದಂಡ ವಿಧಿಸಲಾಗುವುದು. ಎರಡನೇ ಬಾರಿ ತಪ್ಪು ಮಾಡಿದರೆ 10,000 ರೂ. ದಂಡ ಪಾವತಿಸಬೇಕಾಗುತ್ತದೆ. ಮೂರನೇ ಬಾರಿಯೂ ನಿಯಮ ಉಲ್ಲಂಘಿಸಿದರೆ ವಾಹನವನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು. ಈ ಸಂಬಂಧ ಅಗತ್ಯ ಕಾನೂನು ರೂಪಿಸಲಾಗುತ್ತಿದ್ದು, ಅದನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಕಂಪನಿಯು ಕಾರ್ಯಾಚರಿಸುತ್ತಿರುವ ಹೊಸ ಗ್ರೀನ್ ಎಸ್‌ಎಂ ಟ್ಯಾಕ್ಸಿಗಳ ನೋಂದಣಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಇಂತಹ ಸುಮಾರು 100 ಟ್ಯಾಕ್ಸಿಗಳು ನೋಂದಣಿಯಾಗಿವೆ.
ಮುಂದಿನ ದಿನಗಳಲ್ಲಿ ಈ ಕಂಪನಿಯ ಟ್ಯಾಕ್ಸಿಗಳ ನೋಂದಣಿಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ತಿಳಿಸಿದರು.
ಇದೇ ವೇಳೆ, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಬಾಕಿ ವೇತನ ಪಾವತಿಗಾಗಿ ಸರ್ಕಾರ 280 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಒಟ್ಟು 1,200 ಕೋಟಿ ರೂ. ವೇತನ ಬಾಕಿ ಉಳಿದಿದ್ದು, ಈ ಹಿಂದೆ ಸರ್ಕಾರ ಎರಡು ಕಂತುಗಳಲ್ಲಿ ಕ್ರಮವಾಗಿ 450 ಕೋಟಿ ರೂ. ಮತ್ತು 170 ಕೋಟಿ ರೂ. ಬಿಡುಗಡೆ ಮಾಡಿತ್ತು. ಉಳಿದ 300 ಕೋಟಿ ರೂ. ಅನುದಾನವನ್ನು ಲಭ್ಯವಿರುವ ಹಣಕಾಸಿನ ಸಂಪನ್ಮೂಲಗಳನ್ನು ಆಧರಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.