ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ನಿಲುವು ಸಡಿಲಗೊಳಿಸಿದ ಕಾಂಗ್ರೆಸ್; 75-80 ಸ್ಥಾನಗಳಿಗೆ ಸಮ್ಮತಿ!
ಡಿಸೆಂಬರ್ ಮೊದಲ ವಾರದಲ್ಲಿ ಯಾವ ಪಕ್ಷವು ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸುವ ಸಾಧ್ಯತಯಿದೆ ಎಂದು ಮೂಲಗಳು ಹೇಳಿವೆ.

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ತಮ್ಮ ಮೈತ್ರಿಯನ್ನು ಅಂತಿಮಗೊಳಿಸುವ ಹಾಗೂ ಸ್ಥಾನ ಹಂಚಿಕೆಯ ಅಂತಿಮ ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ ಎಂದು ಮೊದಲ ಸುತ್ತಿನ ಮಾತುಕತೆಗಳ ನಂತರ ಉಭಯ ಪಕ್ಷಗಳ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಹಿಂದೆಯೇ ಒಂದು ನಿರ್ಧಾರಕ್ಕೆ ಬಂದಿದ್ದು, ಅದರ ಅನ್ವಯ ಕಾಂಗ್ರೆಸ್ 75 ರಿಂದ 80 ಸ್ಥಾನಗಳಿಗೆ ಸಮ್ಮತಿಸುವ ಸಾಧ್ಯತೆಯಿದೆ ಎಂದು ಮೂಲಗಳು 'ಟಿಎನ್‌ಐಇ' ಗೆ ತಿಳಿಸಿವೆ. ಡಿಸೆಂಬರ್ ಮೊದಲ ವಾರದಲ್ಲಿ ಯಾವ ಪಕ್ಷವು ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸುವ ಸಾಧ್ಯತಯಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅಖಿಲೇಶ್ ಯಾದವ್ ಅವರು ಈ ಒಪ್ಪಂದಕ್ಕೆ ಅಂತಿಮ ರೂಪ ನೀಡಲಿದ್ದಾರೆ. ಕೇವಲ 20 ನಿಮಿಷಗಳ ಕಾಲ ನಡೆದ ಸೋಮವಾರದ ಸಭೆಯು, ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಅವರ ನಿವಾಸದಲ್ಲಿ ನಡೆಯಿತು.
ಎಸ್‌ಪಿಯ ಭದ್ರಕೋಟೆಗಳಾದ ಇಟಾವಾ ಮತ್ತು ಮೈನ್‌ಪುರಿಯನ್ನು ಹೊರತುಪಡಿಸಿ, ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಸ್ಥಾನವನ್ನು ಕಾಂಗ್ರೆಸ್ ನಾಯಕರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
2024ರ ಲೋಕಸಭಾ ಚುನಾವಣೆಯಲ್ಲಿನ ತಮ್ಮ ಪ್ರದರ್ಶನದ ಆಧಾರದ ಮೇಲೆ, ಅಮೇಠಿ ಮತ್ತು ರಾಯ್ ಬರೇಲಿಯ ಎಲ್ಲಾ ಸ್ಥಾನಗಳಿಗೆ ಕಾಂಗ್ರೆಸ್ ಹಕ್ಕು ಮಂಡಿಸಿದೆ. ಕಾಂಗ್ರೆಸ್ ಆರಂಭದಲ್ಲಿ 181 ಸ್ಥಾನಗಳನ್ನು ಕೋರಿತ್ತು ಎಂದು ಅಖಿಲೇಶ್ ಯಾದವ್ ಈ ಹಿಂದೆ ಮಾಧ್ಯಮ ಸಮಾವೇಶವೊಂದರಲ್ಲಿ ಒಪ್ಪಿಕೊಂಡಿದ್ದರು.
ಪಕ್ಷದ ಮಾತುಕತಾ ಸಮಿತಿಯ ನೇತೃತ್ವ ವಹಿಸಿರುವ ಎಸ್‌ಪಿ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ, ಎರಡೂ ಕಡೆಯವರು "ಒಬ್ಬರ ಅಭಿಪ್ರಾಯಗಳನ್ನು ಇನ್ನೊಬ್ಬರು ಆಲಿಸಿದ್ದಾರೆ" ಎಂದು ಹೇಳಿದರು. "ಮುಂದಿನ ಎರಡು-ಮೂರು ದಿನಗಳಲ್ಲಿ ಮೈತ್ರಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ, ಮಂಗಳವಾರ ಉಭಯ ಪಕ್ಷಗಳ ನಾಯಕರು ಮತ್ತೊಮ್ಮೆ ಸಭೆ ಸೇರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



