₹16,000 ಕೋಟಿ ಗ್ರಾಮೀಣ ಪ್ಯಾಕೇಜ್: ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್: ಸಿಎಂ ಎಚ್ಚರಿಕೆ..!

ಗ್ರಾಮೀಣ ಪ್ರದೇಶಗಳ ಸ್ವರೂಪ ಬದಲಿಸುವ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ₹16,000 ಕೋಟಿ ಮೀಸಲಿಡಲಾಗಿದೆ.
DCM D.K. Shivakumar
ಡಿಕೆ.ಶಿವಕುಮಾರ್
Updated on: 

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮೀಸಲಿಟ್ಟಿರುವ ₹16,000 ಕೋಟಿ ಅನುದಾನ ಗ್ರಾಮಗಳ ಚಿತ್ರಣ ಬದಲಿಸಿ ಜನರ ಬದುಕಿನ ಗುಣಮಟ್ಟ ಸುಧಾರಿಸುವ ಸಲುವಾಗಿ ಬಿಡುಗಡೆ ಮಾಡಲಾಗಿದೆಯೇ ಹೊರತು, ಗುತ್ತಿಗೆದಾರರ ಜೇಬು ತುಂಬಿಸಲು ಅಲ್ಲ, ಈ ಅನುದಾನದಲ್ಲಿ ಒಂದು ರೂಪಾಯಿ ದುರ್ಬಳಕೆಯಾದರೂ ಸುಮ್ಮನಿರಲ್ಲ ಎಂದು ಗುತ್ತಿಗೆದಾರರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಸ್ವರೂಪ ಬದಲಿಸುವ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ₹16,000 ಕೋಟಿ ಮೀಸಲಿಡಲಾಗಿದೆ. ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದರೂ ಮತ್ತೆ ಕಾಮಗಾರಿಗೆ ಹಣ ಖರ್ಚು ಮಾಡುವುದು, ಯಾವುದೇ ಕಾಮಗಾರಿ ನಡೆಸದೆಯೇ ಬಿಲ್‌ಗಳನ್ನು ಸೃಷ್ಟಿಸುವುದು ಸೇರಿದಂತೆ ಅನುದಾನದ ದುರುಪಯೋಗದ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿವೆ. ಈ ಅನುದಾನದಲ್ಲಿ ಒಂದು ರೂಪಾಯಿಯನ್ನೂ ದುರ್ಬಳಕೆ ಮಾಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದರಲ್ಲಿ ₹10,000 ಕೋಟಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ 15,000 ಕಿ.ಮೀ. ರಸ್ತೆ ಅಭಿವೃದ್ಧಿಗೆ ಹಾಗೂ ಉಳಿದ ₹6,000 ಕೋಟಿಯನ್ನು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ರಸ್ತೆ ಡಾಂಬರೀಕರಣ, ಜಲ್ಲಿ ರಸ್ತೆಗಳ ಉನ್ನತೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕಾಮಗಾರಿಯ ಸ್ವರೂಪಕ್ಕೆ ಅನುಗುಣವಾಗಿ ಪ್ರತಿ ಕಿ.ಮೀ. ರಸ್ತೆಗೆ ₹38 ಲಕ್ಷದಿಂದ ₹70 ಲಕ್ಷದವರೆಗೆ ವೆಚ್ಚವಾಗಲಿದೆ. ಇದಲ್ಲದೆ, ಪ್ರಗತಿ ಪಥ ಯೋಜನೆಯಡಿ ಈಗಾಗಲೇ ಹೆಚ್ಚುವರಿಯಾಗಿ ₹5,000 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಕಾಮಗಾರಿಗಳಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಕಾಮಗಾರಿ ಆರಂಭಿಸುವ ಮೊದಲು ಹಾಗೂ ಪೂರ್ಣಗೊಂಡ ಬಳಿಕ ಛಾಯಾಚಿತ್ರ ಮತ್ತು ವಿಡಿಯೊಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ನಿರ್ದೇಶಿಸಿದರು.

ಕಾಮಗಾರಿ ನಡೆಯುವ ಸ್ಥಳದ ನಿಖರ ಭೌಗೋಳಿಕ ನಿರ್ದೇಶಾಂಕಗಳನ್ನೂ ದಾಖಲಿಸಬೇಕು. ಟೆಂಡರ್ ಪ್ರಕ್ರಿಯೆ ಪಾಲಿಸದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳ ಡ್ಯಾಶ್‌ಬೋರ್ಡ್ ಮೂಲಕ ಕಾಮಗಾರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಕಾಮಗಾರಿಗಳ ವಿವರಗಳನ್ನು ಹಂಚಿಕೊಳ್ಳಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಛಾಯಾಚಿತ್ರಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿಯೂ ಪ್ರಕಟಿಸಬೇಕು ಎಂದು ಸೂಚಿಸಿದರು.

DCM D.K. Shivakumar
ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ರಾಜ್ಯದಲ್ಲಿ 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಸುಮಾರು 9,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಬಡವರಿಗೆ ನೀಡುವ ನಿವೇಶನಗಳ ಕನಿಷ್ಠ ಅಳತೆಯನ್ನು 20x30 ಅಡಿಯಿಂದ 30x40 ಅಡಿಗೆ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಮನೆ ಅಥವಾ ನಿವೇಶನ ಇಲ್ಲದ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜಕೀಯ ಒತ್ತಡ ಅಥವಾ ಭಯಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ಶಾಸಕರು ಅಥವಾ ಸಚಿವರಿಂದ ಅನಗತ್ಯ ಒತ್ತಡ ಬಂದರೆ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗೌಪ್ಯವಾಗಿ ಮಾಹಿತಿ ನೀಡಬಹುದು ಎಂದರು.

ಜಾತಿಗಿಂತ ಪ್ರಾಮಾಣಿಕತೆ, ಅರ್ಹತೆ ಮತ್ತು ಕಾಮಗಾರಿಗಳ ಗುಣಮಟ್ಟಕ್ಕೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಸಚಿವರು ತಿಂಗಳಿಗೆ ಎರಡು ಬಾರಿ ತಾಲೂಕುಗಳಿಗೆ ಭೇಟಿ ನೀಡಬೇಕು. ಶಾಸಕರು ಹೋಬಳಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ಜನರ ಅಹವಾಲುಗಳನ್ನು ಆಲಿಸಬೇಕು ಎಂದು ನಿರ್ದೇಶಿಸಿದರು. ತಾವು ಪ್ರತಿ ಶನಿವಾರ ಒಂದು ಪ್ರಜಾಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಒತ್ತುವರಿಯಾಗಿರುವ 11,671 ಎಕರೆ ಕೆರೆ ಭೂಮಿ ತೆರವಿಗೆ ಕ್ರಮ: ಖಂಡ್ರೆ

ಇದೇ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಅವರು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 4,828 ಕೆರೆಗಳ ಒಟ್ಟು 11,671 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 32,504 ಕೆರೆಗಳಿದ್ದು, ಈ ಪೈಕಿ 11,498 ಕೆರೆಗಳು ಒತ್ತುವರಿಗೆ ಒಳಗಾಗಿವೆ. ಒಟ್ಟು 26,873 ಎಕರೆ ಪ್ರದೇಶ ಒತ್ತುವರಿಯಾಗಿದೆ. ಈಗಾಗಲೇ 6,670 ಕೆರೆಗಳ ವ್ಯಾಪ್ತಿಯಲ್ಲಿದ್ದ 15,201 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X